ಚಿಕ್ಕಬಳ್ಳಾಪುರದಲ್ಲಿ ಪ್ರಕಾಶ್ ರಾಜ್ ಭಾಷಣಕ್ಕೆ ನಿರ್ಬಂಧ: ಮೆರವಣಿಗೆಗೆ ಚಾಲನೆ ನೀಡಿ ವಾಪಸ್ ಹೋದ ನಟ
ನಟ ಪ್ರಕಾಶ್ ರಾಜ್ ಭಾಷಣಕ್ಕೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಿರ್ಬಂಧ ಹೇರಲಾಗಿದೆ. ಡಿವೈಎಫ್‌ಐ ಸಮಾವೇಶದಲ್ಲಿ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಭಾಷಣಕ್ಕೆ ತಡೆ ಒಡ್ಡಿದ್ದು, ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ತಪ್ಪು, ಅಧಿಕಾರಿಗಳ ಸರ್ವಾಧಿಕಾರ ಎಂದು ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 26: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿವೈಎಫ್‌ಐ ಸಮಾವೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಭಾಷಣಕ್ಕೆ ನಿರ್ಬಂಧ ಹೇರಲಾಗಿದೆ. ಬಾಗೇಪಲ್ಲಿ ತಾಲೂಕು ಇಒ ಹಾಗೂ ಎಸ್‌ಐಆರ್ ನೋಡಲ್ ಅಧಿಕಾರಿ ನಾಗಮಣಿ, ಕಾರ್ಯಕ್ರಮದ ಆಯೋಜಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪ್ರಕಾಶ್ ರಾಜ್ ಭಾಷಣಕ್ಕೆ ನಿರ್ಬಂಧ ಹೇರಿದ್ದಾರೆ. ಜೊತೆಗೆ ಎಸ್ಐಆರ್ ಮತ್ತು ಚುನಾವಣಾ ಆಯೋಗದ ಬಗ್ಗೆ ಮಾತನಾಡದಂತೆ ತಾಕೀತು ಮಾಡಲಾಗಿದೆ.
ಪ್ರಕಾಶ್ ರಾಜ್ ಭಾಷಣಕ್ಕೆ ನಿರ್ಬಂಧ ಬೆನ್ನಲ್ಲೇ ಆಕ್ರೋಶ
ಸಮಾವೇಶದಲ್ಲಿ ಭಾಷಣಕ್ಕೆ ನಿರ್ಬಂಧ ಹೇರಿದ ಹಿನ್ನೆಲೆ ನಟ ಪ್ರಕಾಶ್ ರಾಜ್ ಕೇವಲ ಮೆರವಣಿಗೆಗೆ ಚಾಲನೆ ನೀಡಿ, ಯಾವುದೇ ಭಾಷಣ ಮಾಡದೆ ಚಿಕ್ಕಬಳ್ಳಾಪುರಕ್ಕೆ ವಾಪಸ್ ಹೋಗಿದರು. ಇನ್ನು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ವಿರುದ್ಧ ಸಮಾವೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಾನು ಕ್ಯಾಕರಿಸಿ ಉಗಿಯುತ್ತೇನೆಂದು ಹೆದರಿಕೊಂಡಿದ್ದಾರೆ: ಪ್ರಕಾಶ್ ರಾಜ್
ತಮ್ಮ ಭಾಷಣಕ್ಕೆ ನಿರ್ಬಂಧ ಹೇರಿದ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮುಚ್ಚಳಿಕೆ ಬರೆಸಿಕೊಂಡಿರುವುದು ತಪ್ಪು’ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ಮುಚ್ಚಳಿಕೆ ಪತ್ರವನ್ನು ನನಗೆ ಕೊಟ್ಟಿಲ್ಲ, ಕೊಡುವ ಧೈರ್ಯವೂ ಅವರಿಗೆ ಬಂದಿಲ್ಲ. ನಾನು ಸತ್ಯ ಹೇಳುತ್ತೇನೆ, ಕ್ಯಾಕರಿಸಿ ಉಗಿಯುತ್ತೇನೆ ಎಂದು ಹೆದರಿಕೊಂಡಿದ್ದಾರೆ’ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಪ್ರಕಾಶ್ ರಾಜ್ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ
‘ನಾನು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ಬಗ್ಗೆ ಜನಜಾಗೃತಿ ಪ್ರವಾಸದಲ್ಲಿದ್ದೇನೆ. ಅದರ ಭಾಗವಾಗಿ ಡಿವೈಎಫ್‌ಐ ಸಮಾವೇಶಕ್ಕೆ ಬರಬೇಕಿತ್ತು. ಬಾಗೇಪಲ್ಲಿಗೆ ತೆರಳಿ ಮೆರವಣಿಗೆಗೆ ಚಾಲನೆ ನೀಡಿದೆ. ಅಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಮುಚ್ಚಳಿಕೆ ಹಾಗೂ ನಿರ್ಬಂಧದ ಬಗ್ಗೆ ಯಾರು ಘೋಷಣೆ ಮಾಡಿದ್ದಾರೋ ಅವರನ್ನೇ ಕೇಳಿ’ ಎಂದು ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




