ರೇಣುಕಾಚಾರ್ಯ ತಮ್ಮನ ಪುತ್ರನ ಸಾವು ಪ್ರಕರಣ: ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ತನಿಖೆ ನಡೆಸಿದ ಖಾಕಿ, ಇಂದು ಶವ ಪರೀಕ್ಷೆ ವರದಿ ಸಾಧ್ಯತೆ
ರೇಣುಕಾಚಾರ್ಯರ ಸಹೋದರನ ಪುತ್ರನ ಸಾವಿನ ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ಪೊಲೀಸರು ಭೇಟಿ ನೀಡಿ ವಿನಯ್ ಗುರೂಜಿ ಅವರ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಚಿಕ್ಕಮಗಳೂರು: ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರನ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸದ್ಯ ಪೊಲೀಸರು ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ಪೊಲೀಸರು ಭೇಟಿ ನೀಡಿ ವಿನಯ್ ಗುರೂಜಿ ಅವರ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೂ ಮುನ್ನ ಮೃತ ಚಂದ್ರಶೇಖರ್ ಹಾಗೂ ಕಿರಣ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಚಂದ್ರಶೇಖರ್ ಭೇಟಿ ಬಗ್ಗೆ ಪೊಲೀಸರು ಗುರೂಜಿ ಬಳಿ ಹಲವು ಮಾಹಿತಿ ಸಂಗ್ರಹಿಸಿದ್ದಾರೆ. ಚಂದ್ರಶೇಖರ್ ಆಶ್ರಮದ ಭಕ್ತ, ಪ್ರತಿಬಾರಿಯಂತೆ ಆಶ್ರಮಕ್ಕೆ ಬಂದಿದ್ದ. ತಡವಾಗಿ ಆಶ್ರಮಕ್ಕೆ ಬಂದಿದ್ದರಿಂದ ಆತನ ಜೊತೆ ಹೆಚ್ಚೇನು ಮಾತನಾಡಲಿಲ್ಲ. ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೆ. ಜಾಗ್ರತೆಯಿಂದ ಮನೆಗೆ ಹೋಗುವಂತೆ ಇಬ್ಬರಿಗೂ ಹೇಳಿ ಕಳಿಸಿದ್ದೆ. ಘಟನೆ ಬಗ್ಗೆ ನನಗೂ ನೋವಿದೆ ಎಮದು ವಿನಯ್ ಗುರೂಜಿ ತನಿಖೆ ವೇಳೆ ತಿಳಿಸಿದ್ದಾರೆ. ಇನ್ನು ಆಶ್ರಮದ ಸಿಬ್ಬಂದಿ ಜೊತೆಯೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಇದೇ ಒಂಬತ್ತರಂದು ಶಾಸಕ ರೇಣುಕಾಚಾರ್ಯ ಮನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿ ಸಾಂತ್ವನ ಹೇಳಲಿದ್ದಾರೆ. ಇನ್ನು ಚಂದ್ರು ಶವ ಪರೀಕ್ಷೆ ವರದಿ ಇಂದು ಪೊಲೀಸರ ಕೈ ಸೇರುವ ನಿರೀಕ್ಷೆ ಇದೆ. ಪೊಲೀಸರ ಮೂರು ತಂಡಗಳಿಂದ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪೂರ್ವ ವಲಯ ಐಜಿಪಿ ಡಾ. ತ್ಯಾಗರಾಜನ್ ನಿರ್ದೇಶನದಂತೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ರಿಂದ ತನಿಖೆ ನಡೆಯುತ್ತಿದೆ. ಸಿಎಂ ಬರುವುದರೊಳಗೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ನಿರ್ಧಾರಿಸಲಾಗಿದೆ. ಅಕ್ಟೋಬರ್ 30 ರಿಂದ ಮನೆಯಲ್ಲಿಯೇ ಠಿಕಾಣಿ ಹಾಕಿದ್ದ ಶಾಸಕ ರೇಣುಕಾಚಾರ್ಯ ನಿನ್ನೆಯಿಂದ ಎಂದಿನಂತೆ ಹಳ್ಳಿ ಹಳ್ಳಿಗಳಿಗೆ ಸುತ್ತಾಟ ಆರಂಭಿಸಿದ್ದಾರೆ. ಶವ ಪರೀಕ್ಷೆ ವರದಿ ನೋಡಿಕೊಂಡು ಮುಂದಿನಹೆಜ್ಜೆ ಇಡಲು ರೇಣುಕಾಚಾರ್ಯ ಕುಟುಂಬ ನಿರ್ಧರಿಸಿದೆ.
ಶಾಸಕ ರೇಣುಕಾಚಾರ್ಯರಿಗೆ ಸಚಿವ ಆರಗ ಜ್ಞಾನೇಂದ್ರ ಮನವಿ
ಚಂದ್ರು ಸಾವಿನ ಕುರಿತು ಪೊಲೀಸರ ತನಿಖೆಗೆ ರೇಣುಕಾಚಾರ್ಯ ಅಪಸ್ವರ ವಿಚಾರಕ್ಕೆ ಸಂಬಂಧಿಸಿ, ರೇಣುಕಾಚಾರ್ಯ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಆ ರೀತಿ ಭಾವೋದ್ವೇಗಕ್ಕೆ ಒಳಗಾಗೋದು ಸಹಜ ಹಾಗಂತ ಏನೇನೋ ಆಗೋದು ಬೇಡ. ಪೊಲೀಸ್ ತನಿಖೆ ಸರಿಯಾಗಿಯೇ ನಡೀತಿದೆ. ನಾನೂ ಕೂಡಾ ರೇಣುಕಾಚಾರ್ಯ ಜೊತೆ ಮಾತಾಡಿದೀನಿ ಎಂದರು.
ಈ ಪ್ರಕರಣಕ್ಕೆ ಸರ್ಕಾರ ಬಹಳ ಮಹತ್ವ ಕೊಟ್ಟಿದೆ. ಎಡಿಜಿಪಿ ಸ್ಥಳಕ್ಕೆ ಹೋಗಿದ್ದರು. ಯಾವುದನ್ನೂ ಅವಗಣನೆ ಮಾಡಿಲ್ಲ. ರೇಣುಕಾಚಾರ್ಯ ಜಾಗದಲ್ಲಿ ಯಾರೇ ಇದ್ರೂ ಭಾವೋದ್ವೇಗಕ್ಕೆ ಹೋಗ್ತಾರೆ. ತನಿಖೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ. ಪೊಲೀಸರು ಯಾವುದನ್ನೂ ಮುಚ್ಚಿಡ್ತಿಲ್ಲ. ಮುಚ್ಚಿಡೋದ್ರಿಂದ ಯಾರಿಗೇನು ಪ್ರಯೋಜನ ಇದೆ ಹೇಳಿ? ಯಡಿಯೂರಪ್ಪ ನವರೂ ಭೇಟಿ ಕೊಟ್ಟಿದ್ದರು. ಸಿಎಂ ಸಹ ಅವರ ಮನೆಗೆ ಭೇಟಿ ಕೊಡಬಹುದು. ತನಿಖೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗುತ್ತೆ ಎಂದು ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ರೇಣುಕಾಚಾರ್ಯ ಹೇಳಿಕೆಗೆ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು.
Published On - 10:11 am, Mon, 7 November 22