ನದಿ ಆಧಾರಿತ ನೀರು ನಿರ್ವಹಣೆ ಕಾನೂನನ್ನು ಜಾರಿಗೆ ತರಬೇಕು: ಬಸವರಾಜ ಬೊಮ್ಮಾಯಿ
ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ವಿವಾದ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅಂತಾರಾಜ್ಯ ನದಿ ವಿವಾದಗಳ ಕಾನೂನಿನಿಂದ ಯಾವುದೇ ಇತ್ಯರ್ಥ ಆಗಿಲ್ಲ. ವಿವಾದ ಬಗೆಹರಿಸುವುದಕ್ಕಿಂತ ಇನ್ನೂ ವಿವಾದ ಹುಟ್ಟುಹಾಕುತ್ತಿದೆ ಎಂದಿದ್ದಾರೆ.

ಚಿತ್ರದುರ್ಗ, ಸೆ.24: ನದಿ ಆಧಾರಿತ ನೀರು ನಿರ್ವಹಣೆ ಕಾನೂನನ್ನು ಜಾರಿಗೆ ತರಬೇಕು. ಆ ಮೂಲಕ ಕಾವೇರಿ, ಕೃಷ್ಣ, ಮಹದಾಯಿ ಯೋಜನೆಗೆ ಶಾಶ್ವತ ಮುಕ್ತಿ ಸಿಗಬೇಕು. ಈ ವಿಚಾರವಾಗಿ ತರಳಬಾಳು ಶ್ರೀಗಳ ಜೊತೆ ಚರ್ಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ (Basavaraj Bommai) ಬೊಮ್ಮಯಿ ಹೇಳಿದರು.
ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ವಿವಾದ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಬಗ್ಗೆ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ನಡೆದ ತರಳುಬಾಳು ಮಠದ ಶಿವಕುಮಾರ ಶ್ರೀ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಅಂತಾರಾಜ್ಯ ನದಿ ವಿವಾದಗಳ ಕಾನೂನಿನಿಂದ ಯಾವುದೇ ಇತ್ಯರ್ಥ ಆಗಿಲ್ಲ. ವಿವಾದ ಬಗೆಹರಿಸುವುದಕ್ಕಿಂತ ವಿವಾದ ಹುಟ್ಟುಹಾಕುತ್ತಿದೆ ಎಂದರು.
55 ವರ್ಷ ಕಳೆದರೂ ಒಂದು ವಿವಾದ ಕೂಡ ಬಗೆಹರೆದಿಲ್ಲ. ಕಾಲ ಬದಲಾದಂತೆ ನೀರಿನ ಬಳಕೆ ಪ್ರಮಾಣ ಕೂಡ ಬದಲಾಗುತ್ತಿದೆ. ಕೃಷಿ, ಕುಡಿಯುವ ನೀರಿನ ವಲಯದಲ್ಲಿ ವ್ಯತ್ಯಾಸವಿದೆ. ಬೇಸಾಯ ಹಾಗೂ ಕೈಗಾರಿಕೆಗೆ ನೀರಿನ ಬಳಕೆಯಲ್ಲಿ ಸಂಘರ್ಷವಿದೆ ಎಂದರು. ಬೆಂಗಳೂರು ನಗರಕ್ಕೆ ಇಂದು 25 ಟಿಎಂಸಿ ನೀರಿನ ಅಗತ್ಯವಿದೆ ಅಂತಾನೂ ಹೇಳಿದರು.
ಸರ್ಕಾರ ಜಲಭಾಗ್ಯ ತರಬೇಕು: ಶಿವಮೂರ್ತಿಶಿವಾಚಾರ್ಯ ಶ್ರೀ
ಸಿರಿಗೆರೆಯಲ್ಲಿ ಮಾತನಾಡಿದ ತರಳಬಾಳುಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ, ಸರ್ಕಾರದಿಂದ ರೈತರಿಗೆ 6ನೇ ಭಾಗ್ಯವಾಗಿ ಜಲಭಾಗ್ಯ ತರಬೇಕು. ನೀರನ್ನು ನಾವು ಕೊಟ್ಟೇ ಕೊಡುತ್ತೇವೆ ಎಂಬ ಭಾಗ್ಯ ತರಬೇಕು ಎಂದರು.
ಇದನ್ನೂ ಓದಿ: ಕಾವೇರಿ ವಿವಾದ: ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧಾರ – ಬೊಮ್ಮಾಯಿ
ನೀರಾವರಿ ಯೋಜನೆಗಾಗಿ ಕೇವಲ 1200 ಕೋಟಿ ಮಂಜೂರಾಗಿದೆ. ಸಿದ್ದರಾಮಯ್ಯನವರಿಂದ ಯಡಿಯೂರಪ್ಪವರೆಗೆ ಯೋಜನೆ ಮುಂದುವರೆದಿವೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ನಾವು ವಿರೋಧಿಸಲ್ಲ. ಹೆಣ್ಮಕ್ಕಳಿಗೆ ಇನ್ನು 2000ರೂ. ಕೊಟ್ಟರೆ ಒಳ್ಳೆಯದು ಅನ್ನಿಸಿದೆ. ಇಡೀ ಮನೆತನವನ್ನು ಮಹಿಳೆಯರು ಮುನ್ನಡೆಸಲಿದ್ದಾರೆ. ಗೃಹಲಕ್ಷ್ಮಿ ಹಣ ಎಟಿಎಂ ಮೂಲಕ ಮದ್ಯದ ಅಂಗಡಿಯಲ್ಲಿ ಪತಿ ಡ್ರಾ ಮಾಡದಂತೆ ಕಾನೂನು ತರಬೇಕು. ಯುವಶಕ್ತಿ ಯೋಜನೆಯಡಿ ಹಣ ಪಡೆಯುವ ಯುವಕರನ್ನು ರಾಜ್ಯದ ಅಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ನೀಡಿದರು.
ಕಾವೇರಿ ನದಿ ನೀರು ವಿವಾದ ಇಂದು ನಿನ್ನೆಯದಲ್ಲ. ಇದು ಬಹಳ ವರ್ಷಗಳ ಸಮಸ್ಯೆಯಾಗಿದೆ. ಇದನ್ನ ಬಗೆಹರಿಸಲು ಕೇವಲ ಕರ್ನಾಟಕ, ತಮಿಳುನಾಡು ರಾಜ್ಯ ಸರ್ಕಾರಗಳಷ್ಟೇ ಅಲ್ಲ. ದೇಶದ ಎಲ್ಲಾ ರಾಜ್ಯಸರ್ಕಾರಗಳು ಸಮಸ್ಯೆ ಪರಿಹಾರಕ್ಕೆ ಹೊಸ ಚಿಂತನೆ ನಡೆಸಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ