ಸಿಟಿ ರವಿ ಬಂಧನ: ಉಪಸಭಾಪತಿ ಗರಂ, ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಣೇಶ್ ಅವರು ಸಿಟಿ ರವಿ ಅವರ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಿಟಿ ರವಿಯನ್ನು ಒಂದೊಂದು ಗಂಟೆಗೆ ಒಂದೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿರುವುದನ್ನು ಅವರು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ. ಇಂತಹ ವರ್ತನೆ ಮುಂದುವರಿದರೆ ಹಕ್ಕುಚ್ಯುತಿ ಪ್ರಸ್ತಾಪಿಸುವುದಾಗಿ ಎಚ್ಚರಿಸಿದ್ದಾರೆ. ಸತ್ಯ ಹೊರಬರಲು ಸ್ವತಂತ್ರ ತನಿಖೆ ಅವಶ್ಯಕ ಎಂದು ಅವರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು, ಡಿಸೆಂಬರ್ 20: ಸಿಟಿ ರವಿ (CT Ravi) ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಅವರನ್ನು ನಡೆಸಿಕೊಂಡ ರೀತಿ ಸರಿಯಲ್ಲ. ಇದೇ ರೀತಿ ಮಾಡಿದರೇ ನಾನು ಹಕ್ಕುಚ್ಯುತಿಗೆ ಹಾಕುತ್ತೇನೆ. ಇದನ್ನ ನಾನು ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂಕೆ ಪ್ರಣೇಶ್ (MK Pranesh) ಹೇಳಿದರು. ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಬ್ಬ ಉಪ ಸಭಾಪತಿಯಾಗಿ ನಾನು ಮಾತನಾಡಬಾರದು. ತನಿಖೆಯಾದರೇ ಸತ್ಯ ಹೊರಬರುತ್ತೆ ಎಂದರು.
ವಿಧಾನ ಪರಿಷತ್ನಲ್ಲಿ ಏನೇ ನಡೆದಿದ್ದರೂ ಸಭಾಪತಿಗಳು ಪರಿಶೀಲನೆ ನಡೆಸುತ್ತಾರೆ. ನಾನು ನಿರಂತರವಾಗಿ ಸಭಾಪತಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಸಭಾಪತಿಗಳು ಎಲ್ಲವನ್ನೂ ಪರಿಶೀಲನೆ ನಡೆಸಿದ್ದಾರೆ. ಸದಸನದಲ್ಲಿ ಏನೇ ನಡೆದರೂ ರೆಕಾರ್ಡ್ ಆಗುತ್ತೆ. ಇದನ್ನ ಪರಿಶೀಲನೆ ನಡೆಸಿ ಅವರು ಹೇಳಿದ್ದಾರೆ ಎಂದರು.
ಇದನ್ನೂ ಓದಿ: ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಧಮಕಿ ಹಾಕಿದ್ದರು: ಕೋರ್ಟ್ನಲ್ಲಿ ಸಿಟಿ ರವಿ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿಯವರ ಮಾತನ್ನು ನಾನು ಖಂಡಿಸುತ್ತೇನೆ. ಸಿ.ಟಿ ರವಿ ಅವರನ್ನು ಒಂದೊಂದು ಗಂಟೆಗೆ ಒಂದೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಮುಂದುವರೆದರೆ ಹಕ್ಕು ಚ್ಯುತಿ ಮಂಡಿಸುತ್ತೇನೆ. ಇದು ಸಂಪೂರ್ಣ ರಾಜಕೀಯವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಡೆದಿದ್ದು ಏನು?
ಗುರುವಾರ ಮಧ್ಯಾಹ್ನ ವಿಧಾನ ಪರಿಷತ್ ಗದ್ದಲದಿಂದ ಕೂಡಿತ್ತು. ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾಗ್ಯುದ್ಧ ನಡೆದಿತ್ತು. ವಾಗ್ವಾದದ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರಿಗೆ ಕೊಲೆಗಡುಕ ಎಂದು ನಿಂದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದರು.
ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಕೂಡಲೆ ಪೊಲೀಸರು ಸಂಜೆ 6 ಗಂಟೆ ಸುಮಾರಿಗೆ ಸಿಟಿ ರವಿಯವರನ್ನು ಬಂಧಿಸಿದರು. ಬಳಿಕ ಪೊಲೀಸರು ರಾತ್ರಿ ಇಡೀ ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದಾರೆ. ಶುಕ್ರವಾರ ಬೆಳಗಾವಿ ಜೆಎಮ್ಫಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇನ್ನು, ಸಿಟಿ ರವಿ ಅವರು ಬಳಸಿದ್ದಾರೆ ಎನ್ನಲಾಗಿರುವ ಅಶ್ಲೀಲ ಪದಗಳ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಈಗಾಗಲೇ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ