ಆರೋಗ್ಯ ಸಚಿವರ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ; ನಿಗದಿಯಂತೆ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ನಡೆಸಲು ವಿವಿ ತೀರ್ಮಾನ
ಈಗಾಗಲೇ ಎನ್ಎಮ್ಸಿ ಅಡ್ವೈಸರಿ ಆಧಾರದಂತೆ ನೀಟ್ ಪಿಜಿ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ, ರಾಜೀವ್ ಗಾಂಧಿ ವಿವಿ ಕಾನ್ವಕೇಷನ್ ದಿನಾಂಕ ಹಾಗೂ ಎಂಬಿಬಿಎಸ್ ಪರೀಕ್ಷೆಯ ದಿನಾಂಕಗಳೆಲ್ಲವೂ ನಿಗದಿಯಾಗಿದೆ. ಇದನ್ನು ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಲಹೆ ಪಡೆದು ನಿಗದಿಗೊಳಿಸಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿವಿ ಸುತ್ತೋಲೆ ಪ್ರಕಟಿಸಿದೆ.
ಬೆಂಗಳೂರು: ಪರೀಕ್ಷಾ ದಿನಾಂಕ ಮುಂದೂಡುವಂತೆ ನಿನ್ನೆ (ಫೆಬ್ರವರಿ 02) ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr.K.Sudhakar) ಪತ್ರ ಬರೆದಿದ್ದರು. ಆದರೆ ಸಚಿವರ ಮಾತಿಗೆ ಕ್ಯಾರೆ ಅನ್ನದ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ನಿಗದಿಯಂತೆಯೇ ಅಂತಿಮ ವರ್ಷದ ಎಂಬಿಬಿಎಸ್(MBBS) ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಅದರಂತೆ ಫೆಬ್ರವರಿ 22ರಿಂದ ಪರೀಕ್ಷೆ ನಡೆಸಲು ರಾಜೀವ್ ಗಾಂಧಿ ವಿವಿ ತೀರ್ಮಾನಿಸಿದೆ. ಈಗಾಗಲೇ ಎನ್ಎಮ್ಸಿ(NMC) ಅಡ್ವೈಸರಿ ಆಧಾರದಂತೆ ನೀಟ್ ಪಿಜಿ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ, ರಾಜೀವ್ ಗಾಂಧಿ ವಿವಿ ಕಾನ್ವಕೇಷನ್ ದಿನಾಂಕ ಹಾಗೂ ಎಂಬಿಬಿಎಸ್ ಪರೀಕ್ಷೆಯ ದಿನಾಂಕಗಳೆಲ್ಲವೂ ನಿಗದಿಯಾಗಿದೆ. ಇದನ್ನು ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಲಹೆ ಪಡೆದು ನಿಗದಿಗೊಳಿಸಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿವಿ ಸುತ್ತೋಲೆ ಪ್ರಕಟಿಸಿದೆ.
ಪ್ರತೀ ವಿಷಯದ ಎಂಬಿಬಿಎಸ್ ಪರೀಕ್ಷೆಗೆ 2 ದಿನದ ಅಂತರವಿದೆ. ಇದೇ ಮೊದಲ ಬಾರಿಗೆ ಅಂತರ ಕೊಟ್ಟು ಪರೀಕ್ಷೆ ಮಾಡಲಾಗುತ್ತಿದೆ. ಇತರೆ ರಾಜ್ಯಗಳಲ್ಲಿ ನಿಗದಿಯಂತೆ ಪರೀಕ್ಷೆ ನಡೆಸಲಾಗುತ್ತಿದೆ. ಆದ್ದರಿಂದ ನಮ್ಮ ರಾಜ್ಯದಲ್ಲೂ ನಿಗದಿಯಂತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಫೆ.22 ರಿಂದ ಪರೀಕ್ಷೆ ನಡೆಸಲು ರಾಜೀವ್ ರಾಜೀವ್ ಗಾಂಧಿ ವಿವಿ ತೀರ್ಮಾನ ಮಾಡಿದೆ.
ಆರ್ಜಿಯುಹೆಚ್ಎಸ್ಗೆ ಆರೋಗ್ಯ ಸಚಿವರಿಂದ ಪತ್ರ
ಕೊವಿಡ್ ಮೂರನೇ ಅಲೆಯಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಒಂದು ವಾರದ ಹಿಂದೆ ನಡೆಸಿದ ವರ್ಚ್ಯೂಯಲ್ ಪ್ರತಿಭಟನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರವೊಂದನ್ನು ಬರೆದಿರುವ ಸಚಿವರು ಫೆಬ್ರವರಿಯಲ್ಲಿ ಆರಂಭವಾಗಬೇಕಿದ್ದ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲು ತಿಳಿಸಿದ್ದರು. ತರಗತಿಗಳು ವಿಳಂಬವಾಗಿ ಆರಂಭವಾಗಿದ್ದೂ ಅಲ್ಲದೆ ಸೋಂಕಿನ ಪ್ರಕರಣಗಳು ಹೆಚ್ಚಾದಾಗ ಆನ್ಲೈನ್ನಲ್ಲಿ ಕ್ಲಾಸ್ಗಳನ್ನು ನಡೆಸಿದ್ದರಿಂದ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಅವುಗಳನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಕಳೆದ ವಾರ ವರ್ಚ್ಯೂಯಲ್ ಪ್ರತಿಭಟನೆ ನಡೆಸಿದ್ದರು.
ರಾಜ್ಯ ಸರ್ಕಾರ ತಮ್ಮ ಮನವಿ ಹಾಗೂ ಪ್ರತಿಭಟನೆ ಇಷ್ಟು ಬೇಗ ಪ್ರತಿಕ್ರಿಯಿಸುತ್ತದೆ ಎಂದು ವಿದ್ಯಾರ್ಥಿಗಳು ಪ್ರಾಯಶಃ ಭಾವಿಸಿರಲಾರರು. ಹಾಗಾಗಿ, ಡಾ. ಸುಧಾಕರ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವುದು ಅವರಲ್ಲಿ ಅಪಾರ ಸಂತಸ ಮೂಡಿಸಿತ್ತು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಧೀನದ ಮೆಡಿಕಲ್ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾದದ್ದು, ಮೇ ತಿಂಗಳಲ್ಲಿ ಮತ್ತು ಕೊವಿಡ್ ಸೋಂಕಿನ ಪ್ರಕರಣಗಳು ಹೆಚ್ಚಿದ್ದ ಕಾರಣ ಜುಲೈವರೆಗೆ ಪಾಠಗಳು ಆನ್ಲೈನ್ನಲ್ಲಿ ನಡೆದಿವೆ. ಇದೇ ಹಿನ್ನೆಲೆಯಲ್ಲಿ ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿರುವುದಿಲ್ಲ. ಅಷ್ಟು ಮಾತ್ರವಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡು ತಿಂಗಳು ಕಾಲ ಕೋವಿಡ್ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಡಾ. ಸುಧಾಕರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಮೂರನೇ ಅಲೆಯಲ್ಲಿ ಪುನಃ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷೆಗಳಿಗೆ ತಯಾರಾಗಲು ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಸಮಯ ಸಿಕ್ಕಿಲ್ಲ. ಅವರು ಅಂತಿಮ ವರ್ಷದ ವಿದ್ಯಾರ್ಥಿಗಳಾಗಿರುವುದರಿಂದ ಚಾನ್ಸ್ ತೆಗೆದುಕೊಳ್ಳಲಾಗದು. ಈ ಹಿನ್ನೆಲೆಯಲ್ಲಿ ಅವರಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅಗತ್ಯವಿರುವಷ್ಟು ಕಾಲಾವಕಾಶ ಒದಗಿಸಿ, ಪರಷ್ಕೃತ ವೇಳಾಪಟ್ಟಿ ಪ್ರಕಟಿಸುವಂತೆ ಡಾ. ಸುಧಾಕರ್ ತಮ್ಮ ಪತ್ರದಲ್ಲಿ ಆದೇಶಿಸಿದ್ದರು.
ಇದನ್ನೂ ಓದಿ: ಅಂತಿಮ ವರ್ಷದ ಎಮ್ ಬಿ ಬಿ ಎಸ್ ಪರೀಕ್ಷೆ ಮುಂದೂಡುವಂತೆ ಆರ್ ಜಿ ಯು ಎಚ್ ಎಸ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪತ್ರ
Published On - 8:23 am, Wed, 2 February 22