
Breaking News, Weather Latest News Live Updates in Kannada: ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೆಟಣೆ, ಚಿಕಲೆ, ಚೋರ್ಲಾ, ಬಟವಾಡೆ ಸೇರಿದಂತೆ ಒಂಬತ್ತು ಪ್ರಸಿದ್ಧ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಅರಣ್ಯ ಇಲಾಖೆ ಡಿಎಫ್ಒ ಕ್ರಾಂತಿ ಆದೇಶಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಲಪಾತಗಳ ಪ್ರವೇಶ ದ್ವಾರದಲ್ಲಿ ಅರಣ್ಯ ಸಿಬ್ಬಂದಿ ಕಾವಲು ನಿಂತಿದ್ದು, ನಿಯಮ ಮೀರಿ ಕಣ್ತಪ್ಪಿಸಿ ಹೋದರೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಫಿಫಾ ವಿಶ್ವಕಪ್‌ನ ರೌಂಡ್ ಆಫ್-16 ನಾಕೌಟ್ ಪಂದ್ಯದಲ್ಲಿ ನಾರ್ವೆ ವಿರುದ್ಧ 2-1 ಗೋಲುಗಳ ಅಂತರದಿಂದ ಸೋತ ಬ್ರೆಝಿಲ್ ತಂಡವು ಕ್ವಾರ್ಟರ್ ಫೈನಲ್‌ಗೂ ಮುನ್ನವೇ ಟೂರ್ನಿಯಿಂದ ಹೊರಬಿದ್ದು ಭಾರಿ ಆಘಾತ ನೀಡಿದೆ. ಇತ್ತ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಗರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆ ಅಂಗೀಕಾರದ ಕುರಿತು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಇಂದು ಮಧ್ಯಾಹ್ನ 3 ಗಂಟೆಗೆ ನಿರ್ಣಾಯಕ ಸಭೆ ನಡೆಸಲಿದೆ. ಮತ್ತೊಂದೆಡೆ ಮನರಂಜನಾ ಲೋಕದಲ್ಲಿ ರಾಜ್‌ಕುಮಾರ್ ಹಿರಾನಿ ನಿರ್ಮಾಣದ, ಅರ್ಷದ್ ವಾರ್ಸಿ ಮುಖ್ಯ ಭೂಮಿಕೆಯಲ್ಲಿರುವ ಕಾಮಿಡಿ ಮತ್ತು ಸಸ್ಪೆನ್ಸ್ ಸಮ್ಮಿಲನದ ‘ಪ್ರೀತಮ್ ಆ್ಯಂಡ್ ಪೆಡ್ರೊ’ ವೆಬ್ ಸರಣಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ (ಜುಲೈ 07) 3 ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪ, ಶೃಂಗೇರಿ, ಕಳಸ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ.
ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಾಲ್ಲೂಕು ಮತ್ತು ಖಾನಾಪುರ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಿಗೆ ನಾಳೆ (ಜುಲೈ 07) ರಜೆ ಘೋಷಿಸಲಾಗಿದೆ. ಅಂಗನವಾಡಿ ಕೇಂದ್ರಗಳು/ಪ್ರಾಥಮಿಕ/ಪ್ರೌಢಶಾಲೆಗಳು ಹಾಗೂ ಪಿಯುಸಿ (12ನೇ ತರಗತಿಯವರೆಗಿನ) ಕಾಲೇಜುಗಳಿಗೆ ಮಂಗಳವಾರ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 5 ತಾಲೂಕುಗಳಲ್ಲಿ ಶಾಲೆಗಳಿಗೆ ನಾಳೆ (ಜುಲೈ 07) ರಜೆ ಘೋಷಿಸಲಾಗಿದೆ. ಶಿರಸಿ, ಸಿದ್ದಾಪುರ, ಜೋಯಿಡಾ ದಾಂಡೇಲಿ ಹಾಗೂ ಯಲ್ಲಾಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ SIR ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಸಲ್ಲಿಕೆಯಾಗಿದೆ.
ಬೆಂಗಳೂರಿನ ವಿವೇಕ್ ಮತ್ತಿತರರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರತ್ಯೇಕ SIR ನಡೆಸಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ SIR, ಮತಪಟ್ಟಿ ಪರಿಗಣಿಸುತ್ತಿಲ್ಲ. ರಾಜ್ಯ ಚುನಾವಣಾ ಆಯೋಗದ ನಡೆಯಿಂದ ಮತದಾರರಲ್ಲಿ ಗೊಂದಲ ಹೆಚ್ಚಿದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗದ ಕ್ರಮ ರದ್ದತಿಗೆ ಮನವಿ ಮಾಡಿದ್ದಾರೆ.
ಅಯೋಧ್ಯೆ ರಾಮಮಂದಿರದ ಕೋಟಿ ಕೋಟಿ ದೇಣಿಗೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜುಲೈ 06) ಟ್ರಸ್ಟ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಅಂಗೀಕಾರವಾಗಿದೆ. ಇನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಮೋಹನ್ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ರಾಮಜನ್ಮಭೂಮಿ ಟ್ರಸ್ಟ್ನ ಗೋಪಾಲ್ ದಾಸ್ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮುಂಬೈ ಸೇರಿ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಭಾರಿ ಮಳೆಯಿಂದಾಗಿ ಮುಂಬೈನಿಂದ ಹೊರಡಬೇಕಿದ್ದ 17 ವಿಮಾನ ಹಾರಾಟ ರದ್ದುಗೊಳಿಸಲಾಗಿದ್ದು, 365 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಲಿದೆ.
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳೆ ಮೊನ್ನೇ ಅಷ್ಟೇ ಬೀದರ್ ಓರ್ವ ಬಿಎಲ್ಒ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮತ್ತೋರ್ವ ಬಿಎಲ್ಒ ಮೃತಪಟ್ಟಿದ್ದಾರೆ.ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್ ಪ್ರಕ್ರಿಯೆ ಮಾಡುತ್ತಿದ್ದ ಬಿಎಲ್ಒಗೆ ಹೃದಯಾಘಾತವಾಗಿದೆ.
ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದಶ್ರೀ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಾವಣಗೆರೆ ವಿಶೇಷ ಕೊರ್ಟ್ ಇಂದು (ಜುಲೈ 06) ವಿಚಾರಣೆ ನಡೆಸಿದೆ. ಸಂತ್ರಸ್ತ ಬಾಲಕ ಹಾಗೂ ಶ್ರೀಗಳ ಪರ ವಕೀಲರ ವಾದ ಪ್ರತಿವಾದ ಆಲಿಸಿದ ಕೋರ್ಟ್, ಜಾಮೀನು ಅರ್ಜಿ ಆದೇಶವನ್ನು ಜುಲೈ 13ಕ್ಕೆ ಕಾಯ್ದಿರಿಸಿದೆ. ಹೀಗಾಗಿ ವಚನಾನಂದಶ್ರೀ ಢವ ಢವ ಶುರುವಾಗಿದೆ.
ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಕಾಣಿಕೆ ಕಳ್ಳತನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು,ಈ ಬಗ್ಗೆ ಎಸ್ಐಟಿ ತನಿಖೆ ನಡೆಸಿದೆ. ಇದರ ಮಧ್ಯೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆಯನ್ನು ಅಂಗೀಕಾರಿಸಲಾಗಿದೆ. ಇಂದು (ಜುಲೈ 06) ನಡೆದ ಸಭೆಯಲ್ಲಿ ರಾಜೀನಾಮೆಯನ್ನು ರಾಮ ಮಂದಿರ ಟ್ರಸ್ಟ್ ಅಂಗೀಕರಿಸಿದೆ.
ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ದಾವಣಗೆರೆ ಕೋರ್ಟ್ ಕೈಗೆತ್ತಿಕೊಂಡಿದೆ. ಸಂತ್ರಸ್ಥ ಬಾಲಕನ ಪರ ನ್ಯಾಯವಾದಿ ರಮೇಶ್ ಕಲಾಲ್ ಮಂಡನೆ ಮಾಡುತ್ತಿದ್ದರೆ, ಸ್ವಾಮೀಜಿ ಪರ ಹಿರಿಯ ನ್ಯಾಯವಾದಿ ಎಸ್ ವಿ. ಪಾಟೀಲ್ ಪ್ರತಿವಾದ ಮಾಡುತ್ತಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಗಣಿ ಸ್ಫೋಟಕ್ಕೆ 7 ಕಾರ್ಮಿಕರು ಬಲಿ ಹಿನ್ನೆಲೆ
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಸಂಭಿಸಿದ್ದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದು, ದುರಂತದ ಬಗ್ಗೆ 2 ವಾರಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.
ಪಾಕಿಸ್ತಾನದ ISI ಮಾಜಿ ಮೇಜರ್ ಜನರಲ್ ಸೇರಿದಂತೆ ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಲಂಡನ್ ಹಾಗೂ ಕೊಲಂಬೊದಲ್ಲಿ RSS ಮುಖಂಡರಾಗಿರುವ GBA ಪಾಲಿಕೆಗಳ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿರುವ ರಾಮ್ ಮಾಧವ್ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದು, ಇದೀಗ ಈ ಸಂಬಂಧ ಬಿಜೆಪಿ ನಾಯಕ ರಾಮ್ ಮಾಧವ್ ಅವರು ಹರಿಪ್ರಸಾದ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.ರಾಮ್ ಮಾಧವ್ ಹೆಸರಿಗೆ ಕಳಂಕಗೊಳಿಸಲು ಪ್ರಯತ್ನಿಸಿ ಅವರ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕೆಂದು ರಾಮ್ ಮಾಧವ್ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ಮತ್ತಷ್ಟು ಓದಿ
ಕ್ರಿಕೆಟರ್ ಪೃಥ್ವಿ ಶಾ ಹಾಗೂ ನಟಿ ಆಕೃತಿ ಅಗರ್ವಾಲ್ ಅವರ ರಿಲೇಶನ್‌ಶಿಪ್ ಕೇವಲ ನಾಲ್ಕೇ ತಿಂಗಳಲ್ಲಿ ಮುರಿದುಬಿದ್ದಿದೆಯೇ ಎಂಬ ಭಾರಿ ಚರ್ಚೆಯೊಂದು ಇಂಟರ್‌ನೆಟ್‌ನಲ್ಲಿ ಶುರುವಾಗಿದೆ. 2026ರ ಮಾರ್ಚ್ 8ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ನಡುವೆ ಈಗ ಬಿರುಕು ಮೂಡಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮತ್ತಷ್ಟು ಓದಿ
ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಸಿನಿಮಾ ಬಿಡುಗಡೆಯಾದ ಒಂದೇ ದಿನದಲ್ಲಿ ಜೀ5 ಒಟಿಟಿಯಿಂದ ಡಿಲೀಟ್ ಆಗಿದೆ. ಚಿತ್ರದ ಸೂಕ್ಷ್ಮ ದೃಶ್ಯಗಳು ಭಾರತ ವಿರೋಧಿ ಶಕ್ತಿಗಳಿಂದ ದುರುಪಯೋಗವಾಗುವ ಸಾಧ್ಯತೆಯೇ ಇದಕ್ಕೆ ಕಾರಣ ಎನ್ನಲಾಗಿದ್ದು, ಚಿತ್ರದ ಪ್ರಸಾರ ಸ್ಥಗಿತಕ್ಕೆ ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಓದಿ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವುದು ಸರಿಯಲ್ಲ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಡಿಕೇರಿಯಲ್ಲಿ ಹೇಳಿದ್ದಾರೆ. ಕಂಬಳವು ಕರಾವಳಿಯ ಪ್ರಸಿದ್ಧ ಸಂಸ್ಕೃತಿ, ಧಾರ್ಮಿಕ ಹಿನ್ನೆಲೆ ಹಾಗೂ ನಂಬಿಕೆಯುಳ್ಳ ಆಚರಣೆಯಾಗಿದ್ದು, ಅದನ್ನು ಮೈಸೂರಿಗೆ ತಂದು ವಾಣಿಜ್ಯೀಕರಣ ಮಾಡುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದಸರಾ ಸಮಯದಲ್ಲಿ ಇರುವ ಯುವ ದಸರಾ, ವಸ್ತು ಪ್ರದರ್ಶನ ಹಾಗೂ ಟಿಕೆಟ್ ಗೊಂದಲಗಳಂತಹ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಮೊದಲು ನಿವಾರಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದ್ದು, ಭಾರಿ ಬಿರುಗಾಳಿಗೆ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಬಳಿ ಮರಗಳು ಧರೆಗುರುಳಿವೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಗೆ ಮರ ಬಿದ್ದಿದ್ದರಿಂದ ಒಂದು ಬದಿಯ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸದ್ಯ ಕಾರ್ಮಿಕರು ರಸ್ತೆಗೆ ಬಿದ್ದಿರುವ ಹಾಗೂ ಬೀಳುವ ಹಂತದಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭಾರಿ ಮಳೆಗೆ ಸಕಲೇಶಪುರ ಭಾಗದಲ್ಲಿ ಹಲವು ಅನಾಹುತಗಳು ಸೃಷ್ಟಿಯಾಗಿವೆ.
ಸ್ಟಾರ್ ಹೀರೋಗಳು ಸಾಮಾನ್ಯವಾಗಿ ಲೇಡಿ ಡೈರೆಕ್ಟರ್‌ಗಳ ಮಾತು ಕೇಳುವುದಿಲ್ಲ, ಆದರೆ ಯಶ್ ಹಾಗಲ್ಲ ಎಂದು ನಟಿ ಹುಮಾ ಖುರೇಷಿ ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ ಅವರು, ನಿರ್ದೇಶಕಿ ಗೀತು ಮೋಹನ್ ದಾಸ್ ಕೆಲಸ ಹಾಗೂ ಯಶ್ ಜೊತೆಗಿನ ಹೆಲ್ದಿ ಒಡನಾಟವನ್ನು ಶ್ಲಾಘಿಸಿದ್ದಾರೆ. ಈ ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ನಿಲ್ಲಲಿದ್ದು, ಜನರು ಇಂತಹ ಚಿತ್ರವನ್ನು ಹಿಂದೆಂದೂ ನೋಡಿಲ್ಲ ಎಂದಿರುವ ಅವರು, ಆಗಸ್ಟ್ 26 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತಷ್ಟು ಓದಿ
ಬರದ ಛಾಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಎರಡು ದಿನಗಳ ಕಲ್ಯಾಣ ಕರ್ನಾಟಕ ಪ್ರವಾಸ ಆರಂಭವಾಗಿದ್ದು, ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಲಾಗಿದೆ. ಪರಿಚ್ಛೇದ 371(J) ಅಡಿ ಈ ಭಾಗದ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿರುವ ಸಿಎಂ, ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಿದ್ದಾರೆ. ಸಿಎಂ ಅವರ ಪಕ್ಷದ ಕಚೇರಿ ಭೇಟಿಯು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗುವ ಕುರಿತು ಹಳೇ ಸಂದರ್ಶನವೊಂದರಲ್ಲಿ ಜೂನಿಯರ್ ಎನ್‌ಟಿಆರ್ ಮುಕ್ತವಾಗಿ ಮಾತನಾಡಿದ್ದಾರೆ. ಸಿಎಂ ಆಗಲು ಕೇವಲ ಆಸೆ ಇದ್ದರೆ ಸಾಲದು, ಅದಕ್ಕೆ ತಕ್ಕ ಅನುಭವ ಮತ್ತು ಮುತ್ಸದ್ದಿತನ ಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಇದೇ ವೇಳೆ ತಮ್ಮ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಮೇಲಿನ ಪ್ರೀತಿ ಹಾಗೂ ತೆಲುಗು ದೇಶಂ ಪಕ್ಷದ (TDP) ಬಗೆಗಿನ ತಮ್ಮ ನಿಷ್ಠೆಯನ್ನು ಅವರು ಬಿಚ್ಚಿಟ್ಟಿದ್ದಾರೆ. ಮತ್ತಷ್ಟು ಓದಿ
ಜನರಿಗೆ ಆರ್ಥಿಕ ಸಹಾಯವಾಗಲೆಂದೇ ನಾವು ಐದು ಗ್ಯಾರಂಟಿಗಳನ್ನು ನೀಡಿದ್ದು, ನಾವು ಕೈಗೊಂಡ ತೀರ್ಮಾನಗಳನ್ನು ಈಗ ಕೇಂದ್ರ ಸರ್ಕಾರದವರೂ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕರ್ನಾಟಕ ದೇಶಕ್ಕೇ ಒಂದು ಮಾಡೆಲ್ ಆಗಿದ್ದು, ಎಸ್‌ಐಆರ್ (SIR) ಬಗ್ಗೆ ಜಾಗೃತಿ ಮೂಡಿಸಲು ಜಾಹೀರಾತು ನೀಡಲಾಗುತ್ತಿದೆ; ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಒದಗಿಸುತ್ತಿದ್ದೇವೆ. ಸರ್ಕಾರ ಮಾಡಿದ ಉತ್ತಮ ಕೆಲಸಕ್ಕೆ ವಿರೋಧ ಪಕ್ಷದವರು ಅಭಿನಂದನೆ ಸಲ್ಲಿಸುವುದನ್ನು ಬಿಟ್ಟು ಕೇವಲ ಟೀಕೆ ಮಾಡುತ್ತಿದ್ದಾರೆ ಎಂದ ಅವರು, ನಮ್ಮ ಪಕ್ಷದವರಿಗೂ ಸಹ ಹುಷಾರಾಗಿರುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರಿಗೆ ವೋಟರ್ ಐಡಿ ನೀಡಿ, ಬೋಗಸ್ ಮತಗಳ ಮೂಲಕ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ. ಕಾಂಗ್ರೆಸ್ ವೋಟ್‌ಬ್ಯಾಂಕ್‌ಗಾಗಿ ಬಿಎಲ್‌ಒಗಳಿಗೆ ಹೆದರಿಸಿ ಈ ಸರ್ವೆ ಮಾಡುತ್ತಿದ್ದು, ದೇಶದ ಭದ್ರತೆಗಾಗಿ ಚುನಾವಣಾ ಆಯೋಗ ಮಾಡುತ್ತಿರುವ ಈ ಎಸ್‌ಐಆರ್ (SIR) ಸರ್ವೆಯನ್ನು ತಕ್ಷಣವೇ ರದ್ದು ಮಾಡಬೇಕೆಂದು ಬಳ್ಳಾರಿಯಲ್ಲಿ ಒತ್ತಾಯಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಯಾವುದೇ ಸಂದೇಹ, ಗೊಂದಲಗಳಿಗೆ ಈಗ ವಿಶೇಷ ಹೆಲ್ಪ್ ಲೈನ್ ಆರಂಭಿಸಲಾಗಿದ್ದು, ಗ್ರಾಹಕರು ಕರೆ ಮಾಡಿ ಪರಿಹರಿಸಿಕೊಳ್ಳಬಹುದು. ಬೆಳಿಗ್ಗೆ 6:00 ರಿಂದ ರಾತ್ರಿ 10:00 ರವರೆಗೆ ಕರೆ ಮಾಡಲು ಅವಕಾಶವಿರುತ್ತದೆ ಎಂದು ಬೆಸ್ಕಾಂ ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಯಾವುದೇ ಸಂದೇಹ, ಗೊಂದಲಗಳಿಗೆ ಈಗ ವಿಶೇಷ ಹೆಲ್ಪ್ ಲೈನ್ ಆರಂಭಿಸಲಾಗಿದ್ದು, ಗ್ರಾಹಕರು ಕರೆ ಮಾಡಿ ಪರಿಹರಿಸಿಕೊಳ್ಳಬಹುದು.
ಸಮಯ: ಬೆಳಿಗ್ಗೆ 6:00 ರಿಂದ ರಾತ್ರಿ 10:00 ರವರೆಗೆ#Bescom #GruhaJyothiHelpline #GruhaJyothiScheme #BescomHelpline #FreeElectricity pic.twitter.com/J3EFvDQCiI
— Namma BESCOM | ನಮ್ಮ ಬೆಸ್ಕಾಂ (@NammaBESCOM) July 5, 2026
ಕಾರ್ಯನಿರ್ವಹಣಾ ಕಾರಣಗಳಿಂದಾಗಿ ಮೈಸೂರು-ಚಾಮರಾಜನಗರ (56210) ಹಾಗೂ ಚಾಮರಾಜನಗರ-ಮೈಸೂರು (56207) ಪ್ಯಾಸೆಂಜರ್ ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಪ್ರಕಟಿಸಿದೆ.
Passengers kindly note:#SWRUpdates#Chamarajanagar
On date-06.07.2026 pic.twitter.com/UJalEXjSJB— DRM Mysuru (@DrmMys) July 6, 2026
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮತ್ತು ಕಳೆದ 3 ದಿನಗಳಿಂದ ಮಳೆ ಚುರುಕುಗೊಂಡಿರುವ ಹಾಸನದ ಸಕಲೇಶಪುರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಸಕಲೇಶಪುರ ತಹಶೀಲ್ದಾರ್ ಸುಪ್ರಿತಾ ಆದೇಶ ಹೊರಡಿಸಿದ್ದಾರೆ.
ನಟಿ ಕೃಷಿ ತಾಪಂಡ ಸ್ನೇಹಿತ ವೈಶಾಕ್ (36) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಆರ್ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೃಷಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆ ವೇಳೆ ವೈಶಾಕ್ ತೀವ್ರ ಆರ್ಥಿಕ ಸಂಕಷ್ಟದಿಂದ ಖಿನ್ನತೆಗೆ ಒಳಗಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಕೃಷಿ ಅವರ ಫ್ಲ್ಯಾಟ್‌ನಲ್ಲೇ ವಾಸವಿದ್ದ ವೈಶಾಕ್‌ಗೆ ನಟಿ ಆಗಾಗ 40-50 ಸಾವಿರ ರೂ. ಹಣ ವರ್ಗಾವಣೆ ಮಾಡುತ್ತಿದ್ದು, ಅದಕ್ಕೆ ಸೂಕ್ತ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ.
ಬೆಂಗಳೂರಿನ ಗೊರಗುಂಟೆಪಾಳ್ಯದಿಂದ ಯಶವಂತಪುರದವರೆಗೆ ಜುಲೈ 4ರ ಮಧ್ಯರಾತ್ರಿ 2:30ರ ಸುಮಾರಿಗೆ ಪುಂಡರು ಬೈಕ್ ವ್ಹೀಲಿಂಗ್ ನಡೆಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಸೈರನ್ ಹಾಕಿಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ವಾಹನಕ್ಕೂ ಜಾಗ ಬಿಡದೆ, 5-6 ಬೈಕ್‌ಗಳಲ್ಲಿ ರಸ್ತೆ ಮಧ್ಯೆ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿ ವಿಕೃತ ಆನಂದ ಪಟ್ಟಿದ್ದಾರೆ. ಈ ಪುಂಡರ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹೊಸನಗರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಹೊಸನಗರ ತಹಶೀಲ್ದಾರ್ ಭರತ್‌ರಾಜ್ ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Published On - 8:30 am, Mon, 6 July 26