ಬೀದರ್: ಸಮಗ್ರ ಕೃಷಿಯ ಜತೆಗೆ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ ರೈತ; ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ

ಸುಮಾರು 35 ಎಕರೆ ಜಮೀನು ಹೊಂದಿದ್ದು, ಪಪ್ಪಾಯಿ, ಕಬ್ಬು, ಕಲ್ಲಂಗಡಿ ಜತೆಗೆ ಮಾವು, ಸೇಬು ಬೆಳೆದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದೇನೆ. ಆದರೆ ನರ್ಸರಿಯಿಂದಲೇ ಹೆಚ್ಚಿನ ಲಾಭ ದೊರೆಯುತ್ತಿದೆ ಎಂದು ರೈತ ಶಾಹಜಿ ಬಿರಾದಾರ್ ತಿಳಿಸಿದ್ದಾರೆ.

ಬೀದರ್: ಸಮಗ್ರ ಕೃಷಿಯ ಜತೆಗೆ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ ರೈತ; ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ
ಸಮಗ್ರ ಕೃಷಿಯ ಜತೆಗೆ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ ರೈತ
Edited By:

Updated on: Aug 06, 2021 | 8:48 AM

ಬೀದರ್: ಜಿಲ್ಲೆಯ ರೈತರೊಬ್ಬರು ಕೃಷಿ (Agriculture) ಜತೆಗೆ ವಿವಿಧ ಬಗೆಯ ಸಸಿಗಳನ್ನು ಬೆಳೆಸಿ ಮಾರಾಟ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನರ್ಸರಿಯಲ್ಲಿ(Nursery) ಉತ್ತಮ ಗುಣಮಟ್ಟದ ಸಸಿಗಳನ್ನು(Plants) ಬೆಳೆಸಿದ್ದು, ಇದನ್ನು ಮಾರಾಟ ಮಾಡಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಸುಮಾರು ಒಂದು ಎಕರೆಯ ನೆರಳು ಪರದೆಯಲ್ಲಿ ಟೊಮ್ಯಾಟೊ, ರಾಂಪುರ ಬದನೆ, ಪಪ್ಪಾಯಿ, ಕಬ್ಬಿನ ಸಸಿಗಳನ್ನು ಬೆಳೆಸಿ ರಾಜ್ಯ ಸೇರಿದಂತೆ ಹೊರರಾಜ್ಯಕ್ಕೂ ಮಾರಾಟ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಬಿತ್ತನೆಯ ಬಿಜ ರೈತರನ್ನು ಹೈರಾಣಾಗಿಸಿದ್ದು, ಬಿತ್ತಿದ ಕಾಳು ಮೊಳಕೆಯೊಡೆಯದೆ ರೈತ ಸಂಕಷ್ಟವನ್ನು ಅನುಭವಿಸುತ್ತಿರುವುದನ್ನು ನಾವೆಲ್ಲರು ಕೇಳಿದ್ದೇವೆ. ಆದರೇ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಕಣಕಟ್ಟಾ ಗ್ರಾಮದ ರೈತ ಶಾಹಜಿ ಬಿರಾದಾರ್ ಕಳಪೆ ಗುಣಮಟ್ಟದ ಬಿತ್ತನೆ ಬಿಜದಿಂದ ರೈತರನ್ನು ಪಾರು ಮಾಡಬೇಕೆಂದು ರೈತರು ಬಯಸುವ ವಿವಿಧ ಕಂಪನಿಯ ಸಸಿಗಳನ್ನು ತಂದು, ಅವುಗಳನ್ನು ಬೆಳೆಸಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಇದರಿಂದ ತಾನು ಕೂಡಾ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ನೆಮ್ಮದಿಯ ಜೀವನ ನಡೆಯುತ್ತಿದ್ದಾರೆ.

ಶಾಹಜಿ ಬಿರಾದಾರ್ ರೈತರಿಗೆ ಬೇಕಾದ ತೋಟಗಾರಿಗೆ ಬೆಳೆಗಳಾದ ಕಬ್ಬು, ಪಪ್ಪಾಯಿ, ಕಲ್ಲಂಗಡಿ, ಬಾಳೆ, ಸೇರಿದಂತೆ ಹತ್ತಾರು ಬಗೆಯ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಉತ್ತಮ ತಳಿಯ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿರುವ ಶಾಹಜಿ ಬಿರಾದಾರ್ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇಲ್ಲಿ ಬೆಳೆದ ಸಸಿಗಳನ್ನು ರೈತರು ತಮ್ಮ ಹೊಲದಲ್ಲಿ ನಾಟಿ ಮಾಡಿದರೇ ಅವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಅಲ್ಲದೆ ಹೊಲದಲ್ಲಿ ಬಿಜಬಿತ್ತಿ ಅದು ಮೊಳಕೆಯೊಡೆಯುವುದರ ವರೆಗೆ ಕಾಯುವ ಸಮಯ ರೈತರಿಗೆ ತಪ್ಪಿಸಿದಂತಾಗಿದೆ.

ನರ್ಸರಿ

ನರ್ಸರಿಯಿಂದಲೇ ಹೆಚ್ಚಿನ ಲಾಭ
ರೈತರ ಬೇಡಿಕೆಗೆ ತಕ್ಕಂತೆ ಉತ್ತಮ ಇಳುವರಿಕೊಡುವ ಹಣ್ಣು, ತರಕಾರಿ ಹೀಗೆ ಎಲ್ಲಾ ಜಾತಿಯ ಸಸಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಇದರ ಜತೆಗೆ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ಸುಮಾರು 35 ಎಕರೆ ಜಮೀನು ಹೊಂದಿದ್ದು, ಪಪ್ಪಾಯಿ, ಕಬ್ಬು, ಕಲ್ಲಂಗಡಿ ಜತೆಗೆ ಮಾವು, ಸೇಬು ಬೆಳೆದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದೇನೆ. ಆದರೆ ನರ್ಸರಿಯಿಂದಲೇ ಹೆಚ್ಚಿನ ಲಾಭ ದೊರೆಯುತ್ತಿದೆ ಎಂದು ರೈತ ಶಾಹಜಿ ಬಿರಾದಾರ್ ತಿಳಿಸಿದ್ದಾರೆ.

ಇವರು ಬೆಳೆಸುವ ಸಸಿಗಳಿಗೆ ರಾಜ್ಯ ಅಷ್ಟೇ ಅಲ್ಲದೇ ಪಕ್ಕದ ಆಂಧ್ರ ಪ್ರದೇಶ, ತೆಲಂಗಾಣ, ಮಹರಾಷ್ಟ್ರದಿಂದಲೂ ರೈತರು ಮುಂಗಡವಾಗಿ ಹಣ ನೀಡಿ ತಮಗೆ ಬೇಕಾದ ಸಸಿಗಳನ್ನು ರೆಡಿ ಮಾಡಿಕೊಡುವಂತೆ ಹೇಳುತ್ತಾರೆ. ರೈತರ ಬೇಡಿಕೆಗೆ ತಕ್ಕಂತೆ ಶಾಹಜಿ ಬಿರಾದಾರ್ ಸಸಿಗಳನ್ನು ರೆಡಿ ಮಾಡಿ ಅವರಿಗೆ ಸರಬರಾಜು ಮಾಡುತ್ತಿದ್ದಾರೆ.

ಸಸಿ ತಯಾರಿಸಲು ಬೇಕಾದ ಗೊಬ್ಬರ ಹಾಗೂ ಪ್ಲಾಸ್ಟಿಕ್ ಹುಂಡಿಗಳನ್ನು ಪಕ್ಕದ ಮುಂಬೈ ಹಾಗೂ ಹೈದರಾಬಾದ್​ನಿಂದ ತರಿಸಿಕೊಂಡು ಸಸಿಗಳನ್ನು ಬೆಳೆಸುತ್ತಿದ್ದಾರೆ. ಸಸಿ ತಯಾರಿಸಲು ಸುಮಾರು 40 ಜನ ಮಹೀಳೆಯರು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ತಿಂಗಳಿಗೆ ಇಂತಿಷ್ಟು ಸಂಬಳವನ್ನು ನಿಗದಿ ಮಾಡಲಾಗಿದೆ. ಇನ್ನೂ ತೋಟಗಾರಿಕೆ ಇಲಾಖೆಯಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ್ ಹೇಳಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:
ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತರ ಕೈ ಹಿಡಿಯಿತು ಡ್ರ್ಯಾಗನ್​ ಫ್ರೂಟ್; ಲಾಕ್​ಡೌನ್​ ಇದ್ದರೂ​ ಆದಾಯಕ್ಕೆ ಮೋಸವಿಲ್ಲ

ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ; ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆದು ಬಂಪರ್ ಆದಾಯ ಪಡೆದ ಹಾವೇರಿ ಯುವಕ

Published On - 8:46 am, Fri, 6 August 21