ರೈತರಿಗೊಂದು ರೇಟ್, ಮಾರುಕಟ್ಟೆಯಲ್ಲಿ ಇನ್ನೊಂದು ರೇಟ್; ಕಂಗಾಲಾದ ಅನ್ನದಾತ
ಉಳಿದ ಅಷ್ಟೋ ಇಷ್ಟೋ ಬೆಳೆಗಳಲ್ಲಿ ಲಾಭ ಗಳಿಸೋಣ ಅಂತ ರೈತರಿದ್ದರು. ಆದರೆ ದಲ್ಲಾಳಿಗಳು, ವರ್ತಕರು ಸೂಕ್ತ ಬೆಲೆ ನೀಡುತ್ತಿಲ್ಲ ಅಂತ ರೈತರು ಕಂಗಾಲಾಗಿದ್ದಾರೆ. ತರಕಾರಿ ಬೆಳೆಗಳನ್ನು ಕಾಪಾಡಿಕೊಂಡು ಮಾರುಕಟ್ಟೆಗೆ ತಂದರೆ ರೈತರಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ.
ಚಿಕ್ಕಬಳ್ಳಾಪುರ: ಇನ್ನೇನು ಫಸಲು ರೈತರ ಕೈ ಸೇರಬೇಕಿತ್ತು. ಹೆಚ್ಚು ಆದಾಯದ ನಿರೀಕ್ಷೆಯಲ್ಲಿ ರೈತರು ಇದ್ದರು. ಹೊಲಗಳಿಗೆ ಇಳಿದು ಕಟಾವು ಮಾಡಬೇಕು ಅನ್ನುವಷ್ಟರಲ್ಲಿ ಮಳೆರಾಯ ರೈತರ ಬದುಕಿಗೆ ಕೊಳ್ಳಿ ಇಟ್ಟಿದ್ದಾನೆ. ರಾಜ್ಯದಲ್ಲಿ ಸುರಿದ ನಿರಂತರ ಮಳೆಗೆ ರೈತರ ಬದುಕು ಬೀದಿಗೆ ಬಂದಂತಾಗಿದೆ. ಫಸಲು ಚೆನ್ನಾಗಿ ಬಂದಿತ್ತು. ಆದರೆ ಅಕಾಲಿಕ ಮಳೆಯಿಂದ ನಿರೀಕ್ಷೆ ನುಚ್ಚು ನೂರಾಗಿದೆ. ಬೆಳೆಗಳೆಲ್ಲ ನೀರು ಪಾಲಾಗಿದ್ದು, ರೈತರಿಗೆ ದಿಕ್ಕೇ ತೋಚದಂತಾಗಿದೆ. ಈ ನಡುವೆ ಅನ್ನದಾತನಿಗೆ ಇನ್ನೊಂದು ಆತಂಕ ಶುರುವಾಗಿದೆ.
ಉಳಿದ ಅಷ್ಟೋ ಇಷ್ಟೋ ಬೆಳೆಗಳಲ್ಲಿ ಲಾಭ ಗಳಿಸೋಣ ಅಂತ ರೈತರಿದ್ದರು. ಆದರೆ ದಲ್ಲಾಳಿಗಳು, ವರ್ತಕರು ಸೂಕ್ತ ಬೆಲೆ ನೀಡುತ್ತಿಲ್ಲ ಅಂತ ರೈತರು ಕಂಗಾಲಾಗಿದ್ದಾರೆ. ತರಕಾರಿ ಬೆಳೆಗಳನ್ನು ಕಾಪಾಡಿಕೊಂಡು ಮಾರುಕಟ್ಟೆಗೆ ತಂದರೆ ರೈತರಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಗ್ರಾಹಕರು ಮಾತ್ರ ಮೂರು ಪಟ್ಟು ದುಬಾರಿಯಾಗಿ ತರಕಾರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಒಂದು ಕೆಜಿ ಬೀನ್ಸ್ಗೆ 90 ರೂಪಾಯಿ ಕೊಟ್ಟು ಗ್ರಾಹಕರು ಖರೀದಿ ಮಾಡುತ್ತಿದ್ದರೆ, ರೈತರಿಗೆ ಕೇವಲ 25 ರೂಪಾಯಿ ಮಾತ್ರ ದೊರೆಯುತ್ತಿದೆ.
ಕೆಲ ತರಕಾರಿಗೆ 80 ರೂ. ರಿಂದ 150 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಆದರೆ ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ರೈತನಿಗೂ ಬೆಲೆ ಏರಿಕೆ ಲಾಭ ದೊರೆಯುತ್ತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 12 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆದಿದ್ದಾರೆ. ಟೊಮ್ಯಾಟೋಗೆ ಸದ್ಯ ಮಾರುಕಟ್ಟೆಯಲ್ಲಿ ಬೆಲೆ ದುಬಾರಿಯಾಗಿದೆ. ಆದರೆ ಟೊಮ್ಯಾಟೋ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಷ್ಟ ಪಟ್ಟು ಟೊಮ್ಯಾಟೋ ಬೆಳೆದರೆ ಅದರ ಲಾಭವೆಲ್ಲಾ ದಲ್ಲಾಳಿಗಳು, ವರ್ತಕರು, ಚಿಲ್ಲರೆ ವ್ಯಾಪಾರಿಗಳ ಪಾಲಾಗುತ್ತಿದೆ.
ಹಾವೇರಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮ್ಯಾಟೋಗೆ 80 ರಿಂದ 130 ರುಪಾಯಿಗೆ ಮಾರಾಟವಾಗುತ್ತಿದೆ. ಆದರೆ ರೈತರಿಗೆ 40 ರಿಂದ 80 ರುಪಾಯಿ ಸಿಗುತ್ತಿದೆ. ರೈತರಿಂದ ಖರೀದಿಸಿದ ದರಕ್ಕಿಂತ ದುಪ್ಪಟ್ಟು ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಖರ್ಚು ಮಾಡಿದ ಹಣವೂ ಬರಲಿಲ್ಲ ಅಂತ ರೈತರು ಕಂಗಾಲಾಗಿದ್ದಾರೆ.
ಮಳೆಯಿಂದ ತರಕಾರಿ, ಹೂ-ಹಣ್ಣುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರೈತರಿಗೊಂದು ಬೆಲೆ, ಮಾರುಕಟ್ಟೆಯಲ್ಲೊಂದು ಬೆಲೆ ಸಿಗುತ್ತಿದೆ. ರೈತರು ಕೊಡುವ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ನಿಗದಿ ಮಾಡಿದ್ದಾರೆ. 12 ಕೆಜಿ ಒಂದು ಪಾಕೆಟ್ ಬದನೆಕಾಯಿಗೆ 300-400 ರೂ. ಗೆ ರೈತರು ಕೊಡುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 60-70 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ರೈತರು ರಾಜ್ಯದ ಹಲವೆಡೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ
Published On - 11:36 am, Wed, 24 November 21