
ನವದೆಹಲಿ, (ಸೆಪ್ಟೆಂಬರ್ 29): ನೈಸ್ ಯೋಜನೆ ಮತ್ತೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಬಂದಿದೆ. ಯೋಜನೆಯಲ್ಲಿ 3 ಲಕ್ಷ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಅವರಿಗೆ ಸಂಸ್ಕಾರ ಸಂಸ್ಕೃತಿ ಯಾವುದೂ ಇಲ್ಲ. ಬ್ಲ್ಯಾಕ್ಮೇಲ್ ಮಾಡಿದರೆ ನಾನು ಹೆದರುತ್ತೇನೆ ಅಂದುಕೊಂಡಿದ್ದಾರೆ. ಹೆದರುವ ಜಾಯಮಾನ ನಂದಲ್ಲ. IT, ED ಎಲ್ಲಾ ಆಗೋಯ್ತು. ಇನ್ನೇನು ಮಾಡುತ್ತಾರೋ ಮಾಡ್ಲಿ. ನಾನು ಎಲ್ಲದಕ್ಕೂ ಸಿದ್ಧನಿರುವೆ ಎಂದು ನೇರ ನೇರವಾಗಿ ಸವಾಲು ಹಾಕಿದರು.
ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇಷ್ಟು ದಿನ ಯಾಕೆ ಸುಮ್ನೆ ಇದ್ದರು? ಕುಮಾರಸ್ವಾಮಿಯವರ ತಂದೆಯೇ ಸಹಿ ಹಾಕಿದ್ದಾರೆ. ಈ ನಡುವೆ ಬೇಕಾದಷ್ಟು ಬೇನಾಮಿ ಹಗರಣ ನಡೆದಿದೆ. ಪಾಪ ಅವರು ಬಹಳ ಹತಾಶರಾಗಿದ್ದಾರೆ. ಬಿಜೆಪಿಯಿಂದ ಕುಮಾರಸ್ವಾಮಿಗೆ ಬಹಳ ಒತ್ತಡವಿದೆ. ನಂದು ಆಸ್ತಿ ಇದೆ, ನನ್ನ ಮಕ್ಕಳು ಆಸ್ತಿ ತೆಗೆದುಕೊಳ್ಳಬಾರದಾ? ಕಾನೂನಿನ ವ್ಯಾಪ್ತಿಯಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ನೈಸ್ ಪ್ಲ್ಯಾನಿಂಗ್ ಅಥಾರಿಟಿಯಲ್ಲಿ ಕುಮಾರಸ್ವಾಮಿ ಆಸ್ತಿ ಇಲ್ವಾ? ಊರು ಬಿಟ್ಟು ಬಂದು ಇಲ್ಲಿ ಆಸ್ತಿ ಮಾಡಿಲ್ವಾ? ನನ್ನ ಮಕ್ಕಳಿಗೆ ಶಕ್ತಿಯಿದ್ದರೆ ಇನ್ನೂ ಆಸ್ತಿ ಖರೀದಿ ಮಾಡುತ್ತಾರೆ. ನಾವು ಎಷ್ಟಾದರೂ ಖರೀದಿಸುತ್ತೇವೆ, ಅವರೇನು ಐಟಿ ಆಫಿಸರಾ? ಎಂದು ಪ್ರಶ್ನಿಸಿದರು.
ಲಂಚ ತೆಗೆದುಕೊಂಡ್ನಾ?, ವ್ಯಾಪಾರ ವ್ಯವಹಾರ ಮಾಡುವ ಶಕ್ತಿಯಿದೆ. ನಾನು ನನ್ನ ಆಸ್ತಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದೇನೆ. ಅವರು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಸಾಕಷ್ಟು ದಾಖಲೆ ನೀಡಿದ್ದಾರೆ. ಇನ್ನಷ್ಟು ದಾಖಲೆ ಕೊಡಲಿ, ಸುಳ್ಳೇ ಅವರ ಮನೆಯ ದೇವರು. ಎಷ್ಟೇ ಆದ್ರೂ ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ಎಲ್ಲ ಇದ್ದಾರೆ. ಕುಮಾರಸ್ವಾಮಿ ಹೇಳಿದ್ದು ಎಲ್ಲವೂ ಸುಳ್ಳಿನ ಕಂತೆ. ನೈಸ್ ಜೊತೆ ವ್ಯವಹಾರ ಕಿತ್ತೋಯ್ತು ಎಂದು ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಅಣ್ಣ ತಮ್ಮನ ಆಸ್ತಿ ಎಷ್ಟಿದೆ,ಎಲ್ಲಿದೆ ಎಂದುಗೊತ್ತಿಲ್ವಾ? ವಿಧಾನಸೌಧದ ಮುಂದೆ ಅಲ್ಲ, ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಪ್ರತಿ ಸವಾಲು ಹಾಕಿದ ಡಿಕೆಶಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಅದೇನು ಮಾಡುತ್ತಾರೋ ಮಾಡಲಿ. ಯಾವುದೇ ಗೊಡ್ಡು ಬೆದರಿಕೆಗೆ ಡಿ.ಕೆ.ಶಿವಕುಮಾರ್ ಹೆದರುವುದಿಲ್ಲ. ಇಂತಹ ಬ್ಲ್ಯಾಕ್ಮೇಲ್ಗೆ ನಾವು ಬಗ್ಗಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದರು.
ನಮ್ಮ ಸರ್ಕಾರದ ಜನಪ್ರಿಯತೆ ತಡೆಯಲು ಸಾಧ್ಯವಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ, ಪಾರ್ಟ್-2ನಲ್ಲಿ ಏನಿದೆ ಎಲ್ಲ ಗೊತ್ತಿದೆ. ಇವರು ಸ್ವಾಮೀಜಿ ಫೋನ್ ಟ್ಯಾಪ್ ಮಾಡಿಸಿದವರು. ಇವರು ಯಾರನ್ನು ಬಿಟ್ಟಿದ್ದಾರೆ ಹೇಳಿ, ಇನ್ನು ನನ್ನನ್ನ ಬಿಡುತ್ತಾರಾ? ತಂದೆಯನ್ನೇ ಬಿಡಲ್ಲ, ನನ್ನಿಂದ ನಮ್ಮಪ್ಪ ಅಂತಾರೆ ಎಂದು ಕಿಡಿಕಾರಿದರು.