ಇತಿಹಾಸದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ನಮ್ಮದು: ಸಚಿವ ಡಾ.ಕೆ.ಸುಧಾಕರ್

ಕಳೆದ 40 ವರ್ಷಗಳಿಂದ ಪರಿಶಿಷ್ಟಪಂಗಡದ ಸಮುದಾಯ ನಿರಂತರ ಹೋರಾಟ ಮಾಡುತ್ತಲೇ ಇತ್ತು. ಆದರೆ ಈ ಹಿಂದೆ ಬಂದ ಯಾವುದೇ ಸರ್ಕಾರಗಳು ಇತ್ತ ಗಮನ ಹರಿಸಿದ ಉದಾಹರಣೆ ಇಲ್ಲ ಎಂದು ಸಚಿವರು ಹೇಳಿದರು.

ಇತಿಹಾಸದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ನಮ್ಮದು: ಸಚಿವ ಡಾ.ಕೆ.ಸುಧಾಕರ್
ಆರೋಗ್ಯ ಸಚಿವ ಡಾ.ಕೆ. ಸುಧಾಕರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2022 | 6:02 PM

ಚಿಕ್ಕಬಳ್ಳಾಪುರ: ಇತಿಹಾಸದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ಎಂದರೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವಾಗಿದ್ದು, ಕಳೆದ 40 ವರ್ಷಗಳ ನಿರಂತರ ಮೀಸಲು ಹೋರಾಟಕ್ಕೆ ಮುಕ್ತಿ ಕೊಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದವರು. ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು. ಕಳೆದ 40 ವರ್ಷಗಳಿಂದ ಪರಿಶಿಷ್ಟಪಂಗಡದ ಸಮುದಾಯ ನಿರಂತರ ಹೋರಾಟ ಮಾಡುತ್ತಲೇ ಇತ್ತು. ಆದರೆ ಈ ಹಿಂದೆ ಬಂದ ಯಾವುದೇ ಸರ್ಕಾರಗಳು ಇತ್ತ ಗಮನ ಹರಿಸಿದ ಉದಾಹರಣೆ ಇಲ್ಲ ಎಂದು ಸಚಿವರು ಹೇಳಿದರು.

ಕಾಂಗ್ರೆಸ್ ಆರೋಪಕ್ಕೆ ತಕ್ಕ ಉತ್ತರ

ಕಳೆದ 40 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಹಲವು ಬಾರಿ ಬಂದು ಹೋದರೂ ಮೀಸಲು ಸೌಲಭ್ಯ ನೀಡಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ತೆಗೆಯುತ್ತಾರೆ, ಸಂವಿಧಾನ ಬದಲಿಸುತ್ತಾರೆ ಎಂದು ಆರೋಪಿಸುತ್ತಿದ್ದರು. ಇಂತಹ ಸುಳ್ಳು ಆರೋಪಗಳಿಗೆ ಸರ್ಕಾರ ಈಗ ತಕ್ಕ ಉತ್ತರ ನೀಡಿದೆ ಎಂದರು.

ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಸಂಪೂರ್ಣವಾಗಿ ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಗಿದೆ. ಎಸ್ ಟಿ ಸಮುದಾಯಕ್ಕೆ 50ಕ್ಕೂ ಹೆಚ್ಚು ಜಾತಿಗಳು ಸೇರಿದ್ದರೆ, ಎಸ್ ಸಿ ಸಮುದಾಯಕ್ಕೂ ಹೆಚ್ಚಿನ ಜಾತಿಗಳು ಸೇರಿವೆ. ಅಲ್ಲದೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂಬುದು ನಮ್ಮ ಸರ್ಕಾರದ ಉದ್ಧೇಶವಾಗಿದ್ದು, ಇದನ್ನು ಇಂದು ನಿರೂಪಿಸಲಾಗಿದೆ ಎಂದು ಹೇಳಿದರು.

ಸಮಿತಿ ರಚಿಸಿದ್ದೇ ಸಮ್ಮಿಶ್ರ ಸರ್ಕಾರ

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಸರ್ಕಾರ ಹೋಯಿತು. ನಂತರ ನಮ್ಮ ಸರ್ಕಾರ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ಈ ಸಂದರ್ಭದಲ್ಲಿ ಸಮಿತಿ ಹೆಚ್ಚಿನ ಕಾಲವಕಾಶ ನೀಡುವಂತೆ ಕೋರಿತು. ಇದರಿಂದಾಗಿ ನಮ್ಮ ಸರ್ಕಾರ ಒಂದು ವರ್ಷ ಅವಧಿ ವಿಸ್ತರಿಸಲಾಯಿತು. ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರವೂ ಸಮಿತಿಯನ್ನು ಸಂಪರ್ಕಿಸಿ ಚರ್ಚಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮಾತ್ರವೇ ಮಾಡಿದ ಸಾಧನೆಗಳು

ಎಸ್ ಸಿ ಮತ್ತು ಎಸ್ ಟಿ ಮಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕಂಕಣ ಬದ್ಧವಾಗಿದೆ ಎಂಬುದನ್ನು ತೋರಿಸಿದ್ದೇವೆ. ಬಿಜೆಪಿ ವಿರುದ್ಧ ಜನರಿಗೆ ತಪ್ಪು ತಿಳವಳಿಕೆ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಎಸ್ ಟಿ ಸಮುದಾಯದ ವಾಲ್ಮೀಕಿ ಜಯಂತಿಯನ್ನು ಆರಂಭಿಸಿದ್ದು ಬಿಜೆಪಿ. ವಾಲ್ಮೀಕಿ ಪ್ರಶಸ್ತಿ ಪ್ರಕಟಿಸಿದ್ದು ಬಿಜೆಪಿ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಯೋಚನೆ ಮಾಡಿದ್ದು ಬಿಜೆಪಿ, ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಬಿಜೆಪಿ, ಅಲ್ಲದೆ ಪರಿಶಿಷ್ಟ ವರ್ಗಗಳಿಗಾಗಿಯೇ ಪ್ರತ್ಯೇಕ ಇಲಾಖೆ ಮಾಡಲಾಗಿದೆ. ಎಲ್ಲವನ್ನೂ ಮಾಡಿರುವುದು ಬಿಜೆಪಿ ಸರ್ಕಾರವಾದರೆ ಸುಳ್ಳು ಆರೋಪ ಮಾಡುವುದನ್ನೇ ವಿರೋಧ ಪಕ್ಷಗಳು ಕಾಯಕ ಮಾಡಿಕೊಂಡಿವೆ ಎಂದು ಕಿಡಿ ಕಾರಿದರು.

ಎಸ್ ಸಿಗೂ ಮೀಸಲು ಹೆಚ್ಚಳ

ಪರಿಶಿಷ್ಟ ಜಾತಿಗಾಗಿ ಇದ್ದ ಶೇ.15 ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸಲಾಗಿದೆ. ಇವರಲ್ಲಿ ಸ್ಪೃಶ್ಯರು ಮತ್ತು ಅಸ್ಪೃಶ್ಯರೂ ಇದ್ದಾರೆ. ಜೊತೆಗೆ ಬೋವಿ, ಹೈದರಾಬಾದ್ ಕರ್ನಾಟಕ ಮೂಲಕ ಲಂಬಾಣಿ, ಕೊಡಚ, ಕೊರಮ ಸೇರಿದಂತೆ ಹಲವು ಸಮುದಾಯಗಳು ಸೇರಿವೆ. ಇವರೆಲ್ಲರ ಅನುಕೂಲಕ್ಕಾಗಿ ಮೀಸಲಾತಿ ಹೆಚ್ಚಳ ಮಾಡಿದ್ದು, ಇದು ಉಭಯ ಸಮುದಾಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ವರದಿ: ಭೀಮಪ್ಪ ಪಾಟೀಲ್ ಚಿಕ್ಕಬಳ್ಳಾಪುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.