
Breaking News Today Live Updates in Kannada: ಲಾಲ್‌ಬಾಗ್ ಶಿಲಾ ರಚನೆ ಜಿಎಸ್‌ಐ ವರದಿ ಸಲ್ಲಿಸಲು ಹಾಗೂ ಹೆಬ್ಬಾಳ ಕೆರೆಗೆ ಟನಲ್ ರೋಡ್‌ನಿಂದ ಧಕ್ಕೆಯಾಗದಂತೆ ಪ್ರಾತ್ಯಕ್ಷಿಕೆ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಮತ್ತೊಂದೆಡೆ, ನಗರದ ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದ್ದು, ಭಕ್ತರ ದರ್ಶನಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ತಿರುಪತಿಯಲ್ಲಿ ಸಾಮಾನ್ಯ ಕ್ಲರ್ಕ್ ಆಗಿ ಸೇರಿ ಟಿಟಿಡಿ ಉಪ ಇಒ ಆಗಿದ್ದ ಲೋಕನಾಥಮ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದ್ದು, ಬರೋಬ್ಬರಿ 5 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ತಡೆಗೆ ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ದಾಳಿ ವಿಶೇಷ ಕಾರ್ಯಾಚರಣೆ ನಡೆಸಿದೆ. ಆಗಸ್ಟ್ 18ರಿಂದ ಸೆಪ್ಟೆಂಬರ್ 2ರವರೆಗೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ 153 ಮಳಿಗೆ ಹಾಗೂ ಗೋದಾಮುಗಳ ಮೇಲೆ ದಾಳಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ 872 ಪಿಓಪಿ ಗಣೇಶ ವಿಗ್ರಹಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬಿಜೆಪಿ ಬಳ್ಳಾರಿ ಚಲೋ ನಾಲ್ಕನೇ ದಿನದ ಪಾದಯಾತ್ರೆ ಮುಕ್ತಾಯ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ನಾಲ್ಕನೇ ದಿನದ ಪಾದಯಾತ್ರೆ ಅಂತ್ಯವಾಗಿದೆ. ನಾಲ್ಕನೇ ದಿನವಾದ ಇಂದು (ಸೆ.04) 22 ಕಿ.ಮೀ ಕ್ರಮಿಸಿರುವ ಪಾದಯಾತ್ರೆ. ನಾಳೆ (ಸೆ.05) ಕಾರಟಗಿಯಿಂದ ಕನಕಗಿರಿ ತಾಲೂಕಿನ ಮರಳಿ ಗ್ರಾಮದವರೆಗೆ ಪಾದಯಾತ್ರೆ ಸಾಗಲಿದೆ.
ಬಿಜೆಪಿಯ ಬಳ್ಳಾರಿ ಪಾದಯಾತ್ರೆ ಕೊಪ್ಪಳ ಜಿಲ್ಲೆ ಕಾರಟಗಿ ತಲುಪಿದೆ. ಇಂದು (ಸೆ,4) ನಾಲ್ಕನೇ ದಿನದ ಪಾದಯಾತ್ರೆ ಸಿಂಧನೂರಿನಿಂದ ಹೊರಟು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣ ತಲುಪಿದ್ದು, ಬಿಜೆಪಿ ಮುಖಂಡರು ವಿಜಯೇಂದ್ರ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಇನ್ನು ಇದೇ ವೇಳೆ
ಕಾರಟಗಿ ಬಸ್ ನಿಲ್ದಾಣದ ಎದುರು ಬಿಜೆಪಿ ಸಾರ್ವಜನಿಕ ಸಭೆ ಮಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಯಕರು ವಾಗ್ದಾಳಿ ನಡೆಸಿದರು.
,500 ಎಲೆಕ್ಟ್ರಿಕ್ ಬಸ್ ಪಡೆಯಲು ಸಂಪುಟ ಅನುಮೋದಿಸಿದೆ. ಈ ಬಗ್ಗೆ ಸಾರಿಗೆ ಸಚಿವ ಭೈರತಿ ಸುರೇಶ್ ಮಾಹಿತಿ ನೀಡಿದ್ದು, ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಬಸ್ ಪೂರೈಕೆಯಾಗಲಿದೆ. ಸಾರಿಗೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿಗೆ 4,500 ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆಯಾಗಲಿದೆ ಎಂದರು.
ವಿವಾದಿತ ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕವನ್ನ ವಾಪಸ್ ಪಡೆದುಕೊಳ್ಳುವುದಾಗಿ ರಾಜ್ಯ ತೀರ್ಮಾನಿಸಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧರಿಸಿದೆ. ಇದಕ್ಕೂ ಮೊದಲ ಈ ವಿಧೇಯಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಯಾವುದೇ ಕಾರಣಕ್ಕೂ ವಿಧೇಯಕಕ್ಕೆ ಸಹಿ ಹಾಕಬಾರದು ಎಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿ ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ರಾಜ್ಯಪಾಲರು ಸಹ ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ನಾಳೆ (ಸೆ.5)ವಿಜಯನಗರದ ಕೂಡ್ಲಿಗಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಜಾಸೇವೆ ಇಲಾಖೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಸೆ.04) ಸರ್ಕಾರದ ಮುಖ್ಯಕಾರ್ಯದರ್ಶಿ
ಶಾಲಿನಿ ರಜನೀಶ್ ಅವರು ಕಾರ್ಯಕ್ರಮದ ವೇದಿಕೆ ಸಿದ್ಧತೆ ಕಾರ್ಯ ಪರಿಶೀಲಿಸಿದರು. ವಿಜಯನಗರ ಜಿಲ್ಲೆ ಕೂಡ್ಲಿಗಿ ಶಾಸಕರ ಕಚೇರಿ ಮುಂದೆ ವೇದಿಕೆ ಸಿದ್ಧತೆ ಮಾಡಲಾಗಿದೆ.
ಈ ಬಾರಿಯ ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಯುವ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್ ನೇತೃತ್ವದ ಸಮಿತಿ ಸದಸ್ಯರು ಇಂದು (ಸೆಪ್ಟೆಂಬರ್ 04) ಚೆನ್ನೈಗೆ ತೆರಳಿ ಪ್ರಭುದೇವ್ ಅವರಿಗೆ ಆಹ್ವಾನ ನೀಡಿದರು.ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಯುವ ದಸರಾ ಸಮಿತಿ ಅಧಿಕೃತವಾಗಿ ಆಹ್ವಾನ ನೀಡಿದ್ದು, ಇದಕ್ಕೆ ಪ್ರಭುದೇವ್ ಸಹ ಸಮಿತಿಯ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದರು.
ಸಿಎಂ ಡಿಕೆ ಶಿವಕುಮಾರ್ ಅವರು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಂಡು ಬರ ವೀಕ್ಷಣೆ ಮಾಡಿದ್ದಾರೆ. ಇಂದು (ಸೆಪ್ಟೆಂಬರ್ 04) ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ರೈತರ ಜಮೀನುಗಳಿಗೆ ತೆರಳಿ ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದರು. ಇದೇ ವೇಳೆ ರೈತರ ಸಮಸ್ಯೆ ಆಲಿಸಿದರು
ನಾನು ಅಥವಾ ನನ್ನ ಮಗ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಕೆಎಸ್ ಈಶ್ವರಪ್ಪ ಘೋಷಣೆ ಮಾಡಿ್ದಾರೆ. ಶಿವಮೊಗ್ಗದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕರ ಜತೆ ಈ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು, ಪಕ್ಷ ಸಂಘಟನೆಗಾಗಿ ರಾಜ್ಯದಲ್ಲಿ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದೇನೆ. 2 ತಿಂಗಳೊಳಗೆ ಕೇಂದ್ರದವರ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇನೆ. ಯಾವ ಕಾರಣಕ್ಕೂ ನಾನು ಹಾಗೂ ನನ್ನ ಮಗ ಹಿಂಜರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ನಮ್ಮ ನಿರ್ಧಾರ ಅಂತಿಮ ಎಂದು ಸ್ಪಷ್ಟಪಡಿಸಿದರು.
ಪರಿಸರ ಇಲಾಖೆಯಿಂದ ಉಗಾರ್ ಶುಗರ್ಸ್ ಬಂದ್ ಮಾಡಿರುವುದನ್ನು ಖಂಡಿಸಿ ಕಾರ್ಮಿಕರು ಹಾಗೂ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ರಾಜಕೀಯ ಪ್ರೇರಿತ ನಿರ್ಧಾರ ವಾಪಸ್ ಪಡೆದು ಕಾರ್ಖಾನೆ ಆರಂಭಿಸಲು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಿಂಧನೂರಿನಿಂದ ಆರಂಭವಾದ ಬಿಜೆಪಿ ಪಾದಯಾತ್ರೆಯು ಹಂಚಿನಾಳ ಕ್ಯಾಂಪ್ ತಲುಪಿದ್ದು, ಪಾದಯಾತ್ರಿಗಳಿಗೆ ಭೋಜನ ವಿರಾಮ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಪಾದಯಾತ್ರೆ ಪುನಾರಂಭಗೊಳ್ಳಲಿದ್ದು, ಇಂದು ಸಂಜೆ ಕೊಪ್ಪಳ ಜಿಲ್ಲೆಯ ಕಾರಟಗಿಗೆ ಪ್ರವೇಶಿಸಲಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಕೂಡಲಸಂಗಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿ ಭೇಟಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಡಕೆ ಬೆಳೆಗಾರರು ಬೃಹತ್ ಪ್ರತಿಭಟನೆ ನಡೆಸಿದರು. ಗುಟ್ಕಾ ನಿಷೇಧ ಹಿಂಪಡೆಯಲು ಹಾಗೂ ಕಡೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿ ತಡೆದು ಮೆರವಣಿಗೆ ಮಾಡಿದರು. ಕೂಡಲೇ ಕಡೂರನ್ನು ಬರಪಟ್ಟಿಗೆ ಸೇರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯು ಜಾಲಿಹಾಳ ಕ್ಯಾಂಪ್ ತಲುಪಿದ್ದು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಹಾಗೂ ಹೂ ಮಳೆ ಸುರಿಸುವ ಮೂಲಕ ಪಾದಯಾತ್ರೆಯ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಸ್ಥಳೀಯ ಮುಖಂಡರು ಅತ್ಯಂತ ಉತ್ಸಾಹದಿಂದ ಬರಮಾಡಿಕೊಂಡರು.
ಕೊಡಗಿನ ಮಡಿಕೇರಿಯಲ್ಲಿ ಸರ್ಕಾರಿ ಪಡಿತರ ಅಕ್ಕಿಯನ್ನು ಕೊಡ್ಲಿಪೇಟೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಾರ್ವಜನಿಕರಿಂದ ಮಾರಾಟವಾದ ಅಕ್ಕಿಯನ್ನು ಸಂಗ್ರಹಿಸಿ ಸಾಗಿಸುತ್ತಿದ್ದ ಶಂಕೆಯಿದ್ದು, ಆಹಾರ ಇಲಾಖೆ ಅಧಿಕಾರಿ ವೀಣಾ ನೀಡಿದ ದೂರಿನನ್ವಯ ಲಾರಿ ಚಾಲಕ ರವಿ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನ ಜಗಳ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಪ್ರತಿಕ್ರಿಯಿಸಿರುವ ನಟ ದುನಿಯಾ ವಿಜಯ್, “ತಪ್ಪು ಮಾಡಿದ ಮೇಲೆ ಎಲ್ಲರೂ ಒಂದೇ. ತಂದೆಯಾಗಿದ್ದರೂ ನಾನು ಕ್ಷಮಿಸುವುದಿಲ್ಲ, ಕೋರ್ಟ್ ತೀರ್ಮಾನಕ್ಕೆ ತಲೆಬಾಗುತ್ತೇನೆ. ಮಗನಿಗೆ ಬುದ್ಧಿ ಹೇಳಿ ತಿದ್ದಿದ್ದೇನೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯು 4ನೇ ದಿನಕ್ಕೆ ಕಾಲಿಟ್ಟಿದ್ದು, ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ತಲುಪಿದೆ. ದಾರಿಯುದ್ದಕ್ಕೂ ಕಾರ್ಯಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕುತ್ತಿದ್ದು, ಪಾದಯಾತ್ರೆಯು ಕೊಪ್ಪಳ ಜಿಲ್ಲೆಯ ಕಾರಟಗಿ ಮಾರ್ಗವಾಗಿ ಮುನ್ನಡೆಯಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿಯೂ ಕ್ಯಾಪ್ಟನ್ ಕಿಂಗ್ ಅಭಿಮನ್ಯು ಭಾಗಿಯಾಗಲಿದ್ದಾನೆ. ಕೋಟ್ಯಂತರ ಅಭಿಮಾನಿಗಳ ಒತ್ತಾಯಕ್ಕೆ ಸ್ಪಂದಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಅಭಿಮನ್ಯುವನ್ನು ದಸರಾ ಮೆರವಣಿಗೆಯ ‘ನಿಶಾನೆ’ ಆನೆಯಾಗಿ ಆಯ್ಕೆ ಮಾಡಿ ಆದೇಶಿಸಿದ್ದಾರೆ. ಈಗಾಗಲೇ ಶ್ರೀಕಂಠ ಪಟ್ಟದ ಆನೆಯಾಗಿ ಆಯ್ಕೆಯಾಗಿದ್ದು, ಅಭಿಮನ್ಯುಗೆ ಅದ್ದೂರಿ ಗೌರವಗಳೊಂದಿಗೆ ಬೀಳ್ಕೊಡುಗೆ ನೀಡಲಾಗುತ್ತದೆ.
7ನೇ ತರಗತಿ ತಲುಪಿದರೂ ಅಕ್ಷರಜ್ಞಾನವಿಲ್ಲದ ವಿದ್ಯಾರ್ಥಿಗಳನ್ನು ಗುರುತಿಸಿ, ಅದಕ್ಕೆ ಕಾರಣರಾದ 1ರಿಂದ 6ನೇ ತರಗತಿ ಬೋಧಿಸಿದ ಶಿಕ್ಷಕರಿಗೆ ನೋಟಿಸ್ ನೀಡಲು ಶಾಸಕ ಪ್ರದೀಪ್ ಈಶ್ವರ್ BEOಗೆ ಪತ್ರ ಬರೆದಿದ್ದಾರೆ. ಸೂಕ್ತ ಕಾರಣ ನೀಡದಿದ್ದರೆ ಅಮಾನತಿಗೆ ಶಿಫಾರಸು ಮಾಡಲು ಹಾಗೂ ಶೈಕ್ಷಣಿಕ ಪ್ರಗತಿಗೆ ಹೊಣೆಗಾರಿಕೆ ನಿಗದಿಪಡಿಸಲು ಆಗ್ರಹಿಸಿದ್ದಾರೆ.
ಪಶುವೈದ್ಯಕೀಯ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ (CID) ತಂಡ, ಪ್ರಮುಖ ಆರೋಪಿ ಕನ್ನಾಳೆಯನ್ನು ಸ್ಥಳ ಮಹಜರಿಗೆ ಕರೆದೊಯ್ದಿದೆ. ಆರೋಪಿಯ ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ದೇವನಹಳ್ಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಅಧಿಕಾರಿಗಳು ಪ್ರಮುಖ ಸ್ಥಳ ಮಹಜರು ಹಾಗೂ ಸಾಕ್ಷ್ಯ ಸಂಗ್ರಹಣೆ ನಡೆಸುವ ಸಾಧ್ಯತೆಯಿದೆ.
ಸಾರ್ವಜನಿಕರ ವಿರೋಧಕ್ಕೆ ಮಣಿದು ಸಂಪುಟದಲ್ಲಿ ಉದ್ಯಾನವನ ಸಂರಕ್ಷಣೆ ಕಾಯ್ದೆ ತಿದ್ದುಪಡಿ ವಿಧೇಯಕ ವಾಪಸ್ ಪಡೆದಿರುವುದಾಗಿ ಹೇಳಿ ರಾಜ್ಯ ಸರ್ಕಾರ ಬೆಂಗಳೂರಿನ ಜನರಿಗೆ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ‘ಬಿಲ್ ಮತ್ತೆ ತರುತ್ತೇವೆ’ ಎನ್ನುವ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ಗಿಂತ ಸೂಪರ್ ಸಿಎಂ ರೀತಿ ವರ್ತಿಸುತ್ತಿರುವ ಅವರ ಈ ಬಿಲ್ ಬಗ್ಗೆ ಸದನದಲ್ಲಿ ಯಾವುದೇ ಚರ್ಚೆಯಾಗಬಾರದು ಎಂದು ಸಚಿವರು ಆಗ್ರಹಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಈ ಪವಿತ್ರ ಪರ್ವದಿನವು ಪ್ರತಿಯೊಬ್ಬರ ಜೀವನದಲ್ಲೂ ಸಕಾರಾತ್ಮಕ ಶಕ್ತಿ ಮತ್ತು ಭಕ್ತಿಯನ್ನು ತುಂಬಲಿ ಎಂದು ಹಾರೈಸಿ ‘ಜೈ ಶ್ರೀಕೃಷ್ಣ’ ಎಂದಿದ್ದಾರೆ.
ನವಿ ಮುಂಬೈನಿಂದ ಶ್ರೀನಗರಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನವು ಲ್ಯಾಂಡಿಂಗ್ ಬಳಿಕ ಪಾರ್ಕಿಂಗ್ ಮಾಡುವಾಗ ಏರ್‌ಪೋರ್ಟ್‌ನ ಕಂಬಕ್ಕೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಸೆಪ್ಟೆಂಬರ್ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ರಂಗೇರಿದ್ದು, ಅಧ್ಯಕ್ಷ ಗಾದಿ ಮೇಲಿರುವ ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್ ಹಾಗೂ ಎಸ್. ರವಿ ಅವರ ತೀವ್ರ ಪೈಪೋಟಿ ನಡುವೆ ಶಾಸಕ ಲಕ್ಷ್ಮಣ್ ಸವದಿ ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಚರ್ಚಿಸಿದ್ದಾರೆ.
Published On - 10:12 am, Fri, 4 September 26