Bengaluru Traffic Adisory: ಬೆಂಗಳೂರಿನ ಈ ರಸ್ತೆಯಲ್ಲಿಂದು ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಬೆಂಗಳೂರು ಸಂಚಾರ ಸಲಹೆ: ದೇವಸ್ಥಾನದಲ್ಲಿ ಯಾತ್ರೆ ಮತ್ತು ರಥೋತ್ಸವದ ಪ್ರಯುಕ್ತ ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದ ಬೇಗೂರು ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧ ಹೇರಿದ್ದಾರೆ. ಅದೇ ರೀತಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಸಂಚಾರ ನಿರ್ಬಂಧ ಸಮಯ, ಯಾವೆಲ್ಲ ರಸ್ತೆಗಳಲ್ಲಿ ಇರಲಿದೆ ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 16: ಬೇಗೂರು ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನಾಗಲಿಂಗೇಶ್ವರ ದೇವರ (Nagalingeshwara Temple Festival) ಬ್ರಹ್ಮರಥೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು (Bangalore Traffic Police) ವಾಹನ ಸಂಚಾರವನ್ನು ನಿರ್ಬಂಧಿಸಲು (Bengaluru Traffic Adisory) ಸೂಚನೆ ನೀಡಿದ್ದಾರೆ. 15,000 ರಿಂದ 25,000 ಭಕ್ತರು ಭಾಗವಹಿಸುವ ನಿರೀಕ್ಷೆಯಿರುವ ಬ್ರಹ್ಮರಥೋತ್ಸವವು ಬೆಳಿಗ್ಗೆ 11.55 ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿ ಮೆರವಣಿಗೆ ನಡೆಯಲಿದೆ. ಅದರಂತೆ, ಬೇಗೂರು ರಸ್ತೆಯಲ್ಲಿ ಪಿಕೆ ಕಲ್ಯಾಣ ಮಂಟಪ ಜಂಕ್ಷನ್‌ನಿಂದ ಏಕಾನಾ ಆಸ್ಪತ್ರೆ ಜಂಕ್ಷನ್‌ವರೆಗೆ, ಮಣಿಪಾಲ್ ಕೌಂಟಿ ರಸ್ತೆಯ ಫಾಲ್ಕನ್ ಮಾರ್ಕೆಟ್ ಜಂಕ್ಷನ್‌ನಿಂದ ದೇವಸ್ಥಾನದವರೆಗೆ ಮತ್ತು ಡಿಎಲ್‌ಎಫ್ ಜಂಕ್ಷನ್‌ನಿಂದ ಬೇಗೂರು ಲೇಕ್ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಯಾವುವು?
ಪರ್ಯಾಯವಾಗಿ, ಬೊಮ್ಮನಹಳ್ಳಿ-ಹೊಂಗಸಂದ್ರದಿಂದ ಬೇಗೂರು ಕೊಪ್ಪ ರಸ್ತೆಗೆ ಬರುವ ವಾಹನಗಳು ಪಿ.ಕೆ. ಕಲ್ಯಾಣ ಮಂಟಪ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ, ದೇವರಚಿಕ್ಕನಹಳ್ಳಿ ರಸ್ತೆ ಮೂಲಕ ಮುಂದೆ ಹೋಗಿ, ಎಡಕ್ಕೆ ತಿರುಗಿ ಡಿಇಒ ಹೈಟ್ಸ್ ಮೂಲಕ ಡಿಎಲ್‌ಎಫ್ ಜಂಕ್ಷನ್‌ಗೆ ಹೋಗಿ ನಂತರ ಬೇಗೂರು ಕೊಪ್ಪ ರಸ್ತೆಗೆ ಹೋಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಹೊಸೂರು ಮುಖ್ಯ ರಸ್ತೆ ಮತ್ತು ಮಣಿಪಾಲ ಕೌಂಟಿ ರಸ್ತೆಯಿಂದ ಬರುವವರು ಫಾಲ್ಕನ್ ಮಾರುಕಟ್ಟೆ ಬಳಿ ಎಡಕ್ಕೆ ತಿರುಗಿ ಎಇಸಿಎಸ್ ಸಿ-ಬ್ಲಾಕ್ ಮೂಲಕ ಬೇಗೂರು ಕೊಪ್ಪ ರಸ್ತೆ ಮತ್ತು ಬನ್ನೇರುಘಟ್ಟ ಮುಖ್ಯ ರಸ್ತೆಗೆ ಹೋಗಬಹುದು. ಡಿಎಲ್‌ಎಫ್ ಮೂಲಕ ಬೇಗೂರು ವೃತ್ತದ ಕಡೆಗೆ ಬರುವವರು ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ, ನ್ಯಾನಪ್ಪನ ಹಳ್ಳಿ ರಸ್ತೆ ಮೂಲಕ ಹೋಗಿ ದೇವರಚಿಕ್ಕನಹಳ್ಳಿ ರಸ್ತೆ ಮೂಲಕ ಹೊಂಗಸಂದ್ರ ಮತ್ತು ಬೊಮ್ಮನಹಳ್ಳಿ ತಲುಪಬಹುದು ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್
ಬೆಂಗಳೂರು ನಗರದ ಹಲವೆಡೆ ಬುಧವಾರ ಬೆಳಗ್ಗೆ ಟ್ರಾಫಿಕ್ ಜಾಮ್ ಹಾಗೂ ನಿಧಾನ ಗತಿಯ ಸಂಚಾರ ಇದೆ. ಹೆಬ್ಬಾಳದಿಂದ ನಗರದ ಕಡೆಗೆ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ. ಬಿಎಂಆರ್‌ಸಿಎಲ್ ಕಾಮಗಾರಿಯಿಂದಾಗಿ ಮಾರತಹಳ್ಳಿ ಪೊಲೀಸ್ ಠಾಣೆಯಿಂದ ಕಲಾಮಂದಿರ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ನಿಧಾನವಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೀದರ್ ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಶುರು: ಇಲ್ಲಿದೆ ವೇಳಾಪಟ್ಟಿ
ಗಾರ್ವೆ ಬಾವಿ ಪಾಳ್ಯ ಕಡೆಯಿಂದ , ಎಮ್ ಪಿ ಸ್ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ವಾಹನ ಸಂಚಾರ ನಿಧಾನವಾಗುತ್ತಿದೆ. ನಾಗವಾರ ಜಂಕ್ಷನ್ ನಿಂದ ಹೆಣ್ಣೂರು ಜಂಕ್ಷನ್ ಕಡೆಗೆ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸಂಚಾರ ನಿಧಾನಗತಿಯಲ್ಲಿರುತ್ತದೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ಆಲಿಅಸ್ಕರ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಕನ್ನಿಂಗ್ಹ್ಯಾಮ್ ರಸ್ತೆಯ ಕಡೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಪೊಲೀಸರು ಸೂಚಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 am, Wed, 16 April 25