
ಚಿಕ್ಕಮಗಳೂರು, ಸೆಪ್ಟೆಂಬರ್ 04: ವರ್ಷಗಳ ಕಾಲ ಅಧಿಕಾರಿಗಳೂ ತೆರಿಗೆ ವಸೂಲಿ ಮಾಡದೆ ಸುಮ್ಮನಿದ್ದರು, ಅತ್ತ ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸಲು ಮುಂದೆ ಬರಲಿಲ್ಲ. ಪರಿಣಾಮ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಾಕಿ ಉಳಿದಿರುವ ತೆರಿಗೆಯ ಮೊತ್ತ ಬರೋಬ್ಬರಿ 15 ಕೋಟಿಗೆ ತಲುಪಿದೆ. ಇದೀಗ ಎಚ್ಚೆತ್ತುಕೊಂಡಿರುವ ನಗರಸಭೆ ಆಡಳಿತ ಮಂಡಳಿ, ಬಾಕಿ ತೆರಿಗೆ ಪಾವತಿಸದಿದ್ದರೆ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡುವುದಿಲ್ಲ ಎಂದು ನಾಗರಿಕರಿಗೆ ಖಡಕ್ ಎಚ್ಚರಿಕೆ ರವಾನಿಸಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಏಕಕಾಲದಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿ ಒಟ್ಟಿಗೆ ನಡೆದ ಪರಿಣಾಮ ರಸ್ತೆ ಅಗೆತ ಮತ್ತು ಪೈಪ್‌ಲೈನ್‌ಗಳ ಹಾನಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಹಿಡಿ ಶಾಪವನ್ನೂ ಹಾಕಿದ್ದರು. ತೆರಿಗೆ ಕೇಳಲು ಹೋದರೆ ನಗರಸಭೆ ಅವ್ಯವಸ್ಥೆಯ ಬಗ್ಗೆ ಕಿಡಿಕಾರುತ್ತಿದ್ದರು. ಜನರು ಮಾತ್ರವಲ್ಲ ಜನಪ್ರತಿನಿಧಿಗಳ ಕೆಂಗಣ್ಣಿಗೂ ಚಿಕ್ಕಮಗಳೂರು ನಗರಸಭೆ ಗುರಿಯಾಗಿತ್ತು.
ಇದನ್ನೂ ಓದಿ: ಜಿಎಸ್ಟಿ ಹೆಸರಿನಲ್ಲಿ ಲಂಚ ಕೇಳಿದ ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ಡಿಸಿ ಭರತ್ ಹೆಗಡೆ ಲೋಕಾಯುಕ್ತ ಬಲೆಗೆ!
2020-21ರ ಅವಧಿಯಲ್ಲಿ ತೆರಿಗೆ ವಸೂಲಾತಿ ಮಂದಗತಿಯಲ್ಲಿ ಸಾಗಿತ್ತು. ಬಳಿಕ ಕೇಂದ್ರ ಸರ್ಕಾರದ ನಕ್ಷಾ ಯೋಜನೆಯಡಿ ಚಿಕ್ಕಮಗಳೂರಿನ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಸಮೀಕ್ಷೆಗೆ ಎರಡು ವರ್ಷ ಕಂದಾಯ ಶಾಖೆ ಸಿಬ್ಬಂದಿ ಆ ಕೆಲಸದಲ್ಲಿ ಮುಳುಗಿದರು. ಕಂದಾಯ ವಸೂತಿ ಮಾಡಲು ಮುಂದಾಗಲಿಲ್ಲ. ಇದಲ್ಲದೆ ಸಾಮಾಜಿಕ ಆರ್ಥಿಕ ಗಣತಿ ಹಾಗೂ ಎಸ್ಐಆರ್ ಸಮೀಕ್ಷೆ ಕೂಡ ಶುರುವಾಯಿತು. ತೆರಿಗೆ ಸಂಗ್ರಹ ಪ್ರಕ್ರಿಯೆ ಸಂಪೂರ್ಣ ವಿಳಂಬವಾಯ್ತು. ಈಗ ಸಮೀಕ್ಷೆಗಳು ಪೂರ್ಣಗೊಂಡಿದ್ದು, ಬಾಕಿ ವಸೂಲಾತಿಗಾಗಿ ನಗರಸಭೆ 5 ವಿಶೇಷ ತಂಡಗಳನ್ನು ರಚಿಸಿ ತೆರಿಗೆ ವಸೂಲಿಗೆ ಮುಂದಾಗಿದೆ.
ಇದೀಗ ಎಲ್ಲಾ ಸಮೀಕ್ಷೆಗಳು ಪೂರ್ಣಗೊಂಡಿದ್ದು, ನಗರಸಭೆ ಬಾಕಿ ವಸೂಲಾತಿಗೆ ಕಠಿಣ ಹೆಜ್ಜೆ ಇಟ್ಟಿದೆ. ಒಟ್ಟು 15 ಕೋಟಿ ರೂ ಬಾಕಿಯ ವಿವರ ಹೀಗಿದೆ.
ಬಾಕಿ ಹಣ ವಸೂಲಿಗಾಗಿ ನಗರಸಭೆಯು 5 ವಿಶೇಷ ತಂಡಗಳನ್ನು ರಚಿಸಿದೆ. ಕಳೆದ ಎರಡು ತಿಂಗಳಿಂದ ಸಾರ್ವಜನಿಕರಿಗೆ ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸಲು ಮನವಿ ಮಾಡಲಾಗುತ್ತಿದ್ದು, ಈವರೆಗೆ ಕೇವಲ 3 ಕೋಟಿ ರೂ ಮಾತ್ರ ಸಂಗ್ರಹವಾಗಿದೆ.
ಇನ್ನು ಮುಂದೆ ತೆರಿಗೆ ಪಾವತಿಸದವರ ಮನೆ-ಮಳಿಗೆಗಳಿಗೆ ವಿಶೇಷ ತಂಡಗಳು ಖುದ್ದು ಭೇಟಿ ನೀಡಿ ಅಂತಿಮ ನೋಟಿಸ್ ಜಾರಿ ಮಾಡಲಿವೆ. ಆದಾಗ್ಯೂ ನಿಗದಿತ ಸಮಯದಲ್ಲಿ ಹಣ ಪಾವತಿಸದಿದ್ದರೆ, ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವುದು ಮಾತ್ರವಲ್ಲದೆ ಆಸ್ತಿ ಜಪ್ತಿ ವಾರೆಂಟ್ ಹೊರಡಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 9 ತಿಂಗಳ ಗರ್ಭಿಣಿ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಒಟ್ಟಾರೆ ನಗರಸಭೆಯ ಬಾಕಿ ತೆರಿಗೆ 15 ಕೋಟಿ ರೂ ವಸೂಲಿಗೆ ಖಡಕ್ ಸಂದೇಶ ರವಾನಿಸಿದರೆ, ಆದರೆ ಇದು ಸದ್ಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ‘ಐದು ವರ್ಷಗಳಿಂದ ನಗರಸಭೆಯೇ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ವಹಿಸಿತ್ತು. ಈಗ ಏಕಾಏಕಿ ಎಲ್ಲಾ ತೆರಿಗೆ ಒಟ್ಟಿಗೆ ಕಟ್ಟಿ ಎನ್ನುತ್ತಿರುವುದು ಸರಿಯಲ್ಲ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.