ಖಾಸಗಿ ಶಾಲೆಗಳಿಗೆ ಸವಾಲೆಸೆದ ಬೀದರ್‌ನ ಸರ್ಕಾರಿ ಶಾಲೆ; ಶಿಕ್ಷಕರ ಸ್ವಂತ ಹಣದಲ್ಲೇ ಸ್ಕೂಲ್ ಅಭಿವೃದ್ಧಿ!
ಬೀದರ್ ತಾಲೂಕಿನ ಯಾಕತಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸ್ವಂತ ಹಣದಿಂದ ಶಾಲೆಯನ್ನು ಉದ್ಯಾನವನದಂತೆ ಕಂಗೊಳಿಸುವಂತೆ ಮಾಡಿದ್ದಾರೆ. 300ಕ್ಕೂ ಹೆಚ್ಚು ಗಿಡಗಳು, ಆಕರ್ಷಕ ರೇಖಾಚಿತ್ರಗಳು ಹಾಗೂ ಉತ್ತಮ ಮೂಲಸೌಕರ್ಯಗಳ ಮೂಲಕ 182 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಮಾದರಿಯಾಗಿ ಹೊರಹೊಮ್ಮಿದೆ.

ಮುಖ್ಯಾಂಶಗಳು
- ಬೀದರ್‌ನ ಯಾಕತಪುರ ಸರಕಾರಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕರಿಂದಲೇ ಸ್ವಂತ ಹಣ ಸಂಗ್ರಹ.
- ಶಾಲಾ ಆವರಣದಲ್ಲಿ ಕಿರು ಉದ್ಯಾನವನ, 300ಕ್ಕೂ ಹೆಚ್ಚು ಗಿಡಗಳ ಪಾಲನೆ-ಪೋಷಣೆ.
- ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 182 ವಿದ್ಯಾರ್ಥಿಗಳಿಂದ ಗುಣಮಟ್ಟದ ಶಿಕ್ಷಣ ಕಲಿಕೆ.
ಬೀದರ್, ಸೆಪ್ಟೆಂಬರ್ 25: ಸರಕಾರಿ ಶಾಲೆಗಳೆಂದರೆ ಮೂಲಸೌಕರ್ಯ ಹಾಗೂ ಸೌಲಭ್ಯಗಳ ಕೊರತೆ ಎಂಬ ಅಪವಾದವೇ ಹೆಚ್ಚು. ಆದರೆ ಬೀದರ್ ತಾಲೂಕಿನ ಯಾಕತಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಹೈಟೆಕ್ ಶಾಲೆಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಮಾದರಿಯಾಗಿ ಬೆಳೆದು ನಿಂತಿದೆ. ಶಾಲೆಯ ಶಿಕ್ಷಕರೇ ತಮ್ಮ ಸ್ವಂತ ಹಣದಲ್ಲಿ ಬೆಂಚ್ ವ್ಯವಸ್ಥೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.
ಶಿಕ್ಷಕರ ಸ್ವಂತ ನಿಧಿಯಿಂದ ಬದಲಾವಣೆ
ಶಾಲೆಯ ಅಭಿವೃದ್ಧಿಗೆ ಕೇವಲ ಸರಕಾರಿ ಅನುದಾನವನ್ನೇ ನಂಬಿ ಕುಳಿತುಕೊಳ್ಳದೆ, ಮುಖ್ಯಾಧ್ಯಾಪಕ ವಿನಾಯಕ ಚೌಹಾನ್ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಸಹ ಶಿಕ್ಷಕ ಕಮಲಾಕರ್ ಸೇರಿದಂತೆ ಸಿಬ್ಬಂದಿ ವರ್ಗದವರು ತಮ್ಮ ಸ್ವಂತ ಹಣವನ್ನು ಸಂಗ್ರಹಿಸಿ ಮೂಲಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಶಾಲಾ ಕೊಠಡಿಗಳಿಗೆ ಬೆಂಚ್‌ಗಳ ವ್ಯವಸ್ಥೆ, ಗೋಡೆಗಳ ಮೇಲೆ ರೈಲು ಹಾಗೂ ಬಸ್‌ಗಳ ಆಕರ್ಷಕ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ.
300ಕ್ಕೂ ಹೆಚ್ಚು ಗಿಡಗಳು, ಕಿರು ಉದ್ಯಾನವನ
ಮಕ್ಕಳಿಗೆ ಪಠ್ಯವನ್ನೊಂದು ಕಲಿಸಿದರೆ ಸಾಲದು, ಪಾಠದ ಜತೆಗೆ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಕಿರು ಉದ್ಯಾನವನ ನಿರ್ಮಿಸಲಾಗಿದೆ. ಶಾಲೆಯ ಸುತ್ತಮುತ್ತ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಅವುಗಳ ಪೋಷಣೆಯ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ವಹಿಸಿಕೊಂಡಿದ್ದಾರೆ. ಪ್ರಾಯೋಗಿಕವಾಗಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಇಲ್ಲಿ ಮಕ್ಕಳಿಗೆ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ: ಜೆಸ್ಕಾಂ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ
ಹೆಚ್ಚಿದ ವಿದ್ಯಾರ್ಥಿಗಳ ದಾಖಲಾತಿ
ಪ್ರಸ್ತುತ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಒಟ್ಟು 182 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದರಲ್ಲಿ ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿರುವುದು ಶಾಲೆಯ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರ ಬದ್ಧತೆಗೆ ಸಿಕ್ಕ ಮೆಚ್ಚುಗೆಯಾಗಿದೆ. ಶಿಕ್ಷಕರ ಇಚ್ಛಾಶಕ್ತಿ ಹಾಗೂ ಪರಿಶ್ರಮಕ್ಕೆ ಗ್ರಾಮಸ್ಥರು ಮತ್ತು ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಈ ಶಾಲೆ ಗ್ರಾಮೀಣ ಶಿಕ್ಷಣ ವ್ಯವಸ್ಥೆಗೆ ಹೊಸ ಭರವಸೆಯ ಬೆಳಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




