Pediatrics Care: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮಹಿಳೆ, ಮಕ್ಕಳ ಆರೋಗ್ಯ ಸಂಶೋಧನೆಗೆ ಅಮೆರಿಕ ನೆರವು: ಸಾಮರ್ಥ್ಯ ವೃದ್ಧಿ, ನರ್ಸಿಂಗ್ ವಿದ್ಯಾರ್ಥಿಗಳ ವಸತಿಗೂ ಕ್ರಮ

Pediatrics Care: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮಹಿಳೆ, ಮಕ್ಕಳ ಆರೋಗ್ಯ ಸಂಶೋಧನೆಗೆ ಅಮೆರಿಕ ನೆರವು: ಸಾಮರ್ಥ್ಯ ವೃದ್ಧಿ, ನರ್ಸಿಂಗ್ ವಿದ್ಯಾರ್ಥಿಗಳ ವಸತಿಗೂ ಕ್ರಮ
ಯುಎಸ್​ಏಡ್​ನ ನಿರ್ದೇಶಕಿ ಗೀತಾ ರೆಡ್ಡಿ ಮತ್ತು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ

Baptist Hospital: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ಸಂಚಾರಿ ಮಕ್ಕಳ ಚಿಕಿತ್ಸಾ ಕೇಂದ್ರ, ಸಾಂತ್ವನ ಮತ್ತು ಆರೈಕೆ ಹಾಗೂ ಸ್ಮಾರ್ಟ್ ತರಗತಿಗಳಂತಹ ಸೇವೆಗಳೂ ಲಭ್ಯವಾಗಲಿವೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 20, 2022 | 4:40 PM

ಬೆಂಗಳೂರು: ನಗರದ ಬ್ಯಾಪ್ಟಿಸ್ಟ್​ ಆಸ್ಪತ್ರೆಯಲ್ಲಿ (Baptist Hospital) ಅಮೆರಿಕ ಸರ್ಕಾರದ ಅನುದಾನದೊಂದಿಗೆ (USAID) ಜೀವನ ಕಲಿಕೆ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಹಾಗೂ ಸಂಶೋಧನಾ ಕೇಂದ್ರ ಆರಂಭವಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಿಗುವ ವೈದ್ಯಕೀಯ ಸೇವೆಯನ್ನು (Pediatrics and Women Medical Care) ಸುಧಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಕೇಂದ್ರಗಳ ಮೂಲಕ ಅಗತ್ಯವಿರುವವರಿಗೆ 100ಕ್ಕೂ ಹೆಚ್ಚು ಬೆಡ್​ಗಳು ಲಭ್ಯವಾಗಲಿವೆ. 220ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ಲಭ್ಯವಾಗಲಿದೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

ಈ ಹೊಸ ಕೇಂದ್ರಗಳ ಭಾಗವಾಗಿ ಹೊಸ ತಂತ್ರಜ್ಞಾನಗಳೊಂದಿಗೆ ಸಂಚಾರಿ ಮಕ್ಕಳ ಚಿಕಿತ್ಸಾ ಕೇಂದ್ರ, ಸಾಂತ್ವನ ಮತ್ತು ಆರೈಕೆ ಹಾಗೂ ಸ್ಮಾರ್ಟ್ ತರಗತಿಗಳಂತಹ ಸೇವೆಗಳೂ ಲಭ್ಯವಾಗಲಿವೆ. ಭಾರತದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇತ್ತೀಚಿನ ಆವಿಷ್ಕಾರಗಳು, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ‘ಜಾಗತಿಕ ಅಭಿವೃದ್ಧಿಗೆ ಅಮೆರಿಕ ಅನುದಾನ’ (United States Agency for International Aid – USAID) ಯುಎಸ್​ಏಡ್ ಸಂಸ್ಥೆಯು ಸಹಯೋಗ ನೀಡುತ್ತಿದೆ. ಬೇಲರ್ ವಿಶ್ವವಿದ್ಯಾನಿಲಯದೊಂದಿಗಿನ ನಮ್ಮ ನಿಕಟಪಾಲುದಾರಿಕೆ ಮತ್ತು ಸಹಯೋಗದಿಂದಲೇ ಇಂದಿನ ಕಾರ್ಯಕ್ರಮ ಸಾಧ್ಯವಾಗಿದೆ ಎಂದು ಅಮೆರಿಕ ಅನುದಾನ ಸಂಸ್ಥೆಯ ಭಾರತ ದೇಶದ ನಿರ್ದೇಶಕಿ ವೀಣಾ ರೆಡ್ಡಿ ಹೇಳಿದರು.

ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಡಾ.ಸ್ಪರ್ಜನ್ ಮತ್ತು ಬೇಲರ್ ವಿಶ್ವವಿದ್ಯಾನಿಲಯದ ಡಾ.ಗಾರ್ನರ್ ಅವರ ಸಹಯೋಗದಿಂದಲೇ ಈ ಕಾರ್ಯ ಸಾಧನೆಯಾಯಿತು. ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಪರವಾಗಿ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯು ಲಾಭದ ಉದ್ದೇಶವಿಲ್ಲದೆ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದಭಾವವಿಲ್ಲದೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆ ಹೊಂದಿದೆ. ಅದರ ಮೌಲ್ಯಗಳು ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ ಯುಎಸ್​ಏಡ್ ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗಿವೆ ಎಂದು ಶ್ಲಾಘಿಸಿದರು.

ಅಮೆರಿಕ ಸರ್ಕಾರದ ಪರವಾಗಿ USAID ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಭಾರತದ ವಿವಿಧ ಯೋಜನೆಗಳಿಗೆ ನೆರವು ಒದಗಿಸಿದೆ. ಭಾರತವು ದಕ್ಷಿಣ ಏಷ್ಯಾ ಹಾಗೂ ಜಾಗತಿಕವಾಗಿ ತನ್ನ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು, ಜಾಗತಿಕ ಮಟ್ಟದಲ್ಲಿ ನೇತಾರನಾಗಿ ಹೊರಹೊಮ್ಮಲು ಅನುವಾಗುವಂತೆ ಬೆಂಬಲ ನೀಡಿದೆ. ಆಶಾ ಎಂಬ (American Schools of Hospitals Abroad Programme – ASHA) ಕಾರ್ಯಕ್ರಮದ ಮೂಲಕ 1947ರಿಂದ ಆರೋಗ್ಯ ಮತ್ತು ಶಿಕ್ಷಣದ ಆವಿಷ್ಕಾರಗಳಲ್ಲಿ ಅಮೆರಿಕದಲ್ಲಿ ನಡೆದ ಅತ್ಯುತ್ತಮವಾದ ಕೆಲಸ ಹಾಗೂ ಸಂಪನ್ಮೂಲಗಳನ್ನು ಹಲವು ದೇಶಗಳಿಗೆ ತಲುಪಿಸಲಾಗುತ್ತಿದೆ. ಈ ಪಯಣ ಇನ್ನೂ ಮುಂದುವರಿದಿದೆ ಹಾಗೂ ಕಾಲಾಂತರದಲ್ಲಿ ಸುಧೃಢ ಸಂಬಂಧಗಳನ್ನು ಬೆಳೆಸಲು ನೆರವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಭಾರತದಲ್ಲಿ ಅರೋಗ್ಯ ಸೇವೆಗಳನ್ನು ಉತ್ತಮಪಡಿಸಲು ಸಂಶೋಧನೆ, ವಿದ್ಯಾರ್ಥಿ ವೇತನ ಮತ್ತು ಸಾಮರ್ಥ್ಯವರ್ಧನೆಗಳ ಮೂಲಕ ಬೇಲರ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಜತೆಯಾಗಿ ಬಹುಕಾಲದಿಂದ ಮಾಡುತ್ತಿರುವ ಕೆಲಸಗಳನ್ನು USAID ಪ್ರಶಂಸಿಸುತ್ತದೆ ಎಂದ ಅವರು, ಭಾರತದಲ್ಲಿ ನರ್ಸ್​ಗಳ ಹೆಚ್ಚಿನ ಕಲಿಕೆಗೆ ಅನುವಾಗಲು ಫುಲ್‌ಬ್ರೈಟ್-ನೆಹರು ರಿಸರ್ಚ್ ಫ್ಲೆಕ್ಸ್ ಅನುದಾನ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂಬುದು ಹೆಮ್ಮೆಯ ವಿಷಯ ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಒಮಿಕ್ರಾನ್ ರೂಪಾಂತರಿಯಿಂದಾಗಿ ಅಮೆರಿಕದಲ್ಲಿ ಕೊವಿಡ್ ಉಲ್ಬಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆ ಇದನ್ನೂ ಓದಿ: ಭಾರತದಲ್ಲಿ ಫೆಬ್ರವರಿಯಲ್ಲಿ ಕೊರೊನಾ ಉತ್ತುಂಗಕ್ಕೆ, ದಿನಕ್ಕೆ 5 ಲಕ್ಷದಷ್ಟು ಕೇಸ್​ಗಳು ದಾಖಲಾಗುವ ಸಾಧ್ಯತೆ; ಅಮೆರಿಕ ಆರೋಗ್ಯ ತಜ್ಞರ ಎಚ್ಚರಿಕೆ

Follow us on

Related Stories

Most Read Stories

Click on your DTH Provider to Add TV9 Kannada