
ಬೆಂಗಳೂರು, ಆಗಸ್ಟ್ 21: ಕರ್ನಾಟಕದ ಮತದಾರರ ಪಟ್ಟಿ ಸುಧಾರಣೆಗಾಗಿ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದ ಸುಮಾರು 43.8 ಲಕ್ಷ ಮತದಾರರಿಗೆ ‘ವಿಶೇಷ ಸಾಂದ್ರ ಪರಿಷ್ಕರಣೆ’ (SIR) ಅಡಿಯಲ್ಲಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯು ಆಗಸ್ಟ್ 24 ರಿಂದ ಆರಂಭವಾಗಲಿದೆ.
ರಾಜ್ಯದ ಒಟ್ಟು 4.5 ಕೋಟಿ ಮತದಾರರಲ್ಲಿ ಸುಮಾರು ಶೇ 9.8 ರಷ್ಟು ಮತದಾರರಿಗೆ ಈ ನೋಟಿಸ್ ತಲುಪಲಿದೆ ಎಂದು ಮುಖ್ಯ ಚುನಾವಣಾಧಿಕಾರಿ (CEO) ಅನ್ಬು ಕುಮಾರ್ ಅವರ ಕಚೇರಿಯ ಮಾಹಿತಿ ತಿಳಿಸಿದೆ. ವಿಶೇಷವೆಂದರೆ, ವಿತರಿಸಲಾಗುವ ಒಟ್ಟು ನೋಟಿಸ್‌ಗಳಲ್ಲಿ ಅರ್ಧದಷ್ಟು ಅಂದರೆ ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳು ಬೆಂಗಳೂರು ನಗರ ಒಂದರಲ್ಲೇ ಜಾರಿಯಾಗಲಿವೆ. ಬಿಬಿಎಂಪಿ ಉತ್ತರ, ದಕ್ಷಿಣ, ಮಧ್ಯ ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಅತ್ಯಧಿಕ ಸಂಖ್ಯೆಯ ಮತದಾರರು ಈ ಪಟ್ಟಿಯಲ್ಲಿದ್ದಾರೆ.
ಮತದಾರರ ವಿವರಗಳಲ್ಲಿ ಕಂಡುಬಂದಿರುವ ದೋಷಗಳು ಹಾಗೂ ಅಸಂಗತತೆಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಎರಡು ವರ್ಗದ ಮತದಾರರಿಗೆ ನೋಟಿಸ್ ಜಾರಿಯಾಗಲಿದೆ.
1. 2002ರ ಮತದಾರರ ಡೇಟಾಗೆ ಮ್ಯಾಪ್ ಮಾಡಲು ಸಾಧ್ಯವಾಗದ ಮತದಾರರು.
2. 2002ರ ಪಟ್ಟಿಯೊಂದಿಗೆ ಮ್ಯಾಪ್ ಆಗಿದ್ದರೂ ತಂದೆಯ ಹೆಸರಿನ ಸ್ಪೆಲ್ಲಿಂಗ್ ವ್ಯತ್ಯಾಸ ಸೇರಿದಂತೆ ಸುಮಾರು 9 ರೀತಿಯ ತಾಂತ್ರಿಕ ದೋಷಗಳು ಕಂಡುಬಂದಿರುವ ಮತದಾರರು.
ಖಾಸಗಿತನದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮತಗಟ್ಟೆ (Booth) ಹಂತದಲ್ಲಿ ಪರಿಶೀಲನಾ ಪಟ್ಟಿ ಪ್ರಕಟಿಸುವ ಬಗ್ಗೆ ಆಯೋಗ ಚಿಂತಿಸುತ್ತಿದೆ. ನೋಟಿಸ್ ಸ್ವೀಕರಿಸುವ ಮತದಾರರು ನಿಗದಿತ ಸಮಯದೊಳಗೆ ತಮ್ಮ ದಾಖಲೆಗಳನ್ನು ಸಲ್ಲಿಸಿ ದೋಷಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ