AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಖಂಡಿಸುತ್ತಾರಾ? ಸಂಸದ ಲೆಹರ್ ಸಿಂಗ್ ಪ್ರಶ್ನೆ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ ಬಗ್ಗೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಪ್ರತಿಕ್ರಿಯಿಸಿದ್ದಾರೆ. "ನಾನು ಅವರನ್ನು ಅಭಿನಂದಿಸುತ್ತೇನೆ, ಆದರೆ ಇದರೊಂದಿಗೆ ಅವರು ಜನರ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿದ್ದರೆ, ಅದು ಸಾರ್ವಜನಿಕರಿಗೆ ಒಳ್ಳೆಯದಾಗುತ್ತಿತ್ತು. ಅದು ಸಕಾರಾತ್ಮಕ ಸಾಧನೆಯಾಗುತ್ತಿತ್ತು" ಎಂದು ಲೆಹರ್ ಸಿಂಗ್ ಹೇಳಿದ್ದಾರೆ.

ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಖಂಡಿಸುತ್ತಾರಾ? ಸಂಸದ ಲೆಹರ್ ಸಿಂಗ್ ಪ್ರಶ್ನೆ
Lehar Singh
ಸುಷ್ಮಾ ಚಕ್ರೆ
|

Updated on: Jan 06, 2026 | 7:24 PM

Share

ಬೆಂಗಳೂರು, ಜನವರಿ 6: ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಮುರಿದಿದ್ದಾರೆ. ಕರ್ನಾಟಕದ ಅತ್ಯಂತ ಯಶಸ್ವಿ ರಾಜಕಾರಣಿಗಳಲ್ಲಿ ಒಬ್ಬರಾದ ಸಿದ್ದರಾಮಯ್ಯ 2 ಬಾರಿ ಉಪಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಜೆಡಿಎಸ್​​ನಿಂದ ಕಾಂಗ್ರೆಸ್​ ಪಕ್ಷಕ್ಕೆ ಬಂದ ನಂತರ ಮುಖ್ಯಮಂತ್ರಿ ಹುದ್ದೆಗೇರಿದ ಅವರು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವುದಕ್ಕೆ ಹಲವು ನಾಯಕರು ಅಭಿನಂದಿಸಿದ್ದಾರೆ. ಇದರ ನಡುವೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿಎಂ ಸಿದ್ದರಾಮಯ್ಯನವರ ಈ ಸಾಧನೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯ ಅವರು ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯ ಬಗ್ಗೆ ನನ್ನ ಗಮನಕ್ಕೆ ಬಂದಿತು. ಇಂದಿನ ಪತ್ರಿಕೆಗಳು ಡಿ. ದೇವರಾಜ ಅರಸ್ ಅವರ ದಾಖಲೆಯನ್ನು ಮೀರಿ ಸಿದ್ದರಾಮಯ್ಯ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದಾರೆ ಎಂದು ವರದಿ ಮಾಡಿವೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರಿಗೆ ಒಂದು ಸಣ್ಣ ಸಂಗತಿಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ ಎಂದು ಲೆಹರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸುದೀರ್ಘ ಜನಸೇವೆಯ ಸಾರ್ಥಕ ಕ್ಷಣ: ನಿಮ್ಮೆಲ್ಲರ ಸೇವೆಗೈಯ್ಯುವ ಈ ಅವಕಾಶಕ್ಕಾಗಿ ಚಿರಋಣಿ; ಸಿಎಂ ಸಿದ್ದರಾಮಯ್ಯ

ದೇವರಾಜ ಅರಸು ಮಾರ್ಚ್ 1972ರಿಂದ ಜನವರಿ 1980ರವರೆಗೆ ನಿರಂತರ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯನವರಂತೆ ದೇವರಾಜ ಅರಸು ಅವರ ಅಧಿಕಾರಾವಧಿ ಮಧ್ಯಕ್ಕೆ ಬ್ರೇಕ್ ಆಗಿರಲಿಲ್ಲ. ಸಿದ್ದರಾಮಯ್ಯ ಸ್ವತಃ ಮೈಸೂರಿನ ಚಾಮುಂಡೇಶ್ವರಿ ಸ್ಥಾನವನ್ನು ಕಳೆದುಕೊಂಡಿದ್ದರು. ಅವರು ಸ್ಪರ್ಧಿಸಿದ್ದ ಇನ್ನೊಂದು ಸ್ಥಾನವಾದ ಬಾದಾಮಿಯಲ್ಲಿ ಸಾವಿರ ಮತಗಳಿಂದ ಗೆದ್ದಿದ್ದು ಅವರ ಅದೃಷ್ಟ ಎಂದಿದ್ದಾರೆ.

ದೇವರಾಜ ಅರಸ್ ವಿಷಯಕ್ಕೆ ಬಂದರೂ 1976ರ ಚುನಾವಣೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಮುಂದೂಡಿದ್ದರಿಂದ ಅವರು ಬಹಳ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದ್ದರು. 1978ರ ಆರಂಭದಲ್ಲಿ ಕರ್ನಾಟಕದಲ್ಲಿ ಒಂದೆರಡು ತಿಂಗಳು ರಾಷ್ಟ್ರಪತಿ ಆಳ್ವಿಕೆ ಇತ್ತು. ಆದರೆ, ಮುಖ್ಯಮಂತ್ರಿಯಾಗಿ ಅರಸು ನಿರಂತರ ಅಧಿಕಾರಾವಧಿಯನ್ನು ಹೊಂದಿದ್ದರು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ಸಂತೋಷದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಖಂಡಿಸುತ್ತಾರೆಯೇ? ಇಂದಿರಾ ಗಾಂಧಿ ಅವರ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಅವರು ಖಂಡಿಸುತ್ತಾರೆಯೇ? ರಾಜಕೀಯದಲ್ಲಿ ಅವರಿಗೆ ಪುನರ್ಜನ್ಮ ನೀಡಿದ ಸಾಮಾಜಿಕ ನ್ಯಾಯದ ಪ್ರತಿಪಾದಕ ದೇವರಾಜ ಅರಸು ಅವರನ್ನು ಪದಚ್ಯುತಗೊಳಿಸಿದ್ದಕ್ಕಾಗಿ ಅವರು ಇಂದಿರಾ ಗಾಂಧಿಯನ್ನು ಖಂಡಿಸುತ್ತಾರೆಯೇ? ಎಂದು ಲೆಹರ್ ಸಿಂಗ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೇವರಾಜ ಅರಸು ದಾಖಲೆ ಬ್ರೇಕ್​​: ಹೊಸ ಇತಿಹಾಸ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ

ದೇವರಾಜ ಅರಸು ಎಲ್ಲಾ ಕಾಂಗ್ರೆಸ್ಸಿಗರಿಂದ ಕೈಬಿಡಲ್ಪಟ್ಟ ದುಃಖಿತ ವ್ಯಕ್ತಿಯಾಗಿ ನಿಧನರಾದರು. ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಭಾರತದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗಳಾದ ಪವನ್ ಕುಮಾರ್ ಚಾಮ್ಲಿಂಗ್, ಒಡಿಶಾದ ನವೀನ್, ಜ್ಯೋತಿ ಬಸು, ಮೋಹನ್ ಲಾಲ್ ಸುಖಾಡಿಯಾ, ಮಾಣಿಕ್ ಸರ್ಕಾರ್, ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಅತಿ ದೀರ್ಘವಾದ ಅವಧಿಯ ಅಧಿಕಾರವನ್ನು ಅನುಭವಿಸಿದ್ದಾರೆ, ಅದೂ ಒಂದು ದಶಕಕ್ಕೂ ಹೆಚ್ಚು ಕಾಲ ಎಂಬುದು ವಿಶೇಷ.

ಆದರೂ ಸಿದ್ದರಾಮಯ್ಯ ಮತ್ತು ಅವರ ಅನುಯಾಯಿಗಳು ಈ ಅವಧಿಯಲ್ಲಿ ಯಾವುದೇ ಸಾಧನೆ ಮಾಡದ ಬಗ್ಗೆ ದಾಖಲೆ ನಿರ್ಮಿಸಿರುವುದಕ್ಕೆ ಖುಷಿಪಡಬೇಕು. ಇಷ್ಟು ದೀರ್ಘ ಅವಧಿಯಲ್ಲಿ ಅಧಿಕಾರದಲ್ಲಿದ್ದರೂ ಯಾವುದೇ ಉತ್ತಮ ಕೆಲಸ ಮಾಡದೆ ಇರುವುದಕ್ಕೆ ಅವರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅಥವಾ ಗಿನ್ನೆಸ್ ವಿಶ್ವ ದಾಖಲೆಗಳಿಗೆ ಸೇರಿಸಿದರೂ ತಪ್ಪಾಗದು ಎಂದು ಲೆಹರ್ ಸಿಂಗ್ ಲೇವಡಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ