Pulakeshinagar Election Results: ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್, ಬಿಎಸ್‌ಪಿ ನಡುವೆ ನೇರ ಪೈಪೋಟಿ
Pulakeshinagar Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಪುಲಿಕೇಶಿನಗರ ಕ್ಷೇತ್ರದಲ್ಲಿ ಶೇ. 51.09ರಷ್ಟು ಮತದಾನವಾಗಿತ್ತು.

Pulakeshinagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಪುಲಿಕೇಶಿನಗರ ಕ್ಷೇತ್ರದಲ್ಲಿ (Pulakeshinagar Assembly Elections 2023) ಶೇ. 51.09ರಷ್ಟು ಮತದಾನವಾಗಿತ್ತು. ಯಲಹಂಕ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಪುಲಕೇಶಿನಗರ 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ, ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. ಅವಿಭಜಿತ ಯಲಹಂಕ ಕ್ಷೇತ್ರವನ್ನು ಬೂಸಾ ಚಳವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ ಪ್ರತಿನಿಧಿಸಿದ್ದರು. ಅದಾದ ಬಳಿಕ 2008ರಲ್ಲಿ ಕಾಂಗ್ರೆಸ್‌ನಿಂದ ಪ್ರಸನ್ನ ಕುಮಾರ್ ಗೆದ್ದಿದ್ದರೆ, 2013 ಮತ್ತು 2018ರಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಸತತವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರು ಬಿಎಸ್‌ಪಿಯಿಂದ ಸ್ಪರ್ಧಿಸಿದ್ದಾರೆ.
ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಾಬಲ್ಯ ಜಾಸ್ತಿ ಇದ್ದು, ಹಿಂದಿ, ಉರ್ದು, ತಮಿಳು, ಇತ್ತೀಚೆಗೆ ಈಶಾನ್ಯ ಭಾರತೀಯ ಭಾಷಿಕರ ಪಾರುಪತ್ಯ ಇದೆ. ಇಲ್ಲಿ ಕನ್ನಡಿಗರೇ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಲಿಂಗಾಯತ, ಒಕ್ಕಲಿಗರು, ಎಸ್‌ಸಿ, ಎಸ್‌ಟಿ, ಬ್ರಾಹ್ಮಣ, ಒಬಿಸಿ, ತಿಗಳ, ಕುರುಬ, ದೇವಾಂಗ, ಯಾದವ ಮತದಾರರು ಈ ಕ್ಷೇತ್ರದಲ್ಲಿ ಇದ್ದಾರೆ. ಆದರೆ, ಮುಸ್ಲಿಂ ಮತ್ತು ದಲಿತ ಮತಗಳೇ ಇಲ್ಲಿ ನಿರ್ಣಾಯಕ.
ಬೆಂಗಳೂರು 2020ರಲ್ಲಿ ನಡೆದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಿಂದ ಕರ್ನಾಟಕದಾದ್ಯಂತ ಸುದ್ದಿಯಲ್ಲಿರುವ ಕ್ಷೇತ್ರ ಬೆಂಗಳೂರಿನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಪುಲಿಕೇಶಿ ನಗರದಲ್ಲಿ ಈ ಬಾರಿ ಮಹತ್ವದ ರಾಜಕೀಯ ಬದಲಾವಣೆಗಳೇ ಆಗಿವೆ. ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಇರುವುದರಿಂದ ಅವರು ಪಕ್ಷ ಬದಲಾಯಿಸಿದ್ದು, ಕ್ಷೇತ್ರದಲ್ಲಿ ಚುನಾವಣಾ ರೋಚಕತೆಯನ್ನು ಹೆಚ್ಚಿಸಿದೆ.
ಹಾಲಿ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಟಿಕೆಟ್ ಸಿಗದ ಕಾರಣ ಬಿಎಸ್‌ಪಿ ಆನೆ ಏರಿ ಬಂದಿದ್ದಾರೆ. ಎ ಸಿ ಶ್ರೀನಿವಾಸ್ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಪುಲಿಕೇಶಿ ನಗರದಲ್ಲಿ ಕೈ ಕಟ್ಟಾಳು ಆಗಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಠೇವಣಿಯನ್ನು ಪಡೆಯದ ಬಿಜೆಪಿ ಈ ಬಾರಿ ತನ್ನ ಪ್ರಾಬಲ್ಯ ಸ್ಥಾಪಿಸಲು ಹೋರಾಟ ನಡೆಸುತ್ತಿದ್ದು, ಎ ಮುರುಳಿ ಎಂಬುವವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಪುಲಿಕೇಶಿ ನಗರದಲ್ಲಿ ಈ ಬಾರಿ ಪೈಪೋಟಿ ಕಾಂಗ್ರೆಸ್ ಮತ್ತು ಬಿಎಸ್‌ಪಿ ನಡುವೆ ಇದೆ. ಆದರೆ, ಬಿಜೆಪಿ, ಎಸ್‌ಡಿಪಿಐ ನಿರ್ಣಾಯಕ ಪಾತ್ರ ವಹಿಸುತ್ತವೆ.
ಪುಲಿಕೇಶಿ ನಗರದಲ್ಲಿ ಮುಸ್ಲಿಮರ ಮತಗಳೇ ನಿರ್ಣಾಯಕ. ಈ ಹಿನ್ನೆಲೆ ಈ ಕ್ಷೇತ್ರದ ಮೇಲೆ ಎಸ್‌ಡಿಪಿಐ ಕೂಡ ಕಣ್ಣಿಟ್ಟಿದ್ದು, ತನ್ನ ಅಭ್ಯರ್ಥಿಯನ್ನಾಗಿ ಭಾಸ್ಕರ್ ಪ್ರಸಾದ್ ಎಂಬುವವರನ್ನು ಕಣಕ್ಕಿಳಿಸಿದೆ. ಇವರು ಎಷ್ಟು ಮತ ಪಡೆಯುತ್ತಾರೆ ಎಂಬುದರ ಮೇಲೆ ಬೇರೆಯವರ ಗೆಲುವು ನಿರ್ಧಾರವಾಗುತ್ತದೆ. ಜೆಡಿಎಸ್ ಇಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಅನುರಾಧಾ ಎಂಬುವವರನ್ನು ಸ್ಪರ್ಧಾ ಕಣಕ್ಕೆ ತಳ್ಳಿದೆ. ಆದರೆ, ಅವರು ನೆಪ ಮಾತ್ರಕ್ಕೆ ಸ್ಪರ್ಧಿಸಿದಂತಿದೆ.
ಇನ್ನು, ಅಖಂಡ ಶ್ರೀನಿವಾಸಮೂರ್ತಿ ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ಆದ್ದರಿಂದ ಪ್ರಮುಖ ದಲಿತ ನಾಯಕ ಆಗಿರುವ ಇವರು ಈ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವುದಂತೂ ಖಚಿತ. ಏಕೆಂದರೆ ಕಳೆದ ಬಾರಿ ದಾಖಲೆಯ 81 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಿಂದ ಮುಸ್ಲಿಮರು ಇವರಿಂದ ಅಂತರ ಕಾಯ್ದುಕೊಂಡಿದ್ದರೆ, ದಲಿತರು ಇವರಿಗೆ ಆನೆ ಬಲ ಆಗುವ ಸಾಧ್ಯತೆ ಇದೆ.
ಬಿಜೆಪಿಗೆ ಪುಲಿಕೇಶಿ ನಗರದಲ್ಲಿ ನೆಲೆಯೇ ಇಲ್ಲ. ಕಳೆದ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಠೇವಣಿ ಕಳೆದುಕೊಂಡಿದೆ. ಈ ಬಾರಿ ಮುರುಳಿ ಎಂಬುವವರಿಗೆ ಟಿಕೆಟ್ ನೀಡಿದೆ. ತಮಿಳು ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಇಲ್ಲಿ ತಮಿಳುನಾಡಿನ ಪಕ್ಷ ಎಐಎಡಿಎಂಕೆ ಬೆಂಬಲವನ್ನು ಪಡೆದಿದೆ. ಈ ಹಿನ್ನೆಲೆ ಎಐಎಡಿಎಂಕೆಯಿಂದ ನಾಮಪತ್ರ ಸಲ್ಲಿಸಿದ್ದ ಅನ್ಬರಸನ್ ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಅದಲ್ಲದೇ ಇಬ್ಬರು ಪ್ರಬಲ ದಲಿತ ನಾಯಕರು ಚುನಾವಣೆಗೆ ಸ್ಪರ್ಧಿಸಿರುವುದರಿಂದ ಮತಗಳ ವಿಭಜನೆ ಆಗುವ ಸಾಧ್ಯತೆ ಇದ್ದು, ಬಿಜೆಪಿಗೆ ಅದು ಪ್ಲಸ್ ಆಗಬಹುದು.
ಒಟ್ಟಿನಲ್ಲಿ ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‌ಪಿ ನಡುವೆ ನೇರ ಪೈಪೋಟಿ ಇದ್ದು, ಬಿಜೆಪಿ, ಎಸ್‌ಡಿಪಿಐ ಪಡೆಯುವ ಮತಗಳ ಆಧಾರದಲ್ಲಿ ಕಾಂಗ್ರೆಸ್, ಬಿಎಸ್‌ಪಿ ಸೋಲು, ಗೆಲುವು ನಿರ್ಧಾರವಾಗುತ್ತದೆ.




