ಚನ್ನಪಟ್ಟಣ ಅಖಾಡದಲ್ಲಿ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: ‘ಕೈ’ ತಂತ್ರಗಳು ಹೀಗಿವೆ ನೋಡಿ
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕಣ ರಂಗೇರುತ್ತಿದೆ. ಅದರಲ್ಲೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣದಲ್ಲಿ ರಣತಂತ್ರಗಳು ಜೋರಾಗುತ್ತಿವೆ. ಅತ್ತ ಬಿಜೆಪಿ, ಎನ್ಡಿಎಯಲ್ಲಿ ಟಿಕೆಟ್ ಗೊಂದಲ ಹೆಚ್ಚಾಗಿರುವ ಬೆನ್ನಲ್ಲೇ ಅದರ ಲಾಭ ಪಡೆಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿವೆ. ಆ ಕುರಿತ ವಿವರ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 22: ಉಪಚುನಾವಣೆ ಅಖಾಡದಲ್ಲಿ ಸದ್ಯಕ್ಕೆ ಮೂರು ಪಕ್ಷಗಳ ಹಾಟ್ ಫೇವರಿಟ್ ಆಗಿರುವುದು ಚನ್ನಪಟ್ಟಣ. ಚನ್ನಪಟ್ಟಣದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಆಗುತ್ತಾರೆ ಎಂಬುದು ಭಾರೀ ರಹಸ್ಯವಾಗಿ ಉಳಿದಿದೆ. ಸಿಪಿ ಯೋಗೇಶ್ವರ್ ಬಂಡಾಯದ ಸುಳಿವು ಕೊಡುತ್ತಿದ್ದಂತೆಯೇ ಕಾಂಗ್ರೆಸ್ ಬಾಗಿಲು ತೆರೆದು ಎದುರು ನೋಡುತ್ತಿದೆ. ಡಿಕೆ ಸಹೋದರರು ಬಿಜೆಪಿ, ಜೆಡಿಎಸ್ ನಾಯಕರ ಮುಂದಿನ ನಡೆಯನ್ನು ಗಮನಿಸುತ್ತಿದ್ದಾರೆ. ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ತಂತ್ರಗಾರಿಕೆಯ ಗುಟ್ಟು ರಟ್ಟು ಮಾಡದಿರಲು ಡಿಕೆ ಸಹೋದರರು ಪ್ಲ್ಯಾನ್ ಮಾಡಿದಂತಿದೆ. ಚನ್ನಪಟ್ಟಣವನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಕೆ ಸಹೋದರರು, ಹೆಚ್ಡಿಕೆ ವಿರುದ್ಧ ರಾಕಾರಣದಲ್ಲಿ ಶತ್ರುವಿನ ಶತ್ರು ಮಿತ್ರ ಎನ್ನುವ ಚಿಂತನೆ ಮಾಡಿದಂತಿದೆ.
ಕಾಂಗ್ರೆಸ್ನ ತಂತ್ರಗಳೇನು?
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವುದು. ಒಂದು ವೇಳೆ, ಸಿಪಿವೈ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಪ್ರಬಲ ಅಭ್ಯರ್ಥಿಯನ್ನು ಕಾಂಗ್ರೆಸ್ನಿಂದ ಕಣಕ್ಕೆ ಇಳಿಸುವುದು. ಒಂದು ವೇಳೆ ತ್ರಿಕೋನ ಸ್ಪರ್ಧೆ ಏರ್ಪಟ್ಟಲ್ಲಿ ಡಿಕೆ ಸುರೇಶ್ ಅವರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಡಮ್ಮಿ ಅಭ್ಯರ್ಥಿಯನ್ನು ಹಾಕಿ ಕುಮಾರಸ್ವಾಮಿಗೆ ಸೋಲುಣಿಸುವ ತಂತ್ರವನ್ನೂ ಅನುಸರಿಸಬಹುದು. ಎಲ್ಲಾ ಅಂದುಕೊಂಡಂತೆ ಆಗಿ ಎನ್ಡಿಎ ಅಭ್ಯರ್ಥಿಯೇ ಚುನಾವಣೆಗೆ ಸ್ಪರ್ಧಿಸಿದರೆ, ಕಾಂಗ್ರೆಸ್ನಿಂದ ರಘುನಂದನ್ ರಾಮಣ್ಣಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ.
ಹೀಗೆ ಒಂದೆಡೆ ಒಳಗೊಳಗೆ ರಣತಂದ್ರ ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸೇರ್ಪಡೆ ಆಗುವ ಸಾಧ್ಯತೆ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಕಾಂಗ್ರೆಸ್ನವರು ನನ್ನ ಸಂಪರ್ಕಿಸಿಲ್ಲ. ಅಂತಹ ಆಲೋಚನೆಯೂ ನನಗಿಲ್ಲ ಎಂದಿದ್ದಾರೆ. ಸಿಪಿವೈ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪಕ್ಷದ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಈ ಬಗ್ಗೆ ಚರ್ಚೆ ಆಗಿಲ್ಲ. ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ಗೆ ಬಿಗ್ ಶಾಕ್: ಬಿಜೆಪಿಗೆ ರಾಜೀನಾಮೆ ನೀಡದೇ ಪಕ್ಷೇತರವಾಗಿ ಸ್ಪರ್ಧೆ ಎಂದ ಯೋಗೇಶ್ವರ್
ಹೀಗೆ ಚನ್ನಪಟ್ಟಣ ಅಖಾಡ ಉಪ ಚುನಾವಣೆ ಅಖಾಡ ಅಂದುಕೊಂಡಷ್ಟು ಸಲೀಸಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಇಂದೇ ಚನ್ನಪಟ್ಟಣ ಕ್ಲೈಮ್ಯಾಕ್ಸ್ಗೆ ತೆರೆ ಬೀಳುವ ಸಾಧ್ಯತೆಯೂ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ