
ಚಿಕ್ಕಮಗಳೂರು, ಆಗಸ್ಟ್ 04: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕುದುರೆಮುಖ, ಬೆಳ್ತಂಗಡಿ ಹಾಗೂ ಕೆರೆಕಟ್ಟೆ ವಲಯಗಳ ವ್ಯಾಪ್ತಿಯಲ್ಲಿರುವ ಟ್ರೆಕ್ಕಿಂಗ್ ಮಾರ್ಗಗಳನ್ನು ಸುರಕ್ಷತಾ ಕಾರಣಗಳಿಂದ ಮುಚ್ಚಲಾಗಿದೆ. ನಿರಂತರ ಮಳೆಯಿಂದಾಗಿ ಜಾರು ಹಾದಿಗಳು, ಉಕ್ಕಿ ಹರಿಯುತ್ತಿರುವ ಹೊಳೆಗಳು ಹಾಗೂ ಮರ ಮತ್ತು ಕೊಂಬೆಗಳು ಬೀಳುವ ಅಪಾಯ ಹೆಚ್ಚಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಕಳಸ ಸಮೀಪದ ಸೇತುವೆಯೊಂದರ ಮೇಲೆ ನೀರಿನ ಮಟ್ಟ ತಾತ್ಕಾಲಿಕವಾಗಿ ಏರಿಕೆಯಾಗಿದ್ದರೂ ನಂತರ ಇಳಿಕೆಯಾಗಿದೆ. ಹವಾಮಾನ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಮಳೆಯ ಪ್ರಮಾಣ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯನ್ನು ಅವಲೋಕಿಸಿ, ಟ್ರೆಕ್ಕಿಂಗ್ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ
ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಅನಾಹುತ ವರದಿಯಾಗಿಲ್ಲ. ಆದರೆ ಹಲವು ಕಡೆ ಮರಗಳು ಉರುಳಿರುವ ಘಟನೆಗಳು ದಾಖಲಾಗಿವೆ. ಇದೇ ವೇಳೆ, ಕೊಡಚಾದ್ರಿ ಸಫಾರಿ ಸೇವೆ ಎಂದಿನಂತೆ ಮುಂದುವರಿದಿದೆ. ಮಳೆಯ ತೀವ್ರತೆ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯ ಬಗ್ಗೆ ವಲಯ ಮಟ್ಟದ ಅಧಿಕಾರಿಗಳ ವರದಿ ಆಧರಿಸಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗಳು ಮತ್ತು ಅರಣ್ಯ ಶಿಬಿರಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಉರುಳಿದ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮಳೆಗಾಲದಲ್ಲಿ ಇಂತಹ ಮುನ್ನೆಚ್ಚರಿಕಾ ಕ್ರಮಗಳು ಸಾಮಾನ್ಯವಾಗಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಟ್ರೆಕ್ಕಿಂಗ್ ಮಾರ್ಗಗಳನ್ನು ಮತ್ತೆ ತೆರೆಯಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರವಾಸಿಗರಿಗೆ ರದ್ದುಗೊಂಡ ಟ್ರೆಕ್ಕಿಂಗ್‌ಗೆ ಹಣ ಮರುಪಾವತಿ (ರಿಫಂಡ್) ಮಾಡಲಾಗುವುದು. ಜೊತೆಗೆ, ನೋಂದಾಯಿತ ಟ್ರೆಕ್ಕರ್‌ಗಳಿಗೆ ಈ ಕುರಿತು ಮಾಹಿತಿ ಸಂದೇಶಗಳನ್ನೂ ಕಳುಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Tue, 4 August 26