ಪ್ರಜಾಸೇವಾ ಅಭಿಯಾನ: ಕಂದಾಯ ಇಲಾಖೆಯಲ್ಲೇ ಅತಿ ಹೆಚ್ಚು ಅಹವಾಲು; 6 ದಿನದಲ್ಲಿ 13,872 ಅರ್ಜಿಗಳ ವಿಲೇವಾರಿ

ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ ಘೋಷ್ಯವಾಕ್ಯದಡಿ ಜಾರಿಗೆ ಬಂದಿರುವ ಪ್ರಜಾಸೇವಾ ಅಭಿಯಾನಕ್ಕೆ ರಾಜ್ಯದ ಜನರಿಂದ ದಾಖಲೆ ಮಟ್ಟದಲ್ಲಿ ಸ್ಪಂದನೆ ದೊರೆತಿದೆ. ಒಂದೇ ದಿನ 26,387 ಅಹವಾಲುಗಳನ್ನು ಸ್ವೀಕರಿಸಿ, 6 ದಿನಗಳಲ್ಲಿ ಶೇ.52.6% ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.

ಪ್ರಜಾಸೇವಾ ಅಭಿಯಾನ: ಕಂದಾಯ ಇಲಾಖೆಯಲ್ಲೇ ಅತಿ ಹೆಚ್ಚು ಅಹವಾಲು; 6 ದಿನದಲ್ಲಿ 13,872 ಅರ್ಜಿಗಳ ವಿಲೇವಾರಿ
ಪ್ರಜಾಸೇವಾ
Image Credit source: x.CMofKarnataka
Edited By:

Updated on: Sep 11, 2026 | 6:58 PM

ಬೆಂಗಳೂರು, ಸೆಪ್ಟೆಂಬರ್​ 11: ರಾಜ್ಯ ಸರ್ಕಾರ ಜನರ ಸಮಸ್ಯೆ ಅಲಿಸುವುದಕ್ಕೆ ಪ್ರಜಾಸೇವೆ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್​​ ಈ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಸದ್ಯ ಈ ಯೋಜನೆಗೆ ರಾಜ್ಯದ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ‘ಒಂದೇ ದಿನದಲ್ಲಿ ಬರೋಬ್ಬರಿ 26,387 ಅಹವಾಲುಗಳು ಸ್ವೀಕಾರವಾಗಿದ್ದು, ಕೇವಲ ಆರೇ ದಿನಗಳಲ್ಲಿ ಶೇಕಡಾ 52.6 ರಷ್ಟು ಅಂದರೆ 13,872 ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ’ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದಾರೆ.

ಕಂದಾಯ ಇಲಾಖೆಯಲ್ಲೇ ಅತಿ ಹೆಚ್ಚು ಸಮಸ್ಯೆಗಳು

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಷ ಗುಪ್ತಾ, ‘ಸ್ವೀಕೃತವಾದ ಅಹವಾಲುಗಳ ಪೈಕಿ ಐದು ಇಲಾಖೆಗಳಲ್ಲಿ ಹೆಚ್ಚಾಗಿ ಸಮಸ್ಯೆಗಳು ಕಂಡುಬಂದಿದ್ದು, ಒಟ್ಟು ದೂರುಗಳಲ್ಲಿ ಶೇಕಡಾ 35 ರಷ್ಟು ಅಂದರೆ ಅತಿ ಹೆಚ್ಚು 9,260 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ಇದರಲ್ಲಿ ವೃದ್ಧಾಪ್ಯ ವೇತನಕ್ಕಾಗಿ 2,087, ವಸತಿ ನಿವೇಶನಕ್ಕಾಗಿ 2,071 ಹಾಗೂ ಭೂದಾಖಲೆ ಮತ್ತು ಆರ್‌ಟಿಸಿ ಪಹಣಿಗೆ ಸಂಬಂಧಿಸಿದಂತೆ 1,567 ಅರ್ಜಿಗಳು ಸಲ್ಲಿಕೆಯಾಗಿವೆ. ಯಾವುದೇ ಅರ್ಜಿಗಳು ತೀರಾ ಬಾಕಿ ಉಳಿದಿಲ್ಲ. ಉಳಿದಿರುವ 12,514 ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ತ್ವರಿತ ವಿಲೇವಾರಿಗೆ ಅಧಿಕಾರಿಗಳ ವೇಳಾಪಟ್ಟಿ ನಿಗದಿ

‘ಅರ್ಜಿಗಳ ತ್ವರಿತ ವಿಲೇವಾರಿ ಹಾಗೂ ನಿರಂತರ ಮಾಹಿತಿಗಾಗಿ ಪ್ರತಿ ಬುಧವಾರ ಡಿಸಿ, ಎಸಿ ಮತ್ತು ತಹಶೀಲ್ದಾರ್ ಹಂತದಲ್ಲಿ ಸಮಯ ನಿಗದಿಪಡಿಸಲಾಗಿದೆ. ಬೆಳಿಗ್ಗೆ 9 ರಿಂದ 11 ರವರೆಗೆ ತಹಶೀಲ್ದಾರ್ ಕಚೇರಿ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಎಸಿ ಹಂತದಲ್ಲಿ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಜಿಲ್ಲಾಧಿಕಾರಿ ಹಂತದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ’.

ಇದನ್ನೂ ಓದಿ: ಪ್ರಜಾಸೇವೆ ಅಭಿಯಾನದ ಮೊದಲ ಸಭೆಯಲ್ಲೇ 25 ಸಾವಿರಕ್ಕೂ ಹೆಚ್ಚು ದೂರುಗಳು!

‘ಅರ್ಜಿದಾರರು ನಿಗದಿತ ಸಮಯದಲ್ಲಿ ಭೇಟಿಯಾಗಿ ತಮ್ಮ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಲು ಮತ್ತು ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ಅಕ್ಟೋಬರ್ 2 ರಂದು ನಮ್ಮ ಸೇವಾ ಆ್ಯಪ್ ಲೋಕಾರ್ಪಣೆ

‘ಇನ್ನು ಸಾರ್ವಜನಿಕರು ಸುಲಭವಾಗಿ ದೂರುಗಳನ್ನು ಸಲ್ಲಿಸಲು ಹಾಗೂ ಶೀಘ್ರ ಪರಿಹಾರ ಪಡೆಯಲು ಅನುಕೂಲವಾಗುವಂತೆ ಪ್ರಜಾಸೇವಾ ಇಲಾಖೆಯಿಂದ ‘ನಮ್ಮ ಸೇವಾ’ ಆ್ಯಪ್ ರೂಪಿಸಲಾಗಿದೆ. ಅಕ್ಟೋಬರ್ 2 ರಂದು ಅಧಿಕೃತವಾಗಿ ಆ್ಯಪ್​​ ಬಿಡುಗಡೆ ಮಾಡಲಾಗುವುದು’ ಎಂದು ಹರ್ಷ ಗುಪ್ತಾ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us