ಚೈತ್ರಾ ಕುಂದಾಪುರ ವಂಚನೆ ಕೇಸ್: ಉದ್ಯಮಿಗೆ ನಂಬಿಸಲು ಸಾಲುಮರದ ತಿಮ್ಮಕ್ಕನ ಸರ್ಕಾರಿ ಕಾರು ದುರ್ಬಳಕೆ
ಮಹಾ ವಂಚನೆಯ ನಾಟಕದ ನಿರ್ದೇಶಕಿ ಚೈತ್ರಾ ಕುಂದಾಪುರ ಅಂದರ್ ಆಗಿದ್ದೇ ಆಗಿದ್ದು ವಂಚನೆ ಕೇಸ್ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ತನಿಖೆ ಚುರುಕುಗೊಂಡಂತೆಲ್ಲ ಸ್ಫೋಟಕ ವಿಚಾರಗಳು ಹಾಗೂ ವಂಚನೆ ಪ್ರಕರಣದ ಒಂದೊಂದೇ ಮಾಸ್ಟರ್ ಪ್ಲ್ಯಾನ್ಗಳು ಹೊರಗೆ ಬರುತ್ತಿವೆ. ಇದೀಗ ಸಾಲುಮರದ ತಿಮ್ಮಕ್ಕಗೆ ನೀಡಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನ ದುರ್ಬಳಕೆ ಮಾಡಿಕೊಂಡಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರು, (ಸೆಪ್ಟೆಂಬರ್ 17): ಚೈತ್ರಾ ಕುಂದಾಪುರ(Chaitra Kundapura) ಹಿಂದೂ ಫೈರ್ ಬ್ರ್ಯಾಂಡ್. ರಾಜ್ಯದ ಉದ್ದಗಲಕ್ಕೂ ಪ್ರಚೋದನಾಕಾರಿ ಭಾಷಣ ಬಿಗಿಯುತ್ತಿದ್ದಾಕೆ. ಆದ್ರೆ ಇದೇ ಚೈತ್ರಾ ಕುಂದಾಪುರ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುತ್ತೇನೆ ಎಂದು ಗೋವಿಂದ್ ಬಾಬು ಎನ್ನುವರಿಗೆ ಕೋಟ್ಯಂತರ ರೂಪಾಯಿ ನಾಮ ಹಾಕಿದ್ದು, ಇದೇ ವಂಚನೆ ಕೇಸ್ನಲ್ಲಿ ಈಗ ಕಂಬಿ ಹಿಂದೆ ಬಿದ್ದಿದ್ದಾಳೆ. ಸದ್ಯ ಸಿಸಿಬಿ ವಶದಲ್ಲಿರುವ ಚೈತ್ರಾ, ಗೋವಿಂದ್ ಬಾಬು ಅವರ ಹಣ ದೋಚಲು ಆರ್ಎಸ್ಎಸ್, ಬಿಜೆಪಿ ಚುನಾವಣಾ ಮುಖ್ಯಸ್ಥರ ವೇಷ ಹಾಕಿಸಿ ಯಾಮಾರಿಸಿದ್ದಾರೆ. ಇದೀಗ ಇದೇ ಪ್ರಕರಣದಲ್ಲಿ ಚೈತ್ರಾ, ಗಗನ್ ಗ್ಯಾಂಗ್ ಸಾಲುಮರದ ತಿಮ್ಮಕ್ಕಗೆ ನೀಡಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಸ್ಫೋಟಕ ಅಂಶ ಬಯಲಿಗೆ ಬಂದಿದೆ.
ಹೌದು… ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಾಲುಮರದ ತಿಮ್ಮಕ್ಕಗೆ ಸರ್ಕಾರ ನೀಡಿರುವ ಸರ್ಕಾರಿ ಕಾರು, ಸರ್ಕಾರಿ ಸೌಲಭ್ಯಗಳನ್ನು ಚೈತ್ರಾ, ಗಗನ್ ಗ್ಯಾಂಗ್ ದುರ್ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ನಕಲಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಚನ್ನಾನಾಯ್ಕ್ ಬಳಸಿದ್ದ ಸರ್ಕಾರಿ ಕಾರು ಸಾಲುಮರದ ತಿಮ್ಮಕ್ಕನಿಗೆ ನೀಡಿದ್ದ ಸರ್ಕಾರಿ ಕಾರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಕೇಸ್ಗೆ ಸ್ಫೋಟಕ ತಿರುವು, ಕೊಟ್ಯಂತರ ರೂಪಾಯಿ ಡೀಲ್ಗೆ ಬಿಜೆಪಿ ಕಚೇರಿ ಲಿಂಕ್
ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ರೂಮ್ , ವಿಧಾನಸೌಧಕ್ಕೆ ಪ್ರವೇಶಿಸಲು ನಕಲಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಚನ್ನಾನಾಯ್ಕ್ ತಿಮ್ಮಕ್ಕ ಅವರಿಗೆ ನೀಡಿದ್ದ ಸರ್ಕಾರಿ ಕಾರು ಎನ್ನುವುದು ಗೊತ್ತಾಗಿದೆ. ಗೋವಿಂದ ಬಾಬು ಪೂಜಾರಿಯನ್ನ ನಂಬಿಸಲು ಸರ್ಕಾರಿ ಕಾರು ಬಳಕೆ ಮಾಡಿದ್ದಾರೆ ಎಂದು ಎನ್ನಲಾಗಿದೆ.
ಆರೋಪಿ ಗಗನ್ ಕಡೂರು, ಸಾಲುಮರದ ತಿಮ್ಮಕ್ಕನ ಪುತ್ರ ಉಮೇಶ್ ಜೊತೆ ಆತ್ಮೀಯ. ಉಮೇಶ್, ಸಾಲುಮರದ ತಿಮ್ಮಕ್ಕನ ಜೊತೆ ಗಗನ್ ಕಡೂರು ಮದುವೆಗೆ ಬಂದಿದ್ದ. ಅಷ್ಟೊಂದು ಇಬ್ಬರ ಮಧ್ಯೆ ಆತ್ಮಯತೆ ಇದೆ. ಹೀಗಾಗಿ ಉಮೇಶ್ ಸ್ನೇಹ ಬಳಸಿ ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಸಂಪೂರ್ಣ ದರ್ಜೆ ಸ್ಥಾನಮಾನ ದುರ್ಬಳಕೆ ಮಾಡಿರುವ ಶಂಕಿಸಲಾಗಿದೆ.
ವಿಧಾನಸೌಧದ ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಕೊಠಡಿಯ ನವೀಕರಣದ ಸಂಪೂರ್ಣ ಜವಾಬ್ದಾರಿಯನ್ನು ಗಗನ್ ಕಡೂರು ಹೊತ್ತುಕೊಂಡಿದ್ದ. ಅಲ್ಲದೇ ಸಾಲುಮರದ ತಿಮ್ಮಕ್ಕ ಪುತ್ರ ಉಮೇಶ್, ಗೃಹ ಸಚಿವ ಜಿ.ಪರಮೇಶ್ವರ್ಗೆ ಆಪ್ತರಾಗಿದ್ದು, ಕಳೆದ ಚುನಾವಣೆಯಲ್ಲಿ ಅವರ ಪ್ರಚಾರ ಮಾಡಿದ್ದರು. ಗಗನ್ ಸಹ ಪರಮೇಶ್ವರ್ ಪರ ಚುನಾವಣಾ ಪ್ರಚಾರಕ್ಕೂ ಉಮೇಶ್ ಜೊತೆ ತೆರಳಿದ್ದ ಎನ್ನುವುದು ಗೊತ್ತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ