ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೇರಿ ನಾಲ್ವರ ತೀವ್ರ ವಿಚಾರಣೆ: ಪೊಲೀಸರು ಕೇಳಿದ ಪ್ರಶ್ನೆಗಳೇನು? ಇಲ್ಲಿದೆ ವಿವರ
ಆರ್ಸಿಬಿ ಸಂಭ್ರಮಾಚರಣೆ ಸಂದರ್ಭ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಸಂಬಂಧ ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿ ನಾಲ್ವರ ಬಂಧನವಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸಿಸಿಬಿ ಅಧಿಕಾರಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದು, ಅನೇಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕಿದ್ದಾರೆ. ವಿವರಗಳು ಇಲ್ಲಿವೆ.

ಬೆಂಗಳೂರು, ಜೂನ್ 6: ಆರ್ಸಿಬಿ ಐಪಿಲ್ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy stampede) ಸಂಬಂಧ ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರು ಕಾರ್ಯಕ್ರಮ ಆಯೋಜಕರನ್ನು ಸಿಸಿಬಿ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತೀವ್ರತರದ ವಿಚಾರಣೆಗೆ ಒಳಪಡಿಸಲಾಗಿದೆ. ಖುದ್ದು ಸಿಸಿಬಿ ಡಿಸಿಪಿ ಅಕ್ಷಯ್ ಎಂ. ನೇತೃತ್ವದಲ್ಲಿ ಇದೀಗ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಾಲ್ವರ ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಹಲವು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ ಎಂಬುದು ತಿಳಿದುಬಂದಿದೆ.
ಬಂಧಿತರಿಗೆ ಸಿಸಿಬಿ ಪೊಲೀಸರು ಕೇಳಿದ ಪ್ರಶ್ನೆಗಳೇನು?
- ಪೊಲೀಸರು ಅನುಮತಿ ನಿರಾಕರಿಸಿದ್ದರೂ ಉಚಿತ ಪಾಸ್ ಸಂಬಂಧ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕಿದ್ದು ಯಾಕೆ?
- ನಿಮಗೆ ಬೇರೆ ಯಾರಾದರೂ ಆ ತರ ಪೋಸ್ಟ್ ಹಾಕಲು ಹೇಳಿದ್ದರೇ?
- ಸ್ಟೇಡಿಯಂ ಕಾರ್ಯಕ್ರಮ ನಿಗದಿ ಮಾಡಿಕೊಂಡಿದ್ದು ಯಾವಾಗ?
- ವಿಕ್ಟರಿ ಪರೇಡ್ ಬಗ್ಗೆ ಹೇಗೆ ನಿರ್ಧಾರ ಕೈಗೊಂಡಿರಿ?
- ಟಿಕೆಟ್ ವಿಚಾರದಲ್ಲಿ ತುಂಬಾ ಗೊಂದಲ ಆಗಿದ್ದು ಯಾಕೆ?
- ಕಾಲ್ತುಳಿತ ಪ್ರಕರಣದ ಬಗ್ಗೆ ನಿಮಗೆ ಗೊತ್ತಿರುವುದು ಏನು?
ಇಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರಶ್ನೆಗಳನ್ನು ಬಂಧಿತರಿಗೆ ಕೇಳಲಾಗಿದ್ದು, ಮಾಹಿತಿ ಕಲೆ ಹಾಕಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಸಂಬಂಧ ಬಂಧಿತರು ಯಾರೆಲ್ಲ?
ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ, ಡಿಎನ್ಎ ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಎಂಬವರನ್ನು ಬಂಧಿಸಲಾಗಿದೆ. ಇವರು ಮುಂಬೈಗೆ ತೆರಳುತ್ತಿದ್ದಾಗ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿ ನಾಲ್ವರ ಬಂಧನ
ಬೆಂಗಳೂರಿನ ವಿಧಾನ ಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ಎಂದು, ಪೊಲೀಸರು ಅನುಮತಿ ನಿರಾಕರಿಸಿದ ನಂತರವೂ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ ಆರೋಪ ನಿಖಿಲ್ ಸೋಸಲೆ ಮೇಲಿದೆ. ಅಲ್ಲದೆ, ಸ್ಟೇಡಿಯಂಗೆ ಉಚಿತ ಪಾಸ್ ಸಂಬಂಧ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕಿದ ಆರೋಪವೂ ಇದೆ.
(ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’, ಬೆಂಗಳೂರು)
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Fri, 6 June 25








