ಬೀದರ್ ಜಿಲ್ಲೆಯಲ್ಲಿ ನಿಲ್ಲುತ್ತಿಲ್ಲ ರೈತರ ಸರಣಿ ಆತ್ಮಹತ್ಯೆಗಳು: ಅತಿವೃಷ್ಟಿ, ಅನಾವೃಷ್ಟಿ, ಸಾಲದ ಸುಳಿ, ಸರ್ಕಾರದ ನಿರ್ಲಕ್ಷ್ಯ ಕಾರಣಗಳು!
Bidar: ಮೂರು ವರ್ಷಗಳಲ್ಲಿ ಬೀದರ್ ಜಿಲ್ಲೆಯೊಂದರಲ್ಲೇ 67 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕ ರೈತರ ಆತ್ಮಹತ್ಯೆಗೆ ಬ್ಯಾಂಕ್ ಹಾಗೂ ಖಾಸಗಿ ಸಾಲವೇ ಕಾರಣವಾಗಿರುವುದು ಸ್ಪಷ್ಟವಾಗಿದೆ.
ಆ ಜಿಲ್ಲೆಯಲ್ಲಿ ಅನ್ನದಾತರ (Farmers) ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಅತಿವೃಷ್ಟಿಯೋ, ಅನಾವೃಷ್ಟಿಯೋ (Drought, Bidar Rains) ಒಟ್ಟಿನಲ್ಲಿ ಯಾವುದೋ ಒಂದು ಬಾಬತ್ತಿಲ್ಲಿ ಸಾಲದ (Loan) ಸುಳಿಗೆ ಸಿಲುಕಿ, ಅದರಿಂದ ಹೊರಬರಲಾರದೆ ಅನ್ನದಾತರು ಆತ್ಮಹತ್ಯೆಗೆ (Suicide) ಶರಣಾಗುತ್ತಿದ್ದಾರೆ. ದುರಂತವೆಂದರೆ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಹತ್ತಾರು ಆತ್ಮಹತ್ಯೆ ಪ್ರಕರಣಗಳು ಘಟಿಸುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಸಾಲ ಮನ್ನಾ, ಬೆಳೆ ವಿಮೆ ಆಸರೆ ಇದ್ದರೂ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ… ಬೀದರ್ ಜಿಲ್ಲೆಯಲ್ಲಿ ರೈತರ ಸಾವಿನ ಪ್ರಕರಣಗಳು ಕಡಿಮೆಯಾಗಿಲ್ಲ. ಎರಡು ವರ್ಷದಲ್ಲಿ 67 ಅನ್ನದಾತರು ಆತ್ಮಹತ್ಯೆಗೆ ಶರಣು ಎಂದಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸಿ, ಆತ್ಮಹತ್ಯೆ ತಗ್ಗಿಸುವ ಪ್ರಯತ್ನವೆ ನಡೆಯುತ್ತಿಲ್ಲ ಜಿಲ್ಲೆಯಲ್ಲಿ. ಅತಿವೃಷ್ಟಿ/ ಅನಾವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿ ನೇಗಿಲ ಯೋಗಿ ಆತ್ಮಹತ್ಯೆಗೆ ಶರಣು ಎನ್ನುತ್ತಿದ್ದಾನೆ.
ಹೌದು ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬೀದರ್ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಬ್ಬು, ಉದ್ದು, ಹೆಸರು, ಸೋಯಾಬಿನ್, ಶುಂಠಿ, ಭತ್ತ ಹೀಗೆ ಹತ್ತುಹಲವು ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯ ಒಂದಷ್ಟು ಕಡೆ ನೀರಾವರಿಯ ಸೌಲಭ್ಯವೂ ಇದೆ. ಆದರೆ, ಇವ್ಯಾವೂ ರೈತರನ್ನು ಗಟ್ಟಿಗೊಳಿಸುತ್ತಿಲ್ಲ ಎನ್ನುವುದು ರೈತರ ಆತ್ಮಹತ್ಯೆಯ ಸಂಖ್ಯೆಗಳೇ ದೃಢಪಡಿಸುತ್ತಿವೆ.
ಮೂರು ವರ್ಷಗಳಲ್ಲಿ ಬೀದರ್ ಜಿಲ್ಲೆಯೊಂದರಲ್ಲೇ ಬರೋಬ್ಬರಿ 67 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕ ರೈತರ ಆತ್ಮಹತ್ಯೆಗೆ ಬ್ಯಾಂಕ್ ಹಾಗೂ ಖಾಸಗಿ ಸಾಲವೇ ಕಾರಣವಾಗಿರುವುದು ಸ್ಪಷ್ಟವಾಗಿದೆ. ಬರಗಾಲ, ಸಾಲ ಮತ್ತಿತರೆ ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರದ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳಿದ್ದ ಮೇಲೂ ರೈತರ ಸರಣಿ ಆತ್ಮಹತ್ಯೆ ನಿಲ್ಲದಿರುವುದು ಕಳವಳಕಾರಿಯಾದ ಬೆಳವಣಿಗೆಯಾಗಿದೆ. 2020-21ನೇ ಸಾಲಿನಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2021- 22ನೇ ವರ್ಷದಲ್ಲಿ 21 ರೈತರು ಜೀವ ಕಳೆದುಕೊಂಡಿದ್ದಾರೆ. 2022- 23ನೇ ಸಾಲಿನಲ್ಲಿ 4 ರೈತರು ಜೀವ ಕಳೆದುಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಬರೀ ಮೂರು ವರ್ಷದಲ್ಲಿ 67 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಸರಕಾರ ಸಾಲ ಮನ್ನಾ ಮಾಡಿದೆ. ರೈತರಿಗಾಗಿ ಹಲವು ಯೋಜನೆಗಳನ್ನೂ ಜಾರಿಗೆ ತಂದಿದೆ. ಇದರಿಂದಲೂ ರೈತರು ಎದ್ದು ನಿಲ್ಲಲು ಆಗದೇ ಇರುವುದು ದುರಾದೃಷ್ಟ ಎನ್ನುವಂತಾಗಿದೆ. ಮಳೆಯು ಜಿಲ್ಲೆಯ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರೂ ತಪ್ಪಾಗದು. ಒಮ್ಮೆ ಅತಿವೃಷ್ಟಿ/ ಮತ್ತೊಮ್ಮೆ ಅನಾವೃಷ್ಟಿ. ಎರಡು ರೀತಿಯಿಂದಲೂ ರೈತರಿಗೆ ನಷ್ಟವಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬರಗಾಲ ಜಿಲ್ಲೆಯಲ್ಲಿ ಮಂಡಿಯೂರಿದ್ದು, ರೈತ ಕುಸಿದು ಹೋಗುವಂತಾಗಿದೆ.
ಬೆಳೆ ಬೆಳೆಯದ ಕಾರಣ ಸಾಲ ಮಾಡುವುದು ಅನಿವಾರ‍್ಯವಾಗಿದೆ. ಸಾಲ ತೀರಿಸಲಾಗದೇ ಸ್ವಾಭಿಮಾನಿಯಾದ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಂಡು ಬರುತ್ತಿದೆ. ಮಳೆ ಇಲ್ಲದ ಸಮಯದಲ್ಲಿ ಸರಕಾರ ಸಕಾಲದಲ್ಲಿ ರೈತರ ನೆರವಿಗೂ ಬಾರದೇ ಇರುವುದು ಒಂದು ಕಾರಣ ಎನ್ನಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಬರ ಪರಿಹಾರ, ಬೆಳೆ ವಿಮೆ, ಕಬ್ಬಿನ ಬಾಕಿ ಹಣ ಇನ್ನೂ ರೈತರ ಕೈಗೆ ಸಿಗದೇ ಜಿಲ್ಲೆಯ ಅನ್ನದಾತರು ಪರದಾಡುವಂತಾಗುತ್ತಿದೆ.
2020-21 ರಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಬೀದರ್ ತಾಲೂಕಿನಲ್ಲಿ 4 ರೈತರು, ಭಾಲ್ಕಿಯಲ್ಲಿ 18, ಬಸವಕಲ್ಯಾಣದಲ್ಲಿ 8, ಹುಮನಾಬಾದ್‌ನಲ್ಲಿ 8 ಹಾಗೂ ಔರಾದ್ ತಾಲೂಕಿನಲ್ಲಿ 4 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2021-22 ರಲ್ಲೂ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಬೀದರ್‌ನಲ್ಲಿ 0, ಭಾಲ್ಕಿಯಲ್ಲಿ 7, ಬಸವಕಲ್ಯಾಣದಲ್ಲಿ 3, ಹುಮನಾಬಾದ್‌ನಲ್ಲಿ 5 ಹಾಗೂ ಔರಾದ್‌ನಲ್ಲಿ 6 ರೈತರು ಜೀವ ಕಳೆದುಕೊಂಡಿದ್ದಾರೆ. 2022-23ರಲ್ಲಿ 4 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಬಸವಕಲ್ಯಾಣ 2, ಔರಾದ್‌ನಲ್ಲಿ 2 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಬೀದರ್ ಜಂಟಿ ಕೃಷಿ ನಿರ್ದೇಶಕರಾದ ರತೇಂದ್ರನಾಥ್ ಸೊಗೂರು ಹೇಳುತ್ತಿದ್ದಾರೆ.
ಕಳೆದ ಮೂರು ವರ್ಷದಲ್ಲಿ ರೈತರು ಒಂದಿಲ್ಲೊಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಲೆ ಇದ್ದಾರೆ. ಸರಕಾರ ರೈತರಿಗೆ ಅನೂಕೂಲಕ್ಕಾಗಿ ರೈತರನ್ನ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಹತ್ತಾರು ಯೋಜನೆಯನ್ನ ಜಾರಿಗೆ ತಂದರು ಕೂಡಾ ರೈತರ ಆತ್ಮಹತ್ಯೆಯನ್ನ ತಡೆಯಲು ಸಾಧ್ಯವಾಗುತ್ತಿಲ್ಲ. ಸರಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ರೈತರ ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡುವ ನಿರ್ಧಾರ ಕೈಗೊಳ್ಳುತ್ತಿದ್ದಾನೆ ಎಂದು ತಿಳಿದು ಆ ಸಮಸ್ಯೆಗೆ ಪರಿಹಾರ ಹುಡುಕಿ ರೈತರ ಆತ್ಮಹತ್ಯೆಗೆ ಬ್ರೇಕ್ ಹಾಕಬೇಕಾಗಿದೆ.
ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್