ಪುಟಾಣಿ ಮಕ್ಕಳಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್: ಆಘಾತಕಾರಿ ಅಂಕಿಅಂಶ ಬಯಲು

ಕರ್ನಾಟಕದಲ್ಲಿ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ವರ್ಷ 1,889 ಮಕ್ಕಳು ಬಾಧಿತರಾಗಿ, 312 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರೊಂದರಲ್ಲೇ 349 ಪ್ರಕರಣಗಳು ದಾಖಲಾಗಿವೆ. ಕಿದ್ವಾಯಿ ಆಸ್ಪತ್ರೆಯಲ್ಲಿ ನಿತ್ಯ 120ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಆರೋಗ್ಯ ಜಾಗೃತಿ ಹಾಗೂ ಹೆಚ್ಚುವರಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪುಟಾಣಿ ಮಕ್ಕಳಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್: ಆಘಾತಕಾರಿ ಅಂಕಿಅಂಶ ಬಯಲು
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Feb 13, 2026 | 11:36 AM

ಬೆಂಗಳೂರು, ಫೆಬ್ರವರಿ 13: ಕರ್ನಾಟಕದಲ್ಲಿ (Karnataka) ಪುಟಾಣಿ ಮಕ್ಕಳನ್ನೂ ಸಹ ಮಾರಕ ಕ್ಯಾನ್ಸರ್‌ ಬೆಂಬಿಡದೆ ಕಾಡುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ (Cancer) ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 1,889 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗಿದ್ದು, ಇವರಲ್ಲಿ 312 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ರಾಜಧಾನಿ ಬೆಂಗಳೂರು ಒಂದರಲ್ಲೇ 349 ಮಕ್ಕಳಲ್ಲಿ ಕ್ಯಾನ್ಸರ್ ದೃಢಪಟ್ಟಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಈ ರೋಗದ ಪ್ರಮಾಣ ವೈದ್ಯರು ಹಾಗೂ ಪೋಷಕರಲ್ಲಿ ಚಿಂತೆ ಮೂಡಿಸಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಕಾರಣ ಏನು?

ತಜ್ಞರ ಪ್ರಕಾರ ಫಾಸ್ಟ್ ಫುಡ್, ಜಂಕ್ ಆಹಾರ, ನಾನ್ ವೆಜ್, ಐಸ್ ಕ್ರೀಮ್, ಚಾಕೊಲೇಟ್‌ಗಳಿಗೆ ಮಕ್ಕಳು ಹೆಚ್ಚು ಒಲವು ತೋರಿಸುತ್ತಿರುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕ್ಯಾನ್ಸರ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ ಎನ್ನಲಾಗಿದೆ.

ಪ್ರತಿ ದಿನ ಕ್ಯಾನ್ಸರ್​ನೊಂದಿಗೆ ಬರುತ್ತಿದ್ದಾರೆ 120ಕ್ಕೂ ಹೆಚ್ಚು ಮಕ್ಕಳು

ರಾಜ್ಯದ ಪ್ರಮುಖ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆಯಾದ ಕಿದ್ವಾಯಿ ಮೆಮೊರಿಯಲ್ ಇನ್​ಸ್ಟಿಟ್ಯೂಟ್ ಆಫ್ ಆನ್ಕಾಲಜಿ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ 12,612 ಮಕ್ಕಳು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ ಪ್ರತಿದಿನ 120 ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ನಿತ್ಯ 5 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಜೊತೆಗೆ ಪ್ರತಿದಿನ ಸುಮಾರು 60 ಫಾಲೋಅಪ್ ಪ್ರಕರಣಗಳನ್ನು ವೈದ್ಯರು ಪರಿಶೀಲಿಸುತ್ತಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್​

ಭಾರತದಲ್ಲಿ ಪ್ರತಿ ವರ್ಷ ಸುಮಾರು 35,240 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂಬ ಅಂದಾಜು ವ್ಯಕ್ತವಾಗಿದೆ. ಈ ಹಿನ್ನೆಲೆ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ರೆಡಿಮೇಡ್ ಹಾಗೂ ಜಂಕ್ ಫುಡ್​ಗಗಳಿಂದ ದೂರವಿರಲು ತಜ್ಞರು ಪೋಷಕರಿಗೆ ಸಲಹೆ ನೀಡಿದ್ದಾರೆ. ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕಿದ್ವಾಯಿ ವೈದ್ಯರು ಪೋಷಕರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಕಿದ್ವಾಯಿ ಆಸ್ಪತ್ರೆಯ ಮೇಲಿನ ಒತ್ತಡವೂ ಹೆಚ್ಚಾಗಿದೆ. ಪ್ರತಿದಿನ ಒಪಿಡಿ ವಿಭಾಗಕ್ಕೆ 1,800 ರಿಂದ 2,000ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಿದ್ದಾರೆ. ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿರುವುದರಿಂದ ಆಸ್ಪತ್ರೆಯ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ರಾಜ್ಯದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಒಂದೇ ಇರುವ ಹಿನ್ನೆಲೆ, ಮತ್ತೊಂದು ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿರುವುದರಿಂದ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸರ್ಕಾರಿ ಮಟ್ಟದಲ್ಲಿ ಇನ್ನಷ್ಟು ಸೌಲಭ್ಯ ಒದಗಿಸುವ ಅಗತ್ಯತೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮತ್ತೊಂದು ವಿಶೇಷ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡುವಂತೆ ಜನರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ