ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ: ಹೈಕಮಾಂಡ್ ಜತೆ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷಗಾದಿ ಬಗ್ಗೆ ಚರ್ಚೆ ಸಾಧ್ಯತೆ

ಒಂದೆಡೆ ಆಪರೇಷನ್ ಸುಳಿವು, ಮತ್ತೊಂದು ಕಡೆ ಸಚಿವ ಸಂಪುಟಕ್ಕೆ ಸರ್ಜರಿ ಸಾಧ್ಯತೆಗಳ ಮಧ್ಯೆ ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಾಳಯ ಸಕ್ರಿಯವಾಗಿದೆ. ದಳ ಮನೆಗೆ ಕೈ ಹಾಕುತ್ತಲೇ ಸಂಪುಟ ಪುನರ್ ರಚನೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಅಲ್ಲಿಗೆ ತೆರಳುತ್ತಿದ್ದಾರೆ.

ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ: ಹೈಕಮಾಂಡ್ ಜತೆ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷಗಾದಿ ಬಗ್ಗೆ ಚರ್ಚೆ ಸಾಧ್ಯತೆ
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್
Edited By:

Updated on: Nov 28, 2024 | 7:42 AM

ಬೆಂಗಳೂರು, ನವೆಂಬರ್ 28: ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ರಣೋತ್ಸಾಹದಲ್ಲಿದೆ. ಇದರ ನಡುವೆ ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಸುದ್ದಿ ಸದ್ದು ಮಾಡುತ್ತಿದೆ. ನಾಯಕರ ನಿಗೂಢ ನಡೆ ಇಂತಹದೊಂದು ಚರ್ಚೆಗೆ ಕಾರಣ ಆಗಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಸಂಪುಟ ಸರ್ಜರಿಯ ಕುತೂಹಲ ಮತ್ತಷ್ಟು ಗರಿಗೆದರಿದೆ.

ಹೈಕಮಾಂಡ್ ಜತೆ ಆಪರೇಷನ್, ಕೆಪಿಸಿಸಿ ಅಧ್ಯಕ್ಷಗಾದಿ ಬಗ್ಗೆ ಚರ್ಚೆ?

ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಸಂಪುಟ ಸರ್ಜರಿ ಸುಳಿವು ಕೊಟ್ಟಿದ್ದರು. ದೆಹಲಿಯಲ್ಲೇ ಅವ್ರು ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರ ಜತೆಗೆ ಆಪರೇಷನ್ ಹಸ್ತ, ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ?

ಸಂಪುಟ ಪುನಾರಚನೆಯ ಚರ್ಚೆ ಇಂದು ನೆನ್ನೆಯದಲ್ಲ. ಈ ಹಿಂದೆಯೇ ಹೈಕಮಾಂಡ್ ರಾಜ್ಯ ಕೈ ನಾಯಕರ ಜತೆ ಚರ್ಚೆ ಮಾಡಿದೆಯಂತೆ. ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಶೀಘ್ರದಲ್ಲೇ ಅಧಿಕೃತ ಸೂಚನೆ ನೀಡಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದೆ. 1 ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಸೂಚನೆ ಕೊಟ್ಟಿದೆ. ಆದರೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಸಿಎಂ ಸಮಯ ಕೋರಿದ್ದರು. ಹೀಗಾಗಿ ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಬಹುತೇಕ ಪಕ್ಕ ಎನ್ನಲಾಗಿದೆ. ಕೆಲ ಶಾಸಕರು ಈಗಾಗಲೇ ದೆಹಲಿ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದು, ದೆಹಲಿ ನಾಯಕರನ್ನ ಭೇಟಿಯಾಗಿ ಮಾತುಕತೆ ಮಾಡುತ್ತಿದ್ದಾರೆ.

ಸಚಿವ ಸಂಪುಟ ಪುನರ್ ರಚನೆ ವಿಚಾರವನ್ನು ಖುದ್ದು ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ದಿನೇಶ್ ಗುಂಡೂರಾವ್ 2 ವರ್ಷಕ್ಕೊಮ್ಮೆ ಪುನರ್ ರಚನೆ ಆದರೆ ಒಳ್ಳೆಯದದು ಎಂದಿದ್ದಾರೆ.

ಅಧ್ಯಕ್ಷರಾಗುವುದು ಮುಳ್ಳಿನ ಮೇಲೆ ನಿಂತಂತೆ: ಸತೀಶ್ ಜಾರಕಿಹೊಳಿ

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಚರ್ಚೆ ಕೂಡ ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಕೈ ಕುರ್ಚಿಗಾಗಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಆಗುವುದು ಮುಳ್ಳಿನ ಮೇಲೆ ನಿಂತಂತೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಆಗುತ್ತಾ? ಕಾರಣಗಳೇನು? ಡಿಕೆಶಿ ಕೊಟ್ಟ ಸುಳಿವು

ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಬುಧವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಇಂದು ಜಾರ್ಖಂಡ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us