ಚಾಮರಾಜನಗರ: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಅಪಘಾತ, 5 ಸಾವು
ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಬಳಿ ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಂಡ್ಯ ಮೂಲದ ಐದು ಮಂದಿ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಟಿಪ್ಪರ್ ಡಿಕ್ಕಿಯಾಗಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ. ಪೊಲೀಸರು ಅಪಘಾತದ ತನಿಖೆ ನಡೆಸುತ್ತಿದ್ದಾರೆ.

ಚಾಮರಾಜನಗರ, ಮಾರ್ಚ್ 01: ಕೊಳ್ಳೇಗಾಲ (Kollegal) ತಾಲೂಕಿನ ಚಿಕ್ಕಿಂದುವಾಡಿ ಬಳಿ ಟಿಪ್ಪರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ಮೂಲದ ನಿಖಿತ, ಶ್ರೀಲಕ್ಷ್ಮಿ ಮಂಡ್ಯ ಮೂಲದ ಸುಹಾಸ್, ಶ್ರೇಯಸ್ ಅಲಿಯಾಸ್ ಶೆಟ್ಟಿ, ನಿತಿನ್ ಮೃತ ದುರ್ದೈವಿಗಳು. ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ರಸ್ತೆ ಪಕ್ಕಕ್ಕೆ ಕಾರು ಉರುಳಿಬಿದ್ದಿದೆ. ಕಾರು ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದ (Mahadeshwar Hill) ಕಡೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಅಪಘಾತದ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಸಂಬಂಧ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಅಪಘಾತದಲ್ಲಿ ಮೃತಪಟ್ಟ ಐವರೂ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಓರ್ವ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾರೆ. ಮೃತರು ಮೈಸೂರಿನ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಶಿವರಾತ್ರಿ ಜಾತ್ರೆಗೆಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಚಾಮರಾಜನಗರ: ನೀರಿನಲ್ಲಿ ಯೋಗ ಮಾಡುತ್ತಲೇ ಮೃತಪಟ್ಟ ಯೋಗಪಟು
ಮೃತಪಟ್ಟವರಲ್ಲಿ ಶ್ರೀಲಕ್ಷ್ಮೀ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯದ ನಿವಾಸಿಯಾಗಿದ್ದಾರೆ. ಶ್ರೀಲಕ್ಷ್ಮೀ ಪೋಷಕರು ಮಗಳ ಶಿಕ್ಷಣಕ್ಕಾಗಿ ಮೈಸೂರಿನಲ್ಲಿ ಮನೆ ಮಾಡಿಕೊಂಡಿದ್ದರು. ಸ್ನೇಹಿತರ ಜೊತೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. ಸದ್ಯ ಟಿಪ್ಪರ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Sat, 1 March 25







