
ಬೀದರ್, ನವೆಂಬರ್ 03: ಬೀದರ್ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಹಾನಗರ ಪಾಲಿಕೆಯ ಸಿಬ್ಬಂದಿ ಕಂಗಾಲಾಗಿದ್ದಾರೆ. ಕಳೆದ 8 ತಿಂಗಳಿಂದ ಸಂಬಳವಿಲ್ಲದೆ 54 ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಗೆ ನೀರು ಪೂರೈಕೆಯನ್ನೆ ಬಂದ್ ಮಾಡಿ ಪ್ರತಿಭಟನೆಗೆ ಇಳಿದಿದ್ದಾರೆ. ಸಂಬಳ ಕೊಡುವ ಭರವಸೆ ಸಿಗುವವರೆಗೂ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದೆಡೆ ಬೀದರ್ ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ಜವಾಬ್ದಾರಿ. ಮತ್ತೊಂದೆಡೆ ಎಂಟು ತಿಂಗಳಿಂದ ಕೈ ಸೇರದ ಸಂಬಳ. ದುಡಿದರೂ ವೇತನವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಇದು ಬೀದರ್ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ ಸಿಬ್ಬಂದಿಯ ದುಸ್ಥಿತಿ. ಇಂಜಿನಿಯರ್‌ಗಳು, ಪ್ರಯೋಗಾಲಯ ತಂತ್ರಜ್ಞರು, ಪಂಪ್ ಆಪರೇಟರ್‌ಗಳು, ವಾಲ್ವ್‌ಮ್ಯಾನ್‌ಗಳು, ನೀರಿನ ಬಿಲ್ ಕಲೆಕ್ಟರ್‌ಗಳು ಸೇರಿದಂತೆ ಒಟ್ಟು 54 ಸಿಬ್ಬಂದಿಗೆ ಕಳೆದ ಎಂಟು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ದಿನನಿತ್ಯದ ಖರ್ಚುಗಳಿಗೆ ಹಣ ಹೊಂದಿಸಲಾಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರ್‌ನಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಸಂಬಳ ಬಿಡುಗಡೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಸಿಬ್ಬಂದಿಯ ಮನವಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಿಬ್ಬಂದಿ, ಭಾಲ್ಕಿ ತಾಲೂಕಿನ ನೀಲಮ್ಮನಹಳ್ಳಿ ತಾಂಡಾ ಸಮೀಪದ ನೀರು ಶುದ್ಧೀಕರಣ ಘಟಕದ ಬಳಿ ಧರಣಿ ನಡೆಸಿದ್ದಾರೆ.
ಕೇವಲ ಧರಣಿಗೆ ಸೀಮಿತವಾಗದ ಸಿಬ್ಬಂದಿ, ಕೆಲಸ ಕಾರ್ಯ ಸ್ಥಗಿತಗೊಳಿಸಿ ಬೀದರ್ ನಗರಕ್ಕೆ ನೀರು ಪೂರೈಕೆಯನ್ನೂ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬಾಕಿ ಇರುವ ಎಂಟು ತಿಂಗಳ ಸಂಬಳವನ್ನು ತಕ್ಷಣ ಬಿಡುಗಡೆ ಮಾಡಬೇಕು. ವೇತನ ಪಾವತಿ ಕುರಿತು ಸ್ಪಷ್ಟ ಭರವಸೆ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ: ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಒಟ್ಟಿನಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವ ಸಿಬ್ಬಂದಿಯೇ ಇಂದು ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಬ್ಬಂದಿಯ ಪ್ರತಿಭಟನೆಯಿಂದ ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡುತ್ತಾರಾ ಅಥವಾ ಸಿಬ್ಬಂದಿಯ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Tue, 3 November 26