AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ನ. 16ರಿಂದ 13ನೇ ರೈಲು ಸೇರ್ಪಡೆ; ಪೀಕ್ ಅವರ್‌ನಲ್ಲಿ 5.30 ನಿಮಿಷಕ್ಕೊಂದು ಮೆಟ್ರೋ ಸಂಚಾರ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನವೆಂಬರ್ 16ರಿಂದ 13ನೇ ರೈಲು ಸೇವೆಗೆ ಲಭ್ಯವಾಗಲಿದೆ. ಇದರಿಂದ ಆರ್.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಯಾಣಿಕರ ಕಾಯುವ ಸಮಯ ಪೀಕ್ ಅವರ್‌ನಲ್ಲಿ 6 ನಿಮಿಷದಿಂದ 5.30 ನಿಮಿಷಕ್ಕೆ ಇಳಿಯಲಿದೆ. ಬಿಎಂಆರ್‌ಸಿಎಲ್‌ನ ಈ ನಿರ್ಧಾರದಿಂದ ಬೆಂಗಳೂರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳ ಪಿಂಕ್ ಲೈನ್ ಮೆಟ್ರೋ ಪ್ರಯಾಣವೂ ಮೆಟ್ರೋ ವಿಸ್ತರಣೆಗೆ ಒತ್ತು ನೀಡಿದೆ.

ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ನ. 16ರಿಂದ 13ನೇ ರೈಲು ಸೇರ್ಪಡೆ; ಪೀಕ್ ಅವರ್‌ನಲ್ಲಿ 5.30 ನಿಮಿಷಕ್ಕೊಂದು ಮೆಟ್ರೋ ಸಂಚಾರ
ನಮ್ಮ ಮೆಟ್ರೋ Image Credit source: Google
ಕಿರಣ್​ ಸೂರ್ಯ
| Edited By: |

Updated on:Nov 14, 2026 | 8:57 PM

Share

ಬೆಂಗಳೂರು, ನ.14: ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್​​​ ನಂತರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಳದಿ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿ ನೀಡಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಯೆಲ್ಲೋ ಲೈನ್‌ಗೆ ನವೆಂಬರ್ 16ರ ಸೋಮವಾರದಿಂದ ಮತ್ತೊಂದು ಹೊಸ ರೈಲು (13ನೇ ರೈಲು) ಸೇರ್ಪಡೆಯಾಗಲಿದೆ. ಇದರಿಂದಾಗಿ ಪ್ರಯಾಣಿಕರ ಕಾಯುವ ಸಮಯ ಕಡಿಮೆಯಾಗಲಿದ್ದು, ರೈಲು ಆವರ್ತನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸದ್ಯ ಆರ್.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ಯೆಲ್ಲೋ ಲೈನ್ ಮಾರ್ಗದಲ್ಲಿ 12 ರೈಲುಗಳು ಸಂಚರಿಸುತ್ತಿದ್ದು, ಸೋಮವಾರದಿಂದ ಒಟ್ಟು 13 ರೈಲುಗಳು ಸೇವೆ ನೀಡಲಿವೆ.

ಪೀಕ್ ಅವರ್‌ನಲ್ಲಿ 5.30 ನಿಮಿಷಕ್ಕೊಂದು ರೈಲು:

ಸೋಮವಾರದಿಂದ ಶುಕ್ರವಾರದವರೆಗೆ ಪೀಕ್ ಅವರ್‌ನಲ್ಲಿ ಈವರೆಗೆ ಪ್ರತಿ 6 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸುತ್ತಿದ್ದವು. ಆದರೆ 13ನೇ ರೈಲು ಸೇರ್ಪಡೆಯಾಗುವುದರಿಂದ ನ.16ರಿಂದ ಪೀಕ್ ಅವರ್‌ನಲ್ಲಿ ಪ್ರತಿ 5.30 ನಿಮಿಷಕ್ಕೊಂದರಂತೆ (5 ನಿಮಿಷ 30 ಸೆಕೆಂಡ್) ಮೆಟ್ರೋ ರೈಲು ಸಂಚರಿಸಲಿದೆ. ನಾನ್-ಪೀಕ್ ಅವರ್‌ನಲ್ಲಿ ಪ್ರತಿ 10 ನಿಮಿಷಕ್ಕೊಂದರಂತೆ ರೈಲು ಸೇವೆ ಮುಂದುವರಿಯಲಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳಲ್ಲಿ ಎಂದಿನಂತೆ ದಿನವಿಡೀ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​:

ವಾರದ ಯಾವುದೇ ದಿನಗಳಲ್ಲಿ ಹಳದಿ ಮಾರ್ಗದ ಕೊನೆಯ ನಿಲ್ದಾಣಗಳಾದ ಆರ್.ವಿ. ರಸ್ತೆ (R.V. Road) ಮತ್ತು ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪಿಂಕ್​​ ಲೈನ್ ಮೆಟ್ರೋದಲ್ಲಿ ಡಿಕೆ ಶಿವಕುಮಾರ್​ ಪ್ರಯಾಣ: ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಪ್ರಯಾಣಿಕರು

ಪಿಂಕ್ ಲೈನ್ ಮೆಟ್ರೋದಲ್ಲಿ ಪ್ರಯಾಣಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್

ಒಂದೆಡೆ ಯೆಲ್ಲೋ ಲೈನ್ ಸಾಮರ್ಥ್ಯ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮ್ಮ ಮೆಟ್ರೋದ ಪಿಂಕ್ ಲೈನ್ (Pink Line) ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ಸದ್ದುಗುಂಟೆ ಪಾಳ್ಯದವರೆಗೆ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದರು. ಸಾಮಾನ್ಯ ಪ್ರಯಾಣಿಕರಂತೆ ಮೆಟ್ರೋದಲ್ಲಿ ಸಂಚರಿಸಿದ್ದ ಸಿಎಂ, ಸಹಪ್ರಯಾಣಿಕರೊಂದಿಗೆ ಆತ್ಮೀಯವಾಗಿ ಬೆರೆತು ಸೆಲ್ಫಿಗಳಿಗೆ ಪೋಸ್ ನೀಡುವ ಮೂಲಕ ಬೆಂಗಳೂರು ಮೆಟ್ರೋ ವಿಸ್ತರಣೆ ಮತ್ತು ಸೇವೆಗೆ ಹೊಸ ವೇಗ ನೀಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:55 pm, Sat, 14 November 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More