ಜಲಾಶಯದ ಹಿನ್ನೀರಿನಲ್ಲಿ ಮುಳುಗಿಬಿಟ್ಟ ಬ್ರಿಡ್ಜ್! ಹತ್ತಾರು ಗ್ರಾಮಗಳ ಜನರ ಸಂಚಾರಕ್ಕೆ ದಿನನಿತ್ಯ ಸಂಕಷ್ಟ
ಪ್ರತಿದಿನ ಶಾಲಾ- ಕಾಲೇಜು ವಿದ್ಯಾರ್ಥಿಗಳು, ರೈತರು, ಜನ ಸಾಮಾನ್ಯರು ಇದೆ ರಸ್ತೆಯ ಮೂಲಕ ದೊಡ್ಡಬಳ್ಳಾಪುರ- ಚಿಕ್ಕಬಳ್ಳಾಪುರಕ್ಕೆ ಹೋಗಿ ಬರಬೇಕು. ಆದರೆ ರಸ್ತೆ ಜಲಾವೃತವಾದ ಕಾರಣ ಈಗ ಇದೆ ನೀರಿನಲ್ಲಿ ಪ್ರಾಣ ಕೈಯಲ್ಲಿ ಹಿಡಿದು ನೀರಿನಲ್ಲಿ ಸಂಚರಿಸುವಂತಾಗಿದೆ.
ಚಿಕ್ಕಬಳ್ಳಾಪುರ: ನಂದಿಬೆಟ್ಟ ಸೇರಿದಂತೆ ಸುತ್ತಮುತ್ತಲ ಬೆಟ್ಟಗಳಲ್ಲಿ ಧಾರಾಕರವಾಗಿ ಸುರಿದ ಮಳೆಗೆ, ಅಲ್ಲಿರುವ ಜಲಾಶಯವೊಂದು ತುಂಬಿ ತುಳುಕುತ್ತಿದ್ದು, ಇದರಿಂದ ಜಲಾಶಯದ ಹಿನ್ನೀರಿನಲ್ಲಿರುವ ಸೇತುವೆಯೊಂದು ಜಲಾಶಯದಲ್ಲಿ ಮುಳುಗಿದೆ. ಪರಿಣಾಮ ಸುತ್ತಮುತ್ತಲ ಹತ್ತೂರು ಜನರ ರಸ್ತೆ ಸಂಪರ್ಕವೇ ಬಂದ್ ಆಗಿದ್ದು, ಜನರು ನಿತ್ಯವೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಅವಳಿ ನಗರಗಳ ಜೀವನಾಡಿ ಜಕ್ಕಲಮಡಗು ಜಲಾಶಯ ತುಂಬಿದ್ದು, ಸೇತುವೆ ಮುಳುಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಗ್ರಾಮದ ಬಳಿ ಈ ಜಲಾಶಯ ಇದೆ. ಆದರೆ ಕಳೆದ ವಾರದಿಂದ ಸುರಿದ ಧಾರಾಕರ ಮಳೆಗೆ ಜಲಾಶಯ ತುಂಬಿ ತುಳುಕುತ್ತಿರುವುದು ಒಂದೆಡೆ ಸಂತಸವಾದರೆ ಮತ್ತೊಂದೆಡೆ ಸ್ಥಳಿಯರ ಸಂಕಷ್ಟಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಗುಂಗಿರ್ಲಹಳ್ಳಿ, ಚಿಕ್ಕಬಳ್ಳಾಪುರ ತಾಲೂಕಿನ ಹತ್ತಾರು ಹಳ್ಳಿಯ ಜನರ ಸಂಪರ್ಕಕ್ಕೆ ಇದ್ದ ಏಕೈಕ ರಸ್ತೆ ಹಾಗೂ ಜಲಾಶಯದ ಸೇತುವೆ ಜಲಾವೃತವಾಗಿ ಜನ ರಸ್ತೆ ದಾಟಲು ಪರದಾಡುವಂತಾಗಿದೆ.
ಪ್ರತಿದಿನ ಶಾಲಾ- ಕಾಲೇಜು ವಿದ್ಯಾರ್ಥಿಗಳು, ರೈತರು, ಜನ ಸಾಮಾನ್ಯರು ಇದೆ ರಸ್ತೆಯ ಮೂಲಕ ದೊಡ್ಡಬಳ್ಳಾಪುರ- ಚಿಕ್ಕಬಳ್ಳಾಪುರಕ್ಕೆ ಹೋಗಿ ಬರಬೇಕು. ಆದರೆ ರಸ್ತೆ ಜಲಾವೃತವಾದ ಕಾರಣ ಈಗ ಇದೆ ನೀರಿನಲ್ಲಿ ಪ್ರಾಣ ಕೈಯಲ್ಲಿ ಹಿಡಿದು ನೀರಿನಲ್ಲಿ ಸಂಚರಿಸುವಂತಾಗಿದೆ. ನೀರಿನಲ್ಲಿ ಬೈಕ್, ಕಾರುಗಳಲ್ಲಿ ಈ ಕಡೆಯಿಂದ ಆ ಕಡೆ, ಆ ಕಡೆಯಿಂದ ಈ ಕಡೆ ಸಂಚರಿಸುತ್ತಿದ್ದಾರೆ. ಇನ್ನೂ ಸಮಸ್ಯೆ ಬಗೆಹರಿಸುವಂತೆ ಸ್ಥಳಿಯರು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಲತಾ.ಆರ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಜಕ್ಕಲಮಡಗು ಜಲಾಶಯದ ಎತ್ತರವನ್ನು ಹೆಚ್ಚಳ ಮಾಡಿದ ನಂತರ ಮೂರ್ನಾಲ್ಕು ವರ್ಷಗಳ ಹಿಂದೆ ಸಹ ಇದೆ ಸಮಸ್ಯೆ ಆಗಿತ್ತು. ಮತ್ತೆ ಈಗ ಜಲಾಶಯ ತುಂಬಿದಾಗಲೂ ಪುನಃ ಅದೇ ಸಮಸ್ಯೆ. ಇದರಿಂದ ನಮ್ಮ ಸಮಸ್ಯೆಗೆ ಮೇಲ್ಸುತುವೆ ನಿರ್ಮಾಣ ಮಾಡಿ, ಶಾಶ್ವತ ಪರಿಹಾರ ಮಾಡಿಕೊಡಿ ಎಂದು ಸ್ಥಳಿಯರಾದ ಗೊಂವಿಂದಪ್ಪ ಆಗ್ರಹಿಸಿದ್ದಾರೆ.
ವರದಿ: ಭೀಮಪ್ಪ ಪಾಟೀಲ್
ಇದನ್ನೂ ಓದಿ: ಜಲಾವೃತಗೊಂಡ ಸೇತುವೆ ದಾಟಲು ಹೋಗಿ 260 ಚೀಲ ಸಕ್ಕರೆ ನೀರುಪಾಲು!
Karnataka Weather Today: ಮಲೆನಾಡು, ಕರಾವಳಿಯಲ್ಲಿ ಸೆ. 2ರವರೆಗೂ ಭಾರೀ ಮಳೆ; ಕೆಲವೆಡೆ ಆರೆಂಜ್ ಅಲರ್ಟ್ ಘೋಷಣೆ