ಪ್ರಿನ್ಸ್ ಹುಲಿ ಬಳಿಕ ಈಗ ಬಂಡೀಪುರದಲ್ಲಿ ಭೀಮನ ದರ್ಬಾರ್ ಶುರು: ಪ್ರವಾಸಿಗರು ಫಿದಾ
ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಿನ್ಸ್ ಹುಲಿಯ ನಂತರ ಭೀಮ ಎಂಬ ಹೊಸ ಹುಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಭೀಮ ತನ್ನ ಗಾಂಭೀರ್ಯ ಮತ್ತು ಪ್ರವಾಸಿಗರನ್ನು ಹತ್ತಿರ ಬರಲು ಅವಕಾಶ ನೀಡುವ ಸ್ವಭಾವದಿಂದ ಜನಪ್ರಿಯವಾಗಿದೆ. ಪ್ರಿನ್ಸ್ ಹುಲಿಯ ಸ್ಥಾನವನ್ನು ಭೀಮ ತುಂಬುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಚಾಮರಾಜನಗರ, ಫೆಬ್ರವರಿ 01: ಇದು ವಿಶ್ವದಲ್ಲೇ ಪ್ರಸಿದ್ದಿ ಪಡೆದ ಪ್ರಮುಖ ಹುಲಿ (tiger) ಸಂರಕ್ಷಿತಾರಣ್ಯ. ಪ್ರಧಾನಿ ನರೇಂದ್ರ ಮೋದಿ ಕೂಡ ಸಫಾರಿ ಮಾಡಿದ್ದರು. ಇಂತಹ ಪ್ರವಾಸಿಗರ ಹಾಟ್ ಫೇವರೆಟ್ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಭೀಮನ ದರ್ಬಾರ್ ಶುರುವಾಗಿದೆ. ಯಾರೂ ಈ ಭೀಮ? ಈತನಿಗೆ ಪ್ರವಾಸಿಗರು ಯಾಕೆ ಫಿದಾ ಆಗಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರ ಇದೆ ಓದಿ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಂದರೆ ವನ್ಯಪ್ರೇಮಿಗಳಿಗೆ ನೆನಪಾಗಾಗ್ತಿದ್ದಿದ್ದು ಪ್ರಿನ್ಸ್ ಹೆಸರಿನ ಹುಲಿ. ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ಸಫಾರಿಗೆ ಹೋದ ಪ್ರವಾಸಿಗರಿಗೆ ದರ್ಶನ ಕೊಡುತ್ತಿದ್ದ, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದನು.
ಇದನ್ನೂ ಓದಿ: ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಈಗ ಪ್ರಿನ್ಸ್ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರಿನ್ಸ್ ಬಳಿಕ ಅನೇಕ ಹುಲಿಗಳು ಬಂಡೀಪುರ ಸಫಾರಿ ಏರಿಯಾದಲ್ಲಿ ಕಂಡಬಂದರೂ ಕೂಡ ಪ್ರಿನ್ಸ್ ಬಳಿಕ ಹುಲಿ ದರ್ಶನ ಸಂಪೂರ್ಣ ಕಡಿಮೆಯಾಗಿತ್ತು. ಆದರೆ ಆ ಪ್ರಿನ್ಸ್ ಹುಲಿಯ ಸ್ಥಾನ ತುಂಬುತ್ತಿರುವುದೇ ಈ ಭೀಮ.
ಭೀಮನ ಸ್ಟೈಲ್ಗೆ ಪ್ರವಾಸಿಗರು ಫಿದಾ
ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಸುಮಾರು 14 ಕಿಮೀ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾನೆ. ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ. ಸಫಾರಿ ವಾಹನ ಬಂದರೂ ಹೆದರದೇ ರಸ್ತೆ ದಾಟಿ, ರಗಡ್ ಲುಕ್ ಕೊಡುವ ಭೀಮನನ್ನು ಸ್ಟೈಲ್ಗೆ ಪ್ರವಾಸಿಗರು ಫಿದಾ ಆಗುತ್ತಿದ್ದಾರೆ.
ಭೀಮ ಹುಲಿಯು ಪ್ರಿನ್ಸ್ ನಂತೆ ಸ್ವಭಾವ ಹೊಂದಿದ್ದು, ಪ್ರಿನ್ಸ್ ರೀತಿಯೇ ಮುಖಭಾವ ಪ್ರದರ್ಶನ ಮಾಡುತ್ತದೆ. ಅಂದಾಜು 5 ವರ್ಷದ ಗಂಡು ಹುಲಿಯಾಗಿರುವ ಭೀಮ ಅತಿ ದೊಡ್ಡದಾದ ಸರಹದ್ದನೇ ಹೊಂದಿದೆ. ಪ್ರವಾಸಿಗರಿಗೆ ರಾಜ ಗಾಂಭೀರ್ಯದಲ್ಲೇ ಫೋಸ್ ಕೊಡುತ್ತಾನೆ. ಪ್ರಿನ್ಸ್ 2018 ರಲ್ಲಿ ವಯೋಸಹಜವಾಗಿ ಅಸುನೀಗಿತ್ತು. ಬಳಿಕ ಈಗ ಭೀಮ ಪ್ರವಾಸಿಗರ ಫೇವರೇಟ್ ಆಗಿದೆ ಎನ್ನುತ್ತಾರೆ ಬಂಡೀಪುರ ಎಸಿಎಫ್ ನವೀನ್ ಕುಮಾರ್.
ಇದನ್ನೂ ಓದಿ: ಚಾಮರಾಜನಗರ: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಬಿದ್ದ ವ್ಯಕ್ತಿ! ಆಮೇಲೇನಾಯ್ತು…
ಒಟ್ಟಿನಲ್ಲಿ ಬಂಡೀಪುರದಲ್ಲಿ ರಾಜನಂತೆ ಮೆರೆದಿದ್ದ ಪ್ರಿನ್ಸ್ ಹುಲಿ ಬಳಿಕ ಈಗ ಭೀಮನ ದರ್ಬಾರ್ ಶುರುವಾಗಿದೆ. ಪ್ರವಾಸಿಗರ ಫೇವರೇಟ್ ಆಗಿ ಭೀಮ ಎಲ್ಲರ ಗಮನ ಸೆಳೆಯುತ್ತಿದೆ. ಸಫಾರಿಗೆ ಬಂದ ಪ್ರವಾಸಿಗರಿಗೆ ಕಾಣಿಸಿಕೊಳ್ಳುವ ಮೂಲಕ ಫೋಟೋ, ವಿಡಿಯೋಗಳಿಗೆ ಪೋಸ್ ಕೊಡ್ತಿದ್ದಾನೆ. ಪ್ರವಾಸಿಗರು ಹಾಗೂ ವನ್ಯಪ್ರೇಮಿಗಳಿಗೆ ಹಾಟ್ ಫೇವರೆಟ್ ಆಗಿದ್ದಾನೆ ಈ ಭೀಮ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.