ಪ್ರಕಾಶ್ ಖಂಡ್ರೆಯಿಂದ ಬೆದರಿಕೆಯಿದೆ, ಶಾಸಕನಾದ ನನಗೆ ರಕ್ಷಣೆ ಇಲ್ಲದಂತಾಗಿದೆ; ಈಶ್ವರ್ ಖಂಡ್ರೆ ಆರೋಪ
ಶಾಸಕನಾಗಿರುವ ನನಗೆ ಪ್ರಾಣಾಪಾಯವಿದೆ, ಭದ್ರತೆ ಕೊಡಿ ಎಂದು ಕೇಳಿದ್ದೆ. ಆದರೆ, ನನಗೆ ನೀಡಿದ್ದ ಭದ್ರತೆಯನ್ನು ಪೊಲೀಸರು ಹಿಂಪಡೆದಿದ್ದಾರೆ ಎಂದು ಬೀದರ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಬೀದರ್: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಕಡೆಯವರಿಂದ ನನಗೆ ಬೆದರಿಕೆಯಿದೆ. ಪ್ರಕಾಶ್ ಖಂಡ್ರೆ ಇಂದು ಮುಂಜಾನೆಯಿಂದ ನನ್ನ ಫಾಲೋ ಮಾಡಿದ್ದಾರೆ. ಅವರ ಕಡೆಯವರು ಇಂದು ಬೆಳಗ್ಗೆಯಿಂದ 3 ಬಾರಿ ನನ್ನ ಕಾರಿಗೆ ಅಡ್ಡ ಹಾಕಿದ್ದಾರೆ. ಗೂಂಡಾಗಳು, ಪ್ರಕಾಶ ಖಂಡ್ರೆ ನನ್ನ ಹಿಂದೆ ಓಡಾಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿಗೆ ಬಂದು ಧಮ್ಕಿ ಹಾಕಿದ್ದಾರೆ. ಪೊಲೀಸರು ಕೂಡ ಇದನ್ನೆಲ್ಲ ಕಂಡೂ ಕಾಣದಂತೆ ಕುಳಿತಿದ್ದರು. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೀದರ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಶಾಸಕನಾಗಿರುವ ನನಗೆ ಪ್ರಾಣಾಪಾಯವಿದೆ, ಭದ್ರತೆ ಕೊಡಿ ಎಂದು ಕೇಳಿದ್ದೆ. ಆದರೆ, ನನಗೆ ನೀಡಿದ್ದ ಭದ್ರತೆಯನ್ನು ಪೊಲೀಸರು ಹಿಂಪಡೆದಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಅವರೇ ಕಾರಣ ಎಂದು ಬೀದರ್ನಲ್ಲಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಬೀದರ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿ ನಡೆಸಿದ್ದು, ಬೀದರ್ ಜಿಲ್ಲೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಹಣದ ಹೊಳೆಯೇ ಹರಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಮತದಾರರಿಗೆ ಹಣ, ಬೆಳ್ಳಿ ನಾಣ್ಯ, ಸೀರೆಯನ್ನು ಬಹಿರಂಗವಾಗಿ ಕೊಟ್ಟಿದ್ದರು. ಆದರೆ ಬಿಜೆಪಿಯ ಜನ ವಿರೋಧಿ ನೀತಿಯಿಂದಾಗಿ ಮತದಾರ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಅವನತಿ ಇಂದಿನಿಂದ ಆರಂಭವಾಗಿದೆ ಎಂದು ಹೇಳಿದ್ದಾರೆ.
ಇನ್ನು, ಸರ್ಕಾರ ಕೊಟ್ಟಿರುವ ಎಸ್ಕಾರ್ಟ್ ಬಿಟ್ಟು ಮತಗಟ್ಟೆ ಬಳಿ ಹಾಕಿರುವ ಬೌಂಡರಿಯೊಳಗೆ ಬನ್ನಿ ನೋಡೋಣ ಎಂದು ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಬೀದರ್ನಲ್ಲಿ ಸವಾಲು ಹಾಕಿದ್ದರು.
ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ದಿನ 30 ಜೀವಗಳು ಬಲಿಯಾಗುತ್ತಿವೆ, ಆಕ್ಸಿಜನ್ ಕೊರತೆಗೆ ಸರ್ಕಾರದ ವಿರುದ್ಧ ಖಂಡ್ರೆ ಆಕ್ರೋಶ