ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ?: ಮರ್ಮಾಂಗದ ಭಾದೆ ತಾಳಲಾರದೆ ಪ್ರಾಣಬಿಟ್ಟ 45 ವರ್ಷದ ವ್ಯಕ್ತಿ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆಂದು ಆರೋಪಿಸಲಾಗಿದೆ. ಮರ್ಮಾಂಗದ ಸಮಸ್ಯೆಗೆ ದಾಖಲಾಗಿದ್ದ ನವಾಜ್‌ಗೆ ಚಿಕಿತ್ಸೆ ನೀಡಿದರೂ, ಗಾಯಕ್ಕೆ ಹೊಲಿಗೆ ಹಾಕದೆ ಡಿಸ್ಚಾರ್ಜ್ ಮಾಡಲಾಗಿತ್ತು. ನೋವು ತಾಳಲಾರದೆ ನರಳಿ ಅವರು ಪ್ರಾಣಬಿಟ್ಟಿದ್ದು, ಅವರ ಪತ್ನಿ ಮತ್ತು ನಾಲ್ಕು ಮಕ್ಕಳು ಬೀದಿಗೆ ಬಿದ್ದಿದ್ದಾರೆ.

ಬೆಂಗಳೂರು, ಏಪ್ರಿಲ್ 22: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಎಂತಹ ಸ್ಥಿತಿಯಲ್ಲೂ ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡುವ ಕಾರಣ ದೇವರಿಗೆ ಅವರನ್ನು ಹೋಲಿಸಲಾಗುತ್ತದೆ. ಆದರೆ ಕೆಲವೊಮ್ಮೆ ಇದೇ ವೈದ್ಯರು ರೋಗಿಗಳ ಪಾಲಿಗೆ ಯಮನಾದ ಉದಾಹರಣೆಗಳೂ ಇವೆ. ಇಂತಹುದ್ದೇ ಆರೋಪವೊಂದು ಈಗ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆ (ಶಾಂತವೇರಿ ಗೋಪಾಲಗೌಡ ಆಸ್ಪತ್ರೆ) ವೈದ್ಯರ ವಿರುದ್ಧ ಕೇಳಿಬಂದಿದೆ. ಡಾಕ್ಟರ್ ನಿರ್ಲಕ್ಷ್ಯಕ್ಕೆ ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ ಎಂದು ದೂರಲಾಗಿದ್ದು, ಇದು ಇಡೀ ವೈದ್ಯ ಲೋಕವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಎಂಬ ಮಾತುಗಳು ಕೇಳಿಬಂದಿವೆ.
ಹೌದು, ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ 45 ವರ್ಷದ ಶಾ ನವಾಜ್ ಎಂಬ ವ್ಯಕ್ತಿ ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆ ಎಮರ್ಜೆನ್ಸಿ ವಿಭಾಗಕ್ಕೆ ಅವರನ್ನು ಎಡ್ಮಿಟ್ ಮಾಡಿಕೊಳ್ಳಲಾಗಿತ್ತು. ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬಳಿಕ ಚಿಕಿತ್ಸೆಗಾಗಿ ಆತನ ಮರ್ಮಾಂಗವನ್ನು ಆಸ್ಪತ್ರೆ ಸಿಬ್ಬಂದಿ ಕೊಯ್ದಿದ್ದರು. ಅದಾದ ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ತಿಳಿಸಿದ್ದರು. ಆದರೆ ಗಾಯ ಇನ್ನೂ ಆರಿಲ್ಲ ಎಂದು ಈ ವೇಳೆ ಸರ್ಜರಿ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಆಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಕೊನೆಗೆ ಕೊಯ್ದಿದ್ದ ಮರ್ಮಾಂಗಕ್ಕೆ ಹೊಲಿಗೆ ಕೂಡ ಮಾಡದೇ ಸಿಬ್ಬಂದಿ ಕಳುಹಿಸಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ?
ಪತಿ ಜೊತೆ ಫುಟ್ಪಾತ್ನಲ್ಲೇ 3 ದಿನ ಕಳೆದ ಪತ್ನಿ
ಎಷ್ಟೇ ಅಂಗಲಾಚಿದರೂ ಆಸ್ಪತ್ರೆ ಸಿಬ್ಬಂದಿ ಮತ್ತೆ ಅಡ್ಮಿಟ್ ಮಾಡಿಕೊಳ್ಳದ ಕಾರಣ ಕೊನೆಗೆ 3 ದಿನ ಫುಟ್ಪಾತ್ನಲ್ಲೇ ರೋಗಿ ಪತಿಯನ್ನು ಮಡದಿ ಇಟ್ಟುಕೊಂಡಿದ್ದರು. ಮರ್ಮಾಂಗದಿಂದ ರಕ್ತ ಸುರಿಯುತ್ತಲೇ ಇದ್ದರೂ ಹೊಲಿಗೆ ಕೂಡ ಮಾಡದೇ ನಿರ್ಲಕ್ಷ್ಯ ತೋರಿದ ಕಾರಣ ಕೊನೆಗೆ ಮರ್ಮಾಂಗದ ಭಾದೆ ತಾಳಲಾರದೆ ನವಾಜ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನವಾಜ್ರನ್ನೇ ನಂಬಿಕೊಂಡಿದ್ದ ಹೆಂಡತಿ ಹಾಗೂ ನಾಲ್ಕು ಮಂದಿ ಮಕ್ಕಳು ಘಟನೆಯಿಂದ ಬೀದಿಗೆ ಬಿದ್ದಿದ್ದು, ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಕ್ರಮದ ಭರವಸೆ
ವೈದ್ಯರ ನಿರ್ಲಕ್ಷ್ಯ ಆರೋಪದ ಬಗ್ಗೆ ತಜ್ಞರ ಸಮಿತಿ ನೇಮಿಸಿದ್ದು, ಸಮಿತಿ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಟಿವಿ9ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ದೀಪಕ್ ಮಾಹಿತಿ ನೀಡಿದ್ದಾರೆ. ನವಾಜ್ ಮೃತಪಟ್ಟ ಬಗ್ಗೆ ಅವರ ಪೋಷಕರು ನನಗೆ ಮಾಹಿತಿ ನೀಡಿದ್ದಾರೆ. ಬಲವಂತವಾಗಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ಚಿಂತನಜನಕ ಸ್ಥಿತಿಯಲ್ಲೂ ರೋಗಿಗೆ ಚಿಕಿತ್ಸೆ ಮುಂದುವರೆಸಿಲ್ಲ ಎಂದು ಹೇಳುತ್ತಿದ್ದಾರೆ. ವೈದ್ಯರ ತಪ್ಪಿನಿಂದಾಗಿ ಸಾವು ಆಗಿದ್ದರೆ ಖಂಡಿತ ಕ್ರಮ ಆಗುತ್ತೆ ಎಂದು ತಿಳಿಸಿದ್ದಾರೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:34 pm, Wed, 22 April 26




