ಬೀದರ್: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಿನಲ್ಲಿ ರೈತರಿಗೆ ಭಾರೀ ಮೋಸ

ಬೀದರ್ ಜಿಲ್ಲೆಯ ಸಾವಿರಾರು ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಕಂತುಗಳನ್ನು ನಿಯಮಿತವಾಗಿ ಪಾವತಿಸಿದ್ದರೂ, ಬೆಳೆ ಹಾನಿಗೊಳಗಾದಾಗ ವಿಮೆ ಹಣ ಕೈ ಸೇರಿಲ್ಲ. ಕೃಷಿ ಇಲಾಖೆ ಅಧಿಕಾರಿಗಳ ನಿರ್ದೇಶನದಂತೆ ಹಣ ಕಟ್ಟಿದ್ದ ರೈತರು, ಈಗ ವಿಮೆ ಪಾವತಿಗಾಗಿ ಅಲೆದು ಅಲೆದು ಕಂಗಾಲಾಗಿದ್ದಾರೆ. ಸದ್ಯ ಇದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೀದರ್: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಿನಲ್ಲಿ ರೈತರಿಗೆ ಭಾರೀ ಮೋಸ
ಹಾಳಾದ ಬೆಳೆ
Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2025 | 6:34 PM

ಬೀದರ್, ಅಕ್ಟೋಬರ್​ 05: ತಮ್ಮ ಹೊಲದಲ್ಲಿ ಬಿತ್ತಿದ ಬೆಳೆ (Crop) ಪ್ರಕೃತಿ ವಿಕೋಪಕ್ಕೆ ತುತ್ತಾದರೆ ಅನೂಕುಲವಾಗಲಿ ಅಂತ ನೂರಾರು ರೈತರು ತಮ್ಮ ಪೈರಿಗೆ ಬೆಳೆ ವಿಮೆ (Crop Insurance) ಮಾಡಿಸಿದ್ದರು. ಕೃಷಿ ಇಲಾಖೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರತಿ ವರ್ಷ ಇಂತಿಷ್ಟು ಅಂತ ಹಣವನ್ನ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಟ್ಟುತ್ತಾ ಬಂದಿದ್ದರು. ಆದರೆ ಆ ರೈತರಿಗೆ ನ್ಯಾಯಯುತವಾಗಿ ಬರಬೇಕಾಗದ ಬೆಳೆ ವಿಮೆ ಮಾತ್ರ ಬಂದಿಲ್ಲ. ಬೆಳೆ ವಿಮೆಗಾಗಿ ಅಲೆದು ಅಲೆದು ಸುಸ್ತಾಗಿರುವ ರೈತರು ಕಂಗಾಲಾಗಿದ್ದಾರೆ.

ಬೀದರ್ ರೈತರ ಗೋಳು ಕೇಳುವವರು ಯಾರು?

ಬೀದರ್ ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ರೈತರು ಈ ವರ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ರೈತರ ಬೆಳೆ ಹಾನಿಯ ವಿಮೆ ಹಣ ರೈತರ ಕೈ ಸೇರಿಲ್ಲ. ರೈತರ ಗೋಳನ್ನ ಯಾರು ಕೇಳುವವರಿಲ್ಲದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಂದ ಸಾವಿರಾರು ರೂ. ಬೆಳೆ ವಿಮೆ ಮಾಡಿಸಿಕೊಂಡು ಈಗ ರೈತರಿಗೆ ಹಣವನ್ನ ಕೊಡದೆ ಅಧಿಕಾರಿಗಳು ಬಡ ರೈತರ ಬದುಕಿನ ಜೊತೆಗೆ ಆಟವಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಗೃಹ ಮಂಡಳಿಗಾಗಿ ಭೂ ಸ್ವಾಧೀನಕ್ಕೆ ಪ್ಲ್ಯಾನ್​: ಸರ್ಕಾರದ ನಡೆಗೆ ಸಿಡಿದೆದ್ದ ರೈತರು

ಸಾಲಸೋಲ ಮಾಡಿ ಬಿತ್ತಿದ ಬೆಳೆ ಬರಗಾಲದಿಂದಲೋ ಅಥವಾ ಪ್ರಕೃತಿ ವಿಕೋಪದಿಂದಲೋ ಬೆಳೆ ನಾಶವಾದರೆ ಬೆಳೆ ವಿಮೆಯಲ್ಲಾದರೂ ನಾವು ಕಳೆದುಕೊಂಡ ಹಣ ಸಿಗುತ್ತದೆ ಎಂದುಕೊಂಡಿದ್ದ ರೈತರಿಗೆ ನಿರಾಶೆಯಾಗಿದೆ. ಫಸಲ್ ಭೀಮಾ ಯೋಜನೆ ಜಾರಿಯಾದಾಗಿನಿಂದಲೂ ರೈತರು ಬೆಳೆ ವಿಮೆ ಮಾಡಿಸುತ್ತಲೇ ಬಂದಿದ್ದಾರೆ. ಪ್ರತಿ ವರ್ಷ ಕೂಡ ರೈತರು ಅತಿವೃಷ್ಠಿ ಅಥವಾ ಅನಾವೃಷ್ಠಿಯಿಂದ ಬೆಳೆ ನಾಶವಾಗುತ್ತಲೇ ಇದೆ, ಆದರೆ ರೈತರಿಗೆ ಬರಬೇಕಾದ ಬೆಳೆ ವಿಮೆ ಮಾತ್ರ ರೈತರ ಕೈ ಸೇರಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ರೈತರು ಸಾಲ ಮಾಡಿ ಬಿತ್ತಿದ ಬೆಳೆ ಈ ವರ್ಷ ರೈತರ ಕಣ್ಮುಂದೆಯೇ ನಾಶವಾಗಿದ್ದರಿಂದ ರೈತರು ಹೈರಾಣಾಗಿದ್ದಾರೆ.

ರೈತರಿಗೆ ಅನುಕೂಲವಾಗಲಿ ಅಂತಾ ಕೇಂದ್ರ ಸರಕಾರ ಫಸಲ್ ಭೀಮಾ ಯೋಜನೆ ಹೆಸರಿನಲ್ಲಿ ಬೆಳೆ ವಿಮೆ ಮಾಡಿಸಲು ಸಲಹೆ ನೀಡಿತ್ತು. ಇದರಿಂದ ಜಿಲ್ಲೆಯಲ್ಲಿ ಈ ವರ್ಷ ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಹೆಸರು ನೊಂದಾಯಿಸಿ ಹಣ ಕಟ್ಟಿ ಬೆಳೆ ವಿಮೆ ಮಾಡಿಸಿದ್ದಾರೆ. ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತಮ್ಮ ಬೆಳೆಗೆ ಬೆಳೆ ವಿಮೆಯನ್ನ ಮಾಡಿಸಿ ಅಲ್ಲಿಯೇ ಹಣವನ್ನ ತುಂಬುವಂತೆ ಕೃಷಿ ಇಲಾಖೆಯ ಅಧಿಕಾರಿ ರೈತರಿಗೆ ಸಲಹೆಯನ್ನ ನೀಡಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಬ್ಯಾಂಕ್​ನಲ್ಲಿ ಹಣ ಸಂದಾಯ ಮಾಡಿ ರಸೀದಿ ಪಡೆದಿದ್ದಾರೆ. ಆದರೆ ಸಂಕಷ್ಟದ ಪರಿಸ್ಥಿಯಲ್ಲಿ ಬೆಳೆಹಾನಿಯಾದಾಗ ಕೈ ಸೇರಬೇಕಾದ ಹಣವೇ ಈಗ ರೈತರಿಗೆ ಬರುತ್ತಿಲ್ಲ. ಜಿಲ್ಲೆಯ ಸಾವಿರಾರು ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಣವೇ ಶೇಕಡಾ 80 ರಷ್ಟು ರೈತರಿಗೆ ಇಂದಿಗೂ ಬಂದಿಲ್ಲ. ಅವರು ಪ್ರತಿವರ್ಷ ಕೂಡ ಹಣ ಕಟ್ಟುತ್ತಲೇ ಇದ್ದಾರೆ. ಆದರೆ ಅವರಿಗೆ ಬೆಳೆ ವಿಮೆ ಹಣ ಬಾರದಿರುವುದು ರೈತರನ್ನ ಗಾಬರಿಗೊಳಿಸಿದೆ.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಮತ್ತೊಂದು ಭೂಸ್ವಾಧೀನ ವಿವಾದ: ರೈತರ ಜಮೀನು ಬಿಎಂಟಿಸಿ ಡಿಪೋಗೆ ಮಂಜೂರು

ವಿಮೆಗೆ ಕಟ್ಟಿದ ಹಣವೂ ಇಲ್ಲಾ, ಜೊತೆಗೆ ಬೆಳೆ ನಾಶವಾಗಿರುವುದಕ್ಕೆ ಇನ್ಸೂರೆನಸ್ ಹಣವೂ ಬಾರದಿರುವುದು ಅಧಿಕಾರಿಗಳ ವಿರುದ್ದ ರೈತರು ತಿರುಗಿ ಬಿದ್ದಿದ್ದಾರೆ. ಬಿತ್ತಿದ ಬೆಳೆ ನಾಶವಾದರೆ ಬೆಳೆ ವಿಮೆಯಲ್ಲಾದರೂ ಮರಳಿ ಹಣ ಬರಬಹು ಎಂದುಕೊಂಡಿದ್ದ ರೈತರೀಗ ಆಕ್ರೋಶಗೊಂಡಿದ್ದು, ಕೂಡಲೇ ನಮ್ಮ ಬೆಳೆ ವಿಮೆ ಹಣ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.