ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ಹೇಳಿಕೆ: ಕೈ ಶಾಸಕ ರವಿ ಗಣಿಗೆ ಸಂಕಷ್ಟ
ಬಿಜೆಪಿಯ ಬ್ರೋಕರ್ಗಳು ನಮ್ಮ ಶಾಸಕರಿಗೆ 100 ಕೋಟಿ ರೂ. ಆಫರ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ದೂರು ನೀಡಿದ್ದಾರೆ. ಆ ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ, ಆಗಸ್ಟ್ 25: ಕಾಂಗ್ರೆಸ್ (Congress) ಶಾಸಕರನ್ನು ಖರೀದಿಸಲು ಬಿಜೆಪಿ 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕ ರವಿ ಗಣಿಗ (Ravi Ganiga) ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ದೂರು ನೀಡಿದ್ದಾರೆ. ರವಿ ಗಣಿಗ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದು, ಠಾಣೆ ಮುಂದೆ ರವಿ ಗಣಿಗ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ದೂರಿನಲ್ಲೇನಿದೆ?
ಆಗಸ್ಟ್ 25ರಂದು ಪಕ್ಷ ಸಂಘಟನೆ ನಿಮಿತ್ಯ ಹುಬ್ಬಳ್ಳಿಯಲ್ಲಿರುವ ಕಾರ್ಯಾಲಯದಲ್ಲಿ ಜಿಲ್ಲೆಯ ಅಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸದಾನಂದ ಚಿಂತಾಮಣಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮಾಧ್ಯಮ ವಕ್ತಾರ ಗುರು ಪಾಟೀಲ ಮತ್ತು ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದೇವು. ಆ ಸಂದರ್ಭದಲ್ಲಿ ನಮ್ಮ ಪಕ್ಷದ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರು ಮಧ್ಯಾಹ್ನ 2:26ಕ್ಕೆ ನನಗೆ ಕರೆ ಮಾಡಿ, ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ನಾಲ್ಕಾರು ಮುಖಂಡರು ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಂಚು ನಡೆಸಿದ್ದು ಪ್ರತಿಯೊಬ್ಬ ಶಾಸಕರಿಗೆ 50 ರಿಂದ 100 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ. ಆಫರ್: ಗಣಿಗ ರವಿಕುಮಾರ್ ಆರೋಪ
ಸುಳ್ಳು ಹಾಗೂ ಸಾಕ್ಷಿರಹಿತ ಮತ್ತು ರಾಜಕೀಯ ದುರುದ್ದೇಶಪೂರ್ವಕವಾಗಿ ಮತ್ತು ತೆಜೋವಧೆ ಮಾಡುವ ದುರುದ್ದೇಶದಿಂದ ಮಾಧ್ಯಮದ ಮುಂದೆ ಸುಳ್ಳು ಹೇಳಿಕೆಯನ್ನು ನೀಡಿದ್ದು ಕಾನೂನು ಬಾಹಿರ ಮತ್ತು ಅಪರಾಧಿಕ ಹೇಳಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ: ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ
ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು 50 ರಿಂದ 100 ಕೋಟಿ ರೂ. ಹಣವನ್ನು ಪಡೆದುಕೊಳ್ಳುವುದು, ಪಡೆದುಕೊಳ್ಳಲು ದುಷ್ಟೆರಣೆ ನೀಡುವುದು ಹಾಗೂ ಹಣ ನೀಡಲು ಮಾಡಿರುವ ಸಂಚನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಭ್ರಷ್ಟಾಚಾರ ತಡೆ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಮೇಲ್ನೋಟಕ್ಕೆ ಉಲ್ಲೇಖಿಸ ಶಾಸಕ ರವಿ ಗಣಿಗ ಅವರು 50 ರಿಂದ 100 ಕೋಟಿ ರೂ. ಹಣದ ಅಕ್ರಮ ವಿಲೇವಾರಿಯನ್ನು ಗೌಪ್ಯವಾಗಿಟ್ಟಿರುವ ಸಂಶಯವಿದ್ದು ಭಾರತೀಯ ಜನತಾ ಪಕ್ಷದ ಬದ್ಧತೆಗೆ ಧಕ್ಕೆ ತರುವ ದುರುದ್ದೇಶವನ್ನು ಹೊಂದಿದ್ದು, ಭಾರತೀಯ ನ್ಯಾಯ ಸಂಹಿತೆ ಕಾನೂನಿನಡಿಯಲ್ಲಿ ದಂಡಿಸಲ್ಪಡುವ ಅಪರಾಧಗಳನ್ನು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ದಂಡಿಸಲ್ಪಡುವ ಅಪರಾಧವನ್ನು ಎಸಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ ಸದರಿಯವರ ಮೇಲೆ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ. ಬಿಜೆಪಿ ಪರವಾಗಿ ಸದರಿ ದೂರನ್ನು ದಾಖಲಿಸಲು ನಾನು ಸಮರ್ಥ ವ್ಯಕ್ತಿಯಾಗಿರುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.