
ಬೆಂಗಳೂರು, ನವೆಂಬರ್ 06: ಬಿಜೆಪಿ ಅವಧಿಯಲ್ಲಿ ಪೇಸಿಎಂ ಅಭಿಯಾನ ನಡೆಸಿ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಈಗ ತನ್ನ ಸರ್ಕಾರದಲ್ಲಿ ಫೋನ್ ಪೇ ಕಮಿಷನ್ ವ್ಯವಹಾರ ನಡೆಸುತ್ತಿದೆ. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್‌ಗಳಂತಹ ಆಡಳಿತದ ಶಕ್ತಿಕೇಂದ್ರಗಳಲ್ಲೇ ಕಮಿಷನ್ ದಂಧೆ ತಾಂಡವವಾಡುತ್ತಿದೆ. DBT ಯಂತೆಯೇ DCT- ಡೈರೆಕ್ಟ್ ಕಮಿಷನ್ ಟ್ರಾನ್ಸ್‌ಫರ್ ಎಂಬ ಹೊಸ ಡಿಜಿಟಲ್ ಭ್ರಷ್ಟಾಚಾರ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ ಎಂದು ಕರ್ನಾಟಕ ವಿಧಾನ ಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕ್ಯಾಂಟೀನ್ ಗುತ್ತಿಗೆದಾರರ ಬಳಿಯೂ ‘PhonePe’ ಮೂಲಕ ₹10 ಲಕ್ಷ ಲಂಚ ವಸೂಲಿ ಮಾಡುವ ಮಟ್ಟಕ್ಕೆ ಈ ಭ್ರಷ್ಟ ಸರ್ಕಾರದ ಹಗಲು ದರೋಡೆ ತಲುಪಿದೆ ಎಂದರೆ ಇನ್ನು ದೊಡ್ಡ ದೊಡ್ಡ ತಿಮಿಂಗಿಲಗಳು ಹೇಗೆ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿವೆ ಎಂದು ನೀವೇ ಊಹಿಸಿಕೊಳ್ಳಬಹುದು. ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಹಣವಿಲ್ಲ, ಗೃಹಲಕ್ಷ್ಮಿಯರಿಗೆ ನೀಡಲು ಹಣವಿಲ್ಲ, ಡೀಸೆಲ್ ಹಾಕಲು ದುಡ್ಡಿಲ್ಲ ಎನ್ನುವ ಗತಿಗೆಟ್ಟ ಕಾಂಗ್ರೆಸ್ ಸರ್ಕಾರ, ನಾಚಿಕೆ ಮಾನ ಬಿಟ್ಟು ಕಷ್ಟಪಟ್ಟು ದುಡಿಯುವ ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದೆ ಎಂದವರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ‘ನಾನು ಗ್ರಾಫಿಕ್ ಡಿಸೈನರ್, ಮೋದಿಗಿಂತ ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಂಗೆ’: ಪ್ರಿಯಾಂಕ್ ಖರ್ಗೆ
ಪದೇ ಪದೇ ಲಂಚ ಪಡೆಯುವುದರ ಜೊತೆಗೆ ಬೆದರಿಕೆ ಒಡ್ಡಿದ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿರುವ ಗುತ್ತಿಗೆದಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ವಿಧಾನಪರಿಷತ್ ಸಭಾಪತಿಗಳ ಆಪ್ತ ಕಾರ್ಯದರ್ಶಿಗೆ ವಕೀಲರ ಮೂಲಕ ನೋಟಿಸ್ ಕೊಡಿಸಿದ್ದಾರೆ. ಮುಖ್ಯಮಂತ್ರಿಗಳೇ, ಲಂಚ ಕೇಳಿದರೆ ನನಗೆ ನೇರವಾಗಿ ಕರೆ ಮಾಡಿ ಎಂದು ನೀವು ಹೇಳುತ್ತೀರಿ. ಆದರೆ ನಿಮ್ಮ ಅಧಿಕಾರಿಗಳು ನೇರವಾಗಿ ಫೋನ್ ಪೇ ಮಾಡಿ ಎನ್ನುತ್ತಿದ್ದಾರೆ. ನೀವೇ ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿರುವುದು ನಿಮಗೆ ತಿಳಿಯದೇ ಹೋಯಿತೇ? ಅಥವಾ ಇದಕ್ಕೂ ನಿಮ್ಮ ಅನುಮತಿ ಸಿಕ್ಕಿದೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಬೊಕ್ಕಸದಲ್ಲಿ ಹಣವಿಲ್ಲ ಎಂದು ರೈತರ ಮುಂದೆ ಮುಲಾಜಿಲ್ಲದೆ ಹೇಳುವ ನಿಮಗೆ, ಕಮಿಷನ್ ಪಡೆಯಬಾರದು ಎಂದು ಸೂಚನೆ ಕೊಡುವಷ್ಟು ತಾಕತ್ತಿಲ್ಲ ಎಂದಮೇಲೆ ಅಧಿಕಾರದಲ್ಲಾದರೂ ಯಾಕಿರಬೇಕು? ಕೂಡಲೇ ಎಲ್ಲ ಇಲಾಖೆಗಳಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯನ್ನು ನಿಲ್ಲಿಸಿ, ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಪ್ರಯತ್ನ ಮಾಡಿ. ಇಲ್ಲವಾದರೆ ನೀವು ‘ಫೋನ್ ಪೇ ಸಿಎಂ’ ಎಂದು ಘೋಷಿಸಿಕೊಳ್ಳಿ ಎಂದೂ ಅಶೋಕ್ ವ್ಯಂಗ್ಯವಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.