ಶಕ್ತಿ ಯೋಜನೆ: ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಬದಲು ಸಾಮಾನ್ಯ ಬಸ್ ಪಾಸ್ ವಿತರಣೆ
ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸದ ಮಹಿಳೆಯರಿಗೆ ಸ್ಮರ್ಟ್ ಕಾರ್ಡ್ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಇದೀಗ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಬದಲಿಗೆ ಸಮಾನ್ಯ ಬಸ್ ಪಾಸ್‌ಗಳನ್ನೇ ನೀಡಲು ನಾಲ್ಕು ಸಾರಿಗೆ ನಿಗಮಗಳು ನಿರ್ಧರಿಸಿವೆ ಎಂಬ ಅಂಶ ರಸ್ತೆ ಸಾರಿಗೆ ನಿಗಮಗಳ ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರು: ಕರ್ನಾಟಕ ಸರ್ಕಾರ (Karnataka Government) ಶಕ್ತಿ ಯೋಜನೆ (Shakti Yojana) ಅಡಿ ಪ್ರೀಮಿಯಂ ಅಲ್ಲದ ಕೆಎಸ್ಆರ್ಟಿಸಿ (KSRTC) ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಈ ಶಕ್ತಿ ಯೋಜನೆ ಆರಂಭವಾಗಿ ಎರಡು ತಿಂಗಳು ಕಳೆದಿದೆ. ಈ ಯೋಜನೆ ಜಾರಿಯಾಗಿದ್ದರಿಂದ ಎಲ್ಲ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ (RTC) ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಅಧಿಕ ಆದಾಯ ಬರುತ್ತಿದೆ. ಇನ್ನು ಯೋಜನೆ ಉದ್ಘಾಟನೆ ಸಮಯದಲ್ಲಿ ಸಾಂಕೇತಿಕವಾಗಿ ಕೆಲ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗಿತ್ತು. ನಂತರ ಯೋಜನೆಗೆ ಅರ್ಜಿ ಸಲ್ಲಿಸದ ಮಹಿಳೆಯರಿಗೆ ಸ್ಮರ್ಟ್ ಕಾರ್ಡ್ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಇದೀಗ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಬದಲಿಗೆ ಸಮಾನ್ಯ ಬಸ್ ಪಾಸ್‌ಗಳನ್ನೇ ನೀಡಲು ನಾಲ್ಕು ಸಾರಿಗೆ ನಿಗಮಗಳು ನಿರ್ಧರಿಸಿವೆ ಎಂಬ ಅಂಶ ರಸ್ತೆ ಸಾರಿಗೆ ನಿಗಮಗಳ ಮೂಲಗಳಿಂದ ತಿಳಿದುಬಂದಿದೆ.
ಸಾರಿಗೆ ನಿಮಗದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ ಸ್ಮಾರ್ಟ್ ಕಾರ್ಡ್‌ಗಳನ್ನು ಅಭಿವೃದ್ಧಿಪಡಿಸಲು ಸಂಪರ್ಕಿಸಲಾದ ಸೆಂಟರ್ ಫಾರ್ ಇ-ಆಡಳಿತ (CEG) ನಮ್ಮ ಪ್ರಸ್ತಾವನೆಯನ್ನು ನಿರಾಕರಿಸಿದೆ. ಹೀಗಾಗಿ ಸಾಮಾನ್ಯ ಬಸ್ ಪಾಸ್‌ಗಳನ್ನೇ ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ನೀಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ಸ್ಮಾರ್ಟ್ ಕಾರ್ಡ್ ಅಭಿವೃದ್ಧಿಯ ಪ್ರಸ್ತಾವನೆಯನ್ನು ಸಿಇಜಿ ತಿರಸ್ಕರಿಸಿದೆ. ಸುಮಾರು ಮೂರು ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ತಯಾರಿಸುವ ಕುರಿತು ನಾವು ಇತ್ತೀಚೆಗೆ ಸಿಇಜಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಇಷ್ಟೊಂದು ಪ್ರಮಾಣದಲ್ಲಿ ಸ್ಮಾರ್ಟ್ ಕಾರ್ಡ್ ತಯಾರಿಸಲು ಸಿಇಜಿ ಹಿಂದೇಟು ಹಾಕಿದೆ. ಆದ್ದರಿಂದ, ನಾವು ಈಗ ಸಾಮಾನ್ಯ ಬಸ್ ಪಾಸ್‌ಗಳನ್ನು ಹೋಲುವ ಶಕ್ತಿ ಪಾಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಖುಷ್; ಸಾರಿಗೆ ಸಂಸ್ಥೆ ಸಿಬ್ಬಂದಿ ವೇತನ ಸಿಗದೆ ಠುಸ್ಸ್!
ಪಾಸ್ ಪ್ರಿಂಟಿಂಗ್ ಮತ್ತು ವಿತರಣೆಗೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಎಲ್ಲ ನಾಲ್ಕು ಆರ್‌ಟಿಸಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ನಾವು ಶಕ್ತಿ ಪಾಸ್‌ಗಳನ್ನು ಪರಿಚಯಿಸುವ ಪರಿಕಲ್ಪನೆಯನ್ನು ಹೊಂದಿದ್ದೇವೆ. ಇವು ಸ್ಮಾರ್ಟ್ ಕಾರ್ಡ್‌ಗಳಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಸಾಮಾನ್ಯ ಬಸ್ ಪಾಸ್‌ಗಳನ್ನು ಹೋಲುತ್ತದೆ. ನಾವು ಈಗಾಗಲೇ ಪಾಸ್‌ಗಳನ್ನು ನೀಡುವ ವ್ಯವಸ್ಥೆಯನ್ನು ಹೊಂದಿರುವುದರಿಂದ ಈ ಕಾರ್ಯ ಸುಲಭವಾಗಲಿದೆ ಎಂದು ತಿಳಿಸಿದರು.
ಫಲಾನುಭವಿಗಳಿಂದ ಮಾನ್ಯವಾದ ಗುರುತಿನ ಚೀಟಿಯನ್ನು ಪಡೆದ ನಂತರ ಈ ಪಾಸ್‌ಗಳನ್ನು ಬಸ್ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಸ್ಥಳದಲ್ಲೇ ವಿತರಿಸಲಾಗುವುದು. ಶಕ್ತಿ ಯೋಜನೆಯ ಲಾಭ ಪಡೆಯಲು, ಮಹಿಳೆಯರು ಯೋಜನೆಯ ಅಧಿಕೃತ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಟ್ಯಾಪ್-ಅಂಡ್-ಟ್ರಾವೆಲ್’ ತಂತ್ರಜ್ಞಾನದ ವಿಧಾನವನ್ನು ಬಳಸಿಕೊಂಡು ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲು ಸಾರಿಗೆ ನಿಗಮಗಳು ನಿರ್ಧರಿಸಿವೆ. ಇದರಿಂದ ಕಂಡಕ್ಟರ್‌ಗಳ ಟಿಕೆಟಿಂಗ್ ಯಂತ್ರಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಟ್ಯಾಪ್ ಮಾಡಬಹುದಾಗಿದೆ. ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳಿಗೆ ನೋಂದಣಿ ನಡೆಯುತ್ತಿರುವುದರಿಂದ ಪ್ರಕ್ರಿಯೆಗಳಿಂದ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳ ನೋಂದಣಿಯ ಪ್ರಾರಂಭವು ವಿಳಂಬವಾಗಿದೆ ಎಂದರು.
36.14 ಕೋಟಿ ಮಹಿಳಾ ಪ್ರಯಾಣಿಕರು
ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜೂ.11 ರಂದು ಪ್ರಾರಂಭಿಸಿತು. ಈ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರೀಮಿಯಂ ಅಲ್ಲದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಬಹುದು. ಈ ಯೋಜನೆ ಜಾರಿಯಾದಾಗಿನಿಂದ ಮಹಿಳಾ ಪ್ರಯಾಣಿಕ ಸಂಖ್ಯೆ ಹೆಚ್ಚಿದೆ.
ಪ್ರಾರಂಭವಾದ ದಿನದಿಂದ ಬುಧವಾರ (ಆಗಸ್ಟ್ 9) ವರೆಗೆ 36.14 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯದಾದ್ಯಂತ ಪ್ರಯಾಣಿಸಿದ್ದಾರೆ. ಈ ಮಹಿಳಾ ಪ್ರಯಾಣಿಕರು ಖರೀದಿಸಿದ ಟಿಕೆಟ್‌ಗಳ ಒಟ್ಟು ಮೌಲ್ಯ 839,81,98,874 ರೂ. ಆದಾಯ ಹರಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ