
ಚಾಮರಾಜನಗರ, (ಆಗಸ್ಟ್ 19): ಹನೂರಿನ ಕಾವೇರಿ ವನ್ಯಧಾಮ ವ್ಯಾಪ್ತಿಯ ಮರಿಮಂಗಲ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ (Hanur Shoot Out Case) ಇದೀಗ ಮಾನವ ಹಕ್ಕುಗಳ ಆಯೋಗ ಪ್ರವೇಶಿಸಿದೆ. ಬೇಟೆಯಾಡಲು ಬಂದು ಅರಣ್ಯ ಇಲಾಖೆ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಆತ್ಮ ರಕ್ಷಣೆಗೆ ಪ್ರತಿದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ, ಅಸಲಿ ಏನಾಗಿದೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಹೀಗಾಗಿ ಈ ಬಗ್ಗೆ ರಾಜಕೀಯ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಇನ್ನೊಂದೆಡೆ ಮ್ಯಾಜಿಸ್ಟ್ರೀಟ್ ತನಿಖೆ ನಡೆಸಿದೆ. ಇದೆಲ್ಲದರ ನಡುವೆ ಮಾನವ ಹಕ್ಕುಗಳ ಆಯೋಗ ಎಂಟ್ರಿಕೊಟ್ಟಿದ್ದು, ಮೂವರ ಸಾವಿನ ಕುರಿತು ಸತ್ಯಾ ಸತ್ಯತೆ ತಿಳಿಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಡಿವೈಎಸ್ಪಿ ಅಶ್ವತ್ಥನಾರಾಯಣ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ತನಿಖೆ ಹನೂರ ನಲ್ಲಿ ಪ್ರಾರಂಭವಾಗಿದ್ದು, ಆಯೋಗದ ಅಧ್ಯಕ್ಷರ ಆದೇಶದ ಅನುಸಾರ ಡಿವೈಎಸ್ಪಿ ಅಶ್ವತ್ ನಾರಾಯಣ ಮತ್ತು ತಂಡ ತನಿಖೆ ನಡೆಯುತ್ತಿದೆ. ಇನ್ನು ಕಾವೇರಿ ವನ್ಯಜೀವಿಧಾಮದ ಎಸಿಎಫ್ ಮರಿಸ್ವಾಮಿ ಅವರು ಮಾನವ ಹಕ್ಕು ಆಯೋಗಕ್ಕೆ ಎಲ್ಲಾ ವಿವರ ನೀಡಿದರು. ಶೂಟೌಟ್ ನಡೆದ ಸ್ಥಳ ಸೇರಿದಂತೆ ಧ್ವಂಸಗೊಂಡ ಕಳ್ಳಬೇಟೆ ಶಿಬಿರಗಳಿಗೆ ಭೇಟಿ ನೀಡಿದ್ದು, ಯಾವ ಸ್ಥಳದಲ್ಲಿ ಶೂಟ್ ಮಾಡಲಾಯಿತು? ಎಲ್ಲಿ ಮಾಂಸ ಸಿಕ್ಕಿತು? ಮೂವರು ಎಲ್ಲಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಒಟ್ಟು ನಾಲ್ಕು ಜನರಲ್ಲಿ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಇನ್ನುಳಿದ ಓರ್ವ ಎಸ್ಕೇಪ್ ಆಗಿದ್ದು, ಇದೀಗ ಅಜ್ಞಾತ ಸ್ಥಳದಲ್ಲಿರುವ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದರೆ ಅಸಲಿ ಸತ್ಯಾಂಶ ಹೊರಬರಲಿದೆ. ಆದ್ರೆ, ಆ ವ್ಯಕ್ತಿ ನಿಗೂಢವಾಗಿ ಕಾಣೆಯಾಗಿದ್ದು, ಅಲ್ಲಿಂದಲೇ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾನೆ.
ಆ.15ರಂದು ಬೆಳಗಿನ ಜಾವ 5:20 ಆಗಿತ್ತು. ಈ ವೇಳೆ ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದರು, ಕೂಡಲೇ ಶೂಟ್ ಮಾಡಿದರು. ಇದರಿಂದ ಭಯಗೊಂಡು ಓಡಿ ಹೋದೆ. 5 ನಿಮಿಷ ಆದ್ಮೇಲೆ ಯಾವುದೇ ಶಬ್ದ ಇರಲಿಲ್ಲ. ನಂಗೆ ಹುಷಾರಿರಲಿಲ್ಲ ಹೀಗಾಗಿ ನಾನು ಅಲ್ಲಿಂದ ಓಡಿ ಮನೆಗೆ ಬಂದೆ, ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಇದೀಗ ಅರಣ್ಯ ಇಲಾಖೆಯವರು ಸಾಕ್ಷಿ ಆಗಲು ನನ್ನನ್ನು ಹುಡುಕುತ್ತಿದ್ದಾರೆ. ನಂಗೆ ಭಯವಾಗ್ತಿದೆ. ಪೊಲೀಸರೇ ನನಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದಾನೆ.