ಚಿಕ್ಕಬಳ್ಳಾಪುರ: ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬಿದರೆ ಒಂದು ಬ್ಯಾಂಕ್ ತೆರೆದಂತೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ನಡೆದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಅಗತ್ಯವಿದೆ. ಈ ಕುರಿತು ತಾವು ಕಾಳಜಿ ವಹಿಸುತ್ತಿರುವುದಾಗಿ ಅವರು ತಿಳಿಸಿದರು.
ಮಹಿಳೆಯರಿಗೆ ಸಮಾನ ಅವಕಾಶ ಅಗತ್ಯ :
ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸಮಾನ ಹಕ್ಕುಗಳು ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೂ ಪರಿಪೂರ್ಣ ಅಭಿವೃದ್ಧಿ ಅಸಾಧ್ಯ. ಇದ್ರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರತಿ ಮನೆಯ ಮಹಿಳೆ ಒಂದು ಸ್ತ್ರೀ ಶಕ್ತಿ ಸಂಘಗಳಲ್ಲಿ ಭಾಗವಹಿಸಬೇಕು ಎಂಬ ಗುರಿಯಿದೆ. ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮೂಲಕ ಈಗಾಗಲೇ 2 ಸಾವಿರ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಲಾಗಿದೆ. ಇನ್ನೂ ಮೂರು ಸಾವಿರ ಸ್ತ್ರೀ ಶಕ್ತಿ ಸಂಘಗಳ ರಚನೆಯ ಗುರಿ ಹೊಂದಲಾಗಿದೆ ಎಂದರು.
ನಮ್ಮ ಮೇಲೆ ನಮಗೆ ವಿಶ್ವಾಸ ಇರಲಿ:
ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದು, ಸಂಕಲ್ಪ ಹೊಂದಿದರೆ ಎಲ್ಲರೂ ಸಾಧನೆ ಮಾಡಲು ಸಾಧ್ಯ, ಪ್ರಸ್ತುತ 3.4 ಕೋಟಿ ರೂ ಮೊತ್ತದ ಬಡ್ಡಿರಹಿತ ಸಾಲವನ್ನು ವಿತರಿಸಲಾಗುತ್ತಿದೆ. ಇದರಲ್ಲಿ 61 ಸ್ತ್ರೀ ಶಕ್ತಿ ಸಂಘಗಳ, 761 ಫಲಾನುಭವಿಗಳಿಗೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
15 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಚಾಲನೆ:
ಇಂದು ನಡೆದ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಸಚಿವರು ಒಟ್ಟು 15 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 58ರ ನಾಮಗೊಂಡ್ಲುವಿನಿಂದ ಚಿಕ್ಕಬಳ್ಳಾಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 5 ಕೋಟಿ, ಚದಲಪುರ ಮೂಲಕ ತಾಳಹಳ್ಳಿ, ಬೊಮ್ಮಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ 6 ಕೋಟಿ, ಕೇತೇನಹಳ್ಳಿ ರಸ್ತೆಗೆ 5 ಕೋಟಿ, ಮುಸ್ಟೂರು ರಸ್ತೆಗೆ 75 ಲಕ್ಷ ಮತ್ತು ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಬಡ್ಡಿ ರಹಿತವಾಗಿ ನೀಡುವ ಸಾಲದ ಮೊತ್ತ 3.4 ಕೋಟಿ ಸೇರಿ ಒಟ್ಟು 15 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.