ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅಹೋರಾತ್ರಿ ಧರಣಿ: ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಕಹಳೆ
ಕರ್ನಾಟಕದಲ್ಲಿ ಹಾಲು, ಮೊಸರು, ಡೀಸೆಲ್, ವಿದ್ಯುತ್ ದರ ಏರಿಕೆಯಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರತಿಪಕ್ಷ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ರೈತರಿಗೆ ಬೆಂಬಲ ನೀಡುವುದನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದ ಹಲವೆಡೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಮಂಡ್ಯದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.

ಬೆಂಗಳೂರು, ಏಪ್ರಿಲ್ 2: ಬೆಲೆ ಏರಿಕೆ (Price Hike in Karnataka) ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಮೊಳಗಿದೆ. ಹಾಲು, ಮೊಸರು, ವಿದ್ಯುತ್, ಡೀಸೆಲ್ ದರ, ಕಸ ತೆರಿಗೆ ಹೀಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಗೆ ರಾಜ್ಯಾದ್ಯಂತ ಜನ ಕಿಡಿಕಾರಿದ್ದಾರೆ. ಹಾಲು, ಮೊಸರಿನ ಬೆನ್ನಲ್ಲೇ ಡೀಸೆಲ್ ದರವೂ 2 ರೂಪಾಯಿ ಏರಿಕೆಯಾಗಿದ್ದು ಜನಾಕ್ರೋಶಕ್ಕೆ ಗುರಿಯಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ (BJP) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಅಹೋರಾತ್ರಿ ಧರಣಿ ನಡೆಸುತ್ತಿದೆ.
ಜನಾಕ್ರೋಶವನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಹೋರಾಟಕ್ಕಿಳಿದೆ. ಫ್ರೀಡಂಪಾರ್ಕ್‌ನಲ್ಲಿ ಅರೋಹಾತ್ರಿ ಧರಣಿ ನಡೆಸಿದೆ. ಈ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇತರ ಮಾಜಿ ಸಿಎಂಗಳು, ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಹಾಜರಾಗಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ರೈತರಿಗೆ ಸಹಾಯಮಾಡಬಾರದಾ? ಬಿಜೆಪಿ ಪ್ರತಿಭಟನೆಗೆ ಡಿಕೆ ಶಿವಕುಮಾರ್ ತಿರುಗೇಟು
ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಹಾಲಿನ ದರ ವಿಚಾರದಲ್ಲಿ ರೈತರಿಗೆ ಸಹಾಯ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರೈತರ ವಿರೋಧಿ ಎನ್ನಲು ಇದುವೇ ಸಾಕ್ಷಿ ಎಂದು ಅವರು ಕುಟುಕಿದ್ದಾರೆ.
ಸಚಿವ ಪರಮೇಶ್ವರ್ ಕೂಡಾ ದರ ಏರಿಕೆ ಸಮರ್ಥಿಸಿಕೊಂಡಿದ್ದು, ಬೆಲೆ ಏರಿಕೆ ಅನಿವಾರ್ಯ ಎಂದಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳಿಂದ ಬೆಲೆ ಏರಿಕೆಯಾಗಿದೆ ಎಂದು ದೂರಿದ್ದಾರೆ.
ವಾಹನ ಸವಾರರಿಗೆ ದಾಸವಾಳ, ಚಾಕೊಲೇಟ್ ನೀಡಿ ಮಂಡ್ಯದಲ್ಲಿ ಪ್ರತಿಭಟನೆ
ಬೆಂಗಳೂರು ಮಾತ್ರವಲ್ಲದೆ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ವಾಹನ ಸವಾರರಿಗೆ ದಾಸವಾಳ ಹೂವು, ಚಾಕೊಲೇಟ್ ನೀಡಿ, ‘ಸರ್ಕಾರ ಜನರ ಕಿವಿಗೆ ಹೂವು ಇಡುತ್ತಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಬೆಲೆ ಏರಿಕೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಘೋಷಣೆ ಕೂಗಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಡೀಸೆಲ್ ಬೆಲೆ ಹೆಚ್ಚಳ: ಕರ್ನಾಟಕದಲ್ಲಿ ಈಗ 1 ಲೀಟರ್ ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಈಗಾಗಲೇ ಹಾಲು, ಮೊಸರು ದರ ದುಬಾರಿಯಾಗಿದ್ದರೆ, ಕೆಎಸ್ಆರ್ಟಿಸಿ-ಬಿಎಂಟಿಸಿ ಬಸ್ ದರವನ್ನು ಕೆಲವು ದಿನಗಳ ಹಿಂದೆ ಏರಿಕೆ ಮಾಡಲಾಗಿತ್ತು. ಮೆಟ್ರೋ ದರವೂ ಏರಿಕೆಯಾಗಿದೆ. ಏಪ್ರಿಲ್ 1 ರಿಂದ ಟೋಲ್ ಶುಲ್ಕ ಕೂಡ ಹೆಚ್ಚಾಗಿದೆ. ಈ ಎಲ್ಲದರ ನಡುವೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕೂಡ ರಾಜ್ಯ ಸರ್ಕಾರ ಮಂಗಳವಾರದಿಂದ ಶೇ 3 ರಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ಡೀಸೆಲ್ ದರ 2 ರೂ.ನಷ್ಟು ಏರಿಕೆಯಾಗಿದೆ.