ಆರ್ಎಸ್ಎಸ್ ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ
ಫಾರ್ಮ್-7 ದುರುಪಯೋಗ ಖಂಡಿಸಿ ಕಾಂಗ್ರೆಸಿಗರ ಪ್ರತಿಭಟನೆಯ ನಡುವೆ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ. ಆರ್ಎಸ್ಎಸ್ ಕಚೇರಿಯಲ್ಲೇ ಫಾರ್ಮ್-7 ಮುದ್ರಣವಾಗುತ್ತಿದೆ ಎಂದು ಅವರು ಸ್ಫೋಟಕ ಆರೋಪ ಮಾಡಿದ್ದು, ಕ್ಷೇತ್ರ, ವಾರ್ಡ್ಗೆ ಸಂಬಂಧ ಪಡದೆ ಇರುವವರೇ ಅರ್ಜಿ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ. ಮತ್ತೊಂದೆಡೆ ಮತಗಳ ಡಿಲೀಟ್ ಮಾಡಲು ಯತ್ನಿಸಿದ ಆರೋಪದ ಮೇಲೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ BLA1 ಸೇರಿ ಅಧಿಕಾರಿಗಳ ಮೇಲೆ FIR ಆಗಿದೆ.

ಮೈಸೂರು/ಬಳ್ಳಾರಿ, ಅಕ್ಟೋಬರ್ 02: ಆರ್ಎಸ್ಎಸ್ ಕಚೇರಿಯಲ್ಲೇ ಫಾರ್ಮ್-7 ಮುದ್ರಣವಾಗುತ್ತಿದೆ ಎಂದು ಮೈಸೂರಿನಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ. RSS ಕಚೇರಿಯಿಂದ ಬಿಜೆಪಿಯವರ ಕೈಗೆ ಫಾರ್ಮ್-7 ತಲುಪಿದೆ. RSS ನಿರ್ದೇಶನದಂತೆ ಮತ ಡಿಲೀಟ್ ಮಾಡಲು ಸಂಚು ನಡೆದಿದೆ. ಬಿಜೆಪಿ ಮಾತೃ ಸಂಸ್ಥೆಯೇ ಇದಕ್ಕೆಲ್ಲಾ ಕಾರಣ ಎಂದವರು ದೂರಿದ್ದಾರೆ. NR ಕ್ಷೇತ್ರದಲ್ಲಿ ಈವರೆಗೆ 10 ಸಾವಿರ ಜನರ ಹೆಸರು ಡಿಲೀಟ್ಗೆ ಅರ್ಜಿ ಸಲ್ಲಿಸಲಾಗಿದೆ. ಕ್ಷೇತ್ರ, ವಾರ್ಡ್ಗೆ ಸಂಬಂಧ ಪಡದೆ ಇರುವವರೇ ಅರ್ಜಿ ಹಾಕಿದ್ದಾರೆ. ಪ್ರತಿ ಬೂತ್ನಲ್ಲಿ 100ರಿಂದ 150 ಅರ್ಜಿ ಹಾಕಲಾಗಿದೆ. ದಲಿತರು, ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ಆಕ್ಷೇಪಣೆ ಸಲ್ಲಿಸಲಾಗ್ತಿದೆ. ಚಿಕ್ಕಮಗಳೂರಿನವರನ್ನು ಈ ಕ್ಷೇತ್ರದ ಮತದಾರರನ್ನಾಗಿ ಮಾಡುವ ಪ್ಲ್ಯಾನ್ ನಡೆಯುತ್ತಿದ್ದು, ತಮಗೆ ಬೇಕಾದವರ ಹೆಸರು ಸೇರ್ಪಡೆ ಮಾಡುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.
ಬಿಜೆಪಿಗರ ವಿರುದ್ಧ ಪ್ರಕರಣ
ಮತಗಳ ಡಿಲೀಟ್ ಮಾಡಲು ಯತ್ನಿಸಿದ ಆರೋಪದ ಮೇಲೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ BLA1 ಸೇರಿ ಅಧಿಕಾರಿಗಳ ಮೇಲೆ FIR ಆಗಿದೆ. ಕಾಂಗ್ರೆಸ್ BLA ಗೌತಮ್ ನೀಡಿದ ದೂರಿನ ಅನ್ವಯ BNS 2023 ಪ್ರಕಾರ U/S 363(2), 61 (2), 217,3 (5) ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 7,561 ಮತದಾರರ ಹೆಸರನ್ನು ಬಿಜೆಪಿ BLA1 ಶ್ರೀನಿವಾಸ ಮೋತ್ಕರ್ ಪರಿಷ್ಕರಣೆಗೆ ಕೊಟ್ಟಿದ್ದರು. ಆದರೆ ಅಲ್ಪಸಂಖ್ಯಾತ ಹಾಗೂ ಕಾಂಗ್ರೆಸ್ ಪರ ಇರುವ ಮತದಾರರ ಪಟ್ಟಿ ಕೊಟ್ಟಿದ್ದಾಗಿ ಕಾಂಗ್ರೆಸ್ ಆರೋಪಿಸಿದ್ದು, ನಿನ್ನೆ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಕೇಸ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ ಹಿನ್ನೆಲೆ ಠಾಣೆಗೆ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಭೇಟಿ ನೀಡಿದ್ದರು. ದೂರು ನೀಡಿದರೂ ಕೇಸ್ ದಾಖಲಿಸಿದ ಪೊಲೀಸರ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮತ್ತು ಡಿವೈಎಸ್ಪಿಯೂ ಬಂದಿದ್ದು, ಅಂತಿಮವಾಗಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟಕ ಸೇರಿದಂತೆ 20 ರಾಜ್ಯಗಳ ಮತದಾರರಿಗೆ ಬಿಗ್ ನ್ಯೂಸ್: ವೋಟರ್ ಐಡಿಯಿಂದ ಹೆಸರು ಡಿಲೀಟ್ ಆಗಿದೆಯಾ? ಇಲ್ಲಿದೆ ಸುವರ್ಣಾವಕಾಶ
2,598 ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಅಧಿಕಾರಿಗೆ ಪತ್ರ ಬರೆದ ಸಂಬಂಧ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧವೂ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು ಸಲ್ಲಿಕೆ ಮಾಡಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 2598 ಜನರ ಹೆಸರು ಡಿಲೀಟ್ಗೆ ಶಾಸಕರು ಪತ್ರ ಬರೆದಿದ್ದರು ಎನ್ನಲಾಗಿದೆ. ನಕಲಿ ದಾಖಲೆ, ಫಾರ್ಮ್-7 ದುರುಪಯೋಗ ಆರೋಪಿಸಿ ಅಭಯ್ ಪಾಟೀಲ್ ವಿರುದ್ಧ ಈಗ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Fri, 2 October 26




