AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಪ್ರಕರಣದಲ್ಲಿ ಬೇಕಾಗಿದ್ದ ಉಗ್ರ ಜುನೈದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ: ಎನ್ಐಎ ಘೋಷಣೆ

ಲಷ್ಕರ್ ಎ ತೊಯ್ಬಾ ಉಗ್ರ ಜುನೈದ್ ಅಹ್ಮದ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿದೆ. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಪ್ರಕರಣದಲ್ಲಿ ಎನ್​ಐಎಗೆ ಬೇಕಾಗಿರುವ ಜುನೈದ್, ಹಲವು ಹೆಸರುಗಳಿಂದ ಗುರುತಿಸಿಕೊಂಡಿದ್ದಾನೆ. ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದ್ದು, ಆತನ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಎನ್​ಐಎ ತಿಳಿಸಿದೆ.

ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಪ್ರಕರಣದಲ್ಲಿ ಬೇಕಾಗಿದ್ದ ಉಗ್ರ ಜುನೈದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ: ಎನ್ಐಎ ಘೋಷಣೆ
ಉಗ್ರ ಜುನೈದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ: ಎನ್ಐಎ ಘೋಷಣೆImage Credit source: TV9 Network
ಗಣಪತಿ ಶರ್ಮಾ
|

Updated on: Feb 21, 2026 | 1:40 PM

Share

ಬೆಂಗಳೂರು, ಫೆಬ್ರವರಿ 21: ಲಷ್ಕರ್ ಎ ತೊಯ್ಬಾ (LeT) ಉಗ್ರ ಜುನೈದ್ ಅಹ್ಮದ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. 33 ವರ್ಷ ವಯಸ್ಸಿನ ಉಗ್ರ ಜುನೈದ್ ಅಹ್ಮದ್ ಘೋಷಿತ ಅಪರಾಧಿಯಾಗಿದ್ದು, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಎನ್​ಐಎಗೆ ಬೇಕಾಗಿದ್ದಾನೆ. ಜುಲೈ 2023 ರಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ವಿವಿಧ ಹೆಸರುಗಳನ್ನಿಟ್ಟುಕೊಂಡು ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಮಲ್ಲಿಗೆ ಲೇಔಟ್​​ನಲ್ಲಿ ವಾಸಿಸುತ್ತಿದ್ದ.

ಜುನೈದ್ ಅಹ್ಮದ್ ಬಂಧನಕ್ಕೆ ನೆರವಾಗುವಂಥ ಯಾವುದೇ ಮಾಹಿತಿಯನ್ನು ನೀಡುವವರಿಗೆ ಬಹುಮಾನ ನೀಡಲಾಗುವುದು. ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಎನ್​ಐಎ ಹೇಳಿದೆ. ಮಾಹಿತಿಯನ್ನು 080-29510900 ಅಥವಾ 8904241100 ಗೆ ಕರೆ ಮಾಡಿ ಹಂಚಿಕೊಳ್ಳಬಹುದು. ಜುನೈದ್ ಅಹ್ಮದ್ ಎಂಬ ಉಗ್ರ ಜುನೈದ್, ಜೆಡಿ ಜಮ್ಶೀದಾ, ಜಾನ್, ಸುಹಾನಾ, ಡಿಜೆ ರಿಟ್ಜ್, ಜಮೀಲಾ ಮತ್ತು ಜನ್ನು ಎಂಬ ಹೆಸರುಗಳಿಂದ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬೆಂಗಳೂರಿನ ಪರಪ್ಪನ ಅಗಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ 2023 ರ ಜುಲೈನಲ್ಲಿ ಐವರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ್ದರು. ಅವರನ್ನು ಎಲ್‌ಇಟಿ ಉಗ್ರನೊಬ್ಬ ನಗರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸೆಳೆದುಕೊಂಡಿದ್ದು ಬಯಲಾಗಿತ್ತು. ಆರೋಪಿಗಳಿಂದ ಏಳು ದೇಶೀಯ ಪಿಸ್ತೂಲ್‌ಗಳು, 45 ಜೀವಂತ ಸುತ್ತುಗಳು, ವಾಕಿ-ಟಾಕಿ ಸೆಟ್‌ಗಳು, ಒಂದು ಚಾಕು ಮತ್ತು 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಭಯೋತ್ಪಾದ ಚಟುವಟಿಕೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರನ್ನು ಬಂಧಿಸಲಾಗಿತ್ತು. ಎಲ್‌ಇಟಿ ಕಾರ್ಯಕರ್ತ ಟಿ ನಸೀರ್ ಅಲಿಯಾಸ್ ಉಮ್ಮರ್ ಹಾಜಿ ಮತ್ತು ಜುನೈದ್ ಅಹ್ಮದ್ ಜೊತೆಗೆ ಐವರು ಶಂಕಿತ ಭಯೋತ್ಪಾದಕ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಜುನೈದ್ ಅಹ್ಮದ್ ಜೊತೆಗೆ ಬಂಧಿತರಾದ ಐವರು 2017 ರಲ್ಲಿ ಆರ್‌ಟಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ನೂರ್ ಅಹ್ಮದ್‌ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 18 ತಿಂಗಳ ಕಾಲ ವಿಚಾರಣಾಧೀನ ಕೈದಿಗಳಾಗಿ ಜೈಲು ಶಿಕ್ಷೆ ಅನುಭವಿಸಿದ ನಂತರ, ಜುನೈದ್ ಅಹ್ಮದ್ ಜೊತೆಗೆ ಬಂಧಿಸಲಾದ ಐವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಬಿಡುಗಡೆಯಾದ ನಂತರ ಐವರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.

ಜುನೈದ್ ಅಹ್ಮದ್ 2020 ರಲ್ಲಿ ಮತ್ತೆ ರಕ್ತಚಂದನ ಕಳ್ಳಸಾಗಣೆಗಾಗಿ ಬಂಧನಕ್ಕೊಳಗಾಗಿ ಮತ್ತೆ ಐದು ತಿಂಗಳು ಅದೇ ಜೈಲಿನಲ್ಲಿದ್ದನು. 2021 ರಲ್ಲಿ ಡಕಾಯಿತಿ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದ. ಜಾಮೀನಿನ ಮೇಲೆ ಹೊರಬಂದ ನಂತರ, ದೇಶ ಬಿಟ್ಟು ಓಡಿಹೋಗಿ ಪ್ರಸ್ತುತ ಮಧ್ಯಪ್ರಾಚ್ಯ ದೇಶದಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದ ಮೂವರು ಶಂಕಿತ ಉಗ್ರರನ್ನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಉಗ್ರ ಟಿ. ನಾಸಿರ್​​ಗೆ ಮೊಬೈಲ್ ಮತ್ತು ಹಣವನ್ನು ಒದಗಿಸಿದ ಆರೋಪದ ಮೇಲೆ ಜುನೈದ್ ತಾಯಿ ಅನೀಸ್ ಫಾತಿಮಾರನ್ನು ಎನ್​ಐಎ ಬಂಧಿಸಿತ್ತು. ಫಾತಿಮಾ ಜೊತೆಗೆ ನಗರ ಸಶಸ್ತ್ರ ಮೀಸಲು-ದಕ್ಷಿಣದ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಚಂದ್ ಪಾಷಾ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್ ಅವರನ್ನು ಸಹ ಬಂಧಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ