
ಬೆಂಗಳೂರು, (ಆಗಸ್ಟ್ 22): ಈ ಬಾರಿ ಮೈಸೂರು ದಸರಾವನ್ನು (Mysuru Dasara 2025) ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಆದ್ರೆ, ಮೈಸೂರು ದಸರಾವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು (Sonia Gandhi) ಉದ್ಘಾಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಎಂ ಕಚೇರಿ (Karnataka CM Office), ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದು ಸತ್ಯಕ್ಕೆ ದೂರವಾದದ್ದು. ಆ ರೀತಿಯ ಉದ್ದೇಶವಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳೆದಿದೆ.
ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಂದ ಉದ್ಘಾಟಿಸಲು ಸಿಎಂ ಸಿದ್ದರಾಮಯ್ಯ ಇಚ್ಛಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಆದ್ರೆ, ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಖುದ್ದು ಸಿಎಂ ದೆಹಲಿಗೆ ತೆರಳಿ ಸೋನಿಯಾ ಅವರನ್ನು ಭೇಟಿ ಮಾಡಿ ಆಹ್ವಾನ ನೀಡುವ ಸಾಧ್ಯತೆಗಳಿವೆ ಎನ್ನುವ ಸುದ್ದಿಯಾಗಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದ್ದು, ರಾಜ್ಯ ಸರ್ಕಾರದ ನಡೆಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಸೋನಿಯಾ ಗಾಂಧಿ ಉದ್ಘಾಟಿಸಲು ಅವರಿಗೇನು ಅರ್ಹತೆ ಇದೆ? ಮೈಸೂರು ದಸರಾಕ್ಕೂ ಅವರಿಗೂ ಏನು ಸಂಬಂಧ? ಅಂತೆಲ್ಲಾ ಪ್ರಶ್ನೆಗಳೊಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿಎಂ ಕಚೇರಿಯೇ ಸ್ಪಷ್ಟನೆ ನೀಡಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದಸರಾ ಹಬ್ಬವನ್ನು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಗುತ್ತದೆ. ಹಲವು ವರ್ಷಗಳಿಂದ ಈ ಪದ್ದತಿ ರೂಡಿಯಲ್ಲಿ ಇದೆ. ಈ ಹಿಂದೆ ಕಲೆ ,ಸಾಹಿತ್ಯ ಮತ್ತು ಕಲಾವಿದರು ಹಾಗೂ ರಾಷ್ಟಪತಿಗಳು ಸೇರಿಂದತೆ ಅನೇಕ ಗಣ್ಯರು ಉದ್ಘಾಟನೆ ಮಾಡಿದ್ದಾರೆ. ಆದರೆ ಈ ಉದ್ಘಾಟನೆಗೆ ರಾಜಕೀಯ ಕ್ಷೇತ್ರದವರನ್ನು ಹೊರಗೆ ಇಡಲಾಗಿತ್ತು. ಆದರೆ 2021 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮ್ಮೊಯಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ ಕೃಷ್ಣ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನವನ್ನು ನೀಡಿದ್ದರು. ಇದರೊಂದಿಗೆ ರಾಜಕೀಯ ಕ್ಷೇತ್ರದಿಂದ ಗಣ್ಯರು ಒಬ್ಬರು ಪ್ರಥಮ ಬಾರಿಗೆ ಮೈಸೂರು ದಸರಾವನ್ನು ಉದ್ಘಾಟನೆ ಮಾಡಿರುವುದು ವಿಶೇಷವಾಗಿದೆ.
ಪ್ರತಿ ವರ್ಷವೂ ನಾಡ ಹಬ್ಬ ದಸರಾ ಸಮಯದಲ್ಲಿ ಕುತೂಹಲಕಾರಿಯಾಗಿ ಕಾಡುವ ವಿಚಾರ ಎಂದರೆ ಅದು ನಾಡ ಹಬ್ಬವನ್ನು ಉದ್ಘಾಟನೆ ಮಾಡುವವರು ಯಾರು ಎಂದು. ಹೌದು..ದಸರಾ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ಮಾಡಿ ಒಂದು ಸಮಿತಿಯನ್ನು ಮಾಡಿ ಒಂದಷ್ಟು ಅನುದಾವನ್ನು ಸಹ ಕೊಡುತ್ತಾರೆ. ಹಾಗೇ ಹೇಗೆಲ್ಲಾ ಕಾರ್ಯಕ್ರಮ ರೂಪಿಸಬೇಕೆಂದು ಸಮಿತಿ ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೆ. ಆದ್ರೆ, ದಸರಾ ಉದ್ಘಾಟಕರ ಆಯ್ಕೆ ಮಾಡುವುದು ರಾಜ್ಯದ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ. ಮುಖ್ಯಮಂತ್ರಿಗಳು ಅವರ ವಿವೇಚನೆಗೆ ಯಾರು ಸರಿ ಎನಿಸುತ್ತಾರೆ ಅವರನ್ನ ಮುಖ್ಯಮಂತ್ರಿಗಳು ಆಯ್ಕೆ ಮಾಡುತ್ತಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಶುರುವಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ದಸರಾ ನಡೆಯಲಿದ್ದು, ಈಗಾಗಲೇ ಮೈಸೂರಿನಲ್ಲಿ ದಸರಾ ಸಿದ್ಧತೆಗಳು ಬಿರುಸಿನಿಂದ ಸಾಗಿದೆ. ಆದರೆ ಈ ಬಾರಿಯ ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡುವ ಗಣ್ಯರು ಯಾರು ಎಂಬ ಕುತೂಹಲ ಕೆರಳಿಸಿದೆ. ಪ್ರತಿವರ್ಷ ಓರ್ವ ವಿಶೇಷ ವ್ಯಕ್ತಿಯಿಂದ ಮೈಸೂರು ದಸರಾವನ್ನು ಉದ್ಘಾಟಿ ಮಾಡಿಸಲಾಗುತ್ತೆ. ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಹೀಗೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತೆ. ಆದ್ರೆ, ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡುತ್ತಾರೆ ಎನ್ನುವುದು ನಿಗೂಢವಾಗಿದೆ.