ಸದ್ಯಕ್ಕಿಲ್ಲ ಕರ್ನಾಟಕ ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಕಾಂಗ್ರೆಸ್ ಹೈಕಮಾಂಡ್ ತಡೆ
ಕರ್ನಾಟಕದಲ್ಲಿ ಸಂಪುಟ ಪುನರ್ ರಚನೆ ಆಗುತ್ತದೆ ಎಂದು ಕಾಯುತ್ತಿದ್ದವರಿಗೆ ಹೈಕಮಾಂಡ್ ತಣ್ಣೀರೆರಚಿದೆ. ಸಂಪುಟ ಪುನಾರಚನೆ ಬದಲು ಖಾಲಿ ಇರುವ ಸ್ಥಾನಗಳ ಭರ್ತಿಗೆ ಗ್ರೀನ್ಸಿಗ್ನಲ್ ಸಿಕ್ಕಿದೆ. ಅತ್ತ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ವರಿಷ್ಠರು ನಿರುತ್ಸಾಹ ತೋರಿಸಿದ್ದಾರೆ. ಅಷ್ಟಕ್ಕೂ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಏನೇನಾಯ್ತು ಎಂಬ ವಿವರ ಇಲ್ಲಿದೆ.
ಬೆಂಗಳೂರು, ನವೆಂಬರ್ 29: ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಕಾಂಗ್ರೆಸ್ ಕ್ಲೀನ್ಸ್ವೀಪ್ ಮಾಡಿತ್ತು. ಭರ್ಜರಿ ಗೆಲುವು ದೊರೆಯುತ್ತಿದ್ದಂತೆಯೇ ರಾಜ್ಯ ಸಂಪುಟ ಪುನರ್ ರಚನೆಯ ಸುದ್ದಿ ಮುನ್ನೆಲೆಗೆ ಬಂದಿತ್ತು. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಬವದಂತಿಗಳೂ ಹರಿದಾಡಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ರಾಜ್ಯ ನಾಯಕರು ಮಾತನಾಡಿದ್ದರು. ಅತ್ತ ಸಚಿವಕಾಂಕ್ಷಿಗಳು ಲಾಬಿ ಶುರು ಮಾಡಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದರು. ಇನ್ನೇನು ಸಂಪುಟ ಪುನರ್ ರಚನೆ ಆಗುತ್ತದೆ ಎಂದು ಆಸೆ ಕಂಗಳಿಂದ ಕಾಯುತ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ತಣ್ಣೀರು ಎರಚಿದೆ.
ದೆಹಲಿಯಲ್ಲಿ ಗುರುವಾರ ಹೈಕಮಾಂಡ್ ಮಟ್ಟದ ನಾಯಕರು ಸಭೆ ನಡೆಸಿದರು. ಸಂಪುಟ ಪುನರ್ ರಚನೆಗೆ ಸದ್ಯದ ಪರಿಸ್ಥಿತಿ ಪಕ್ವವಾಗಿಲ್ಲ ಎಂಬ ಸಂದೇಶವನ್ನು ಈ ಸಭೆ ರವಾನಿಸಿದೆ.
ಸಂಪುಟ ಪುನರ್ ರಚನೆಗೆ ‘ಕೈ’ ಕಮಾಂಡ್ ಬ್ರೇಕ್
ಕರ್ನಾಟಕದಲ್ಲಿ ಸದ್ಯಕ್ಕೆ ಸಂಪುಟ ಪುನರ್ ರಚನೆ ಬೇಡ ಎಂದು ಹೈಕಮಾಂಡ್ ಹೇಳಿದೆ. ಉಳಿದಂತೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಹಸಿರು ನಿಶಾನೆ ತೋರಿದೆ. ಬಿ. ನಾಗೇಂದ್ರರಿಂದ ತೆರವಾದ ಸ್ಥಾನಕ್ಕೆ ಭರ್ತಿಗೆ ಸೂಚಿಸಲಾಗಿದೆ. ಕೆಲವು ಸಚಿವರು ತಮ್ಮ ಖಾತೆ ನಿಭಾಯಿಸಲು ವಿಫಲರಾಗಿದ್ದು, ಅಂತಹ ಸಚಿವರ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಿರುತ್ಸಾಹ ತೋರಿದೆ. ಈಗ ಸ್ಥಾನ ಬದಲಾಯಿಸಿದರೆ ತಪ್ಪು ಸಂದೇಶ ರವಾನೆ ಸಾಧ್ಯತೆ ಇದೆ ಎಂಬುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಏತನ್ಮಧ್ಯೆ, ಸಚಿವ ಸಂಪುಟ ಪುನಾರಚನೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸಂಪುಟ ಪುನಾರಚನೆ ಮಾಡುವ ಅಧಿಕಾರ ನಮಗೆ ಇಲ್ಲ. ಪುನಾರಚನೆ ಮಾಡುತ್ತಾರೆ ಎಂಬ ಮಾಹಿತಿ ಇದೆ. ಏನಾಗುತ್ತದೆ ಎಂದು ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ದೆಹಲಿಯಲ್ಲಿಂದು ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷ ಸಂಘಟನೆ, ಮುಂಬರುವ ರಾಜ್ಯಗಳ ಚುನಾವಣೆ ಸೇರಿದಂತೆ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಯಾವ ವಿಷಯಗಳನ್ನು ಪ್ರಸ್ತಾಪಿಸಿ ಹೋರಾಟ ಮಾಡಬೇಕು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಪದೇ ಪದೇ ಪ್ರಸ್ತಾಪಿಸುತ್ತಿರುವ ಜಾತಿಗಣತಿಯ ವಿಚಾರವೂ ಕೂಡ ಕಾರ್ಯಕಾರಿಣಿಯಲ್ಲಿ ಚರ್ಚೆಗೆ ಬರಲಿದೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಂಕ್ರಾಂತಿಗೆ ಸಂ’ಕ್ರಾಂತಿ’ಆಗುತ್ತಾ?
ಏನೇ ಇರಲಿ, ಕರ್ನಾಟಕದಲ್ಲಿ ಸಚಿವರಾಗಬೇಕೆಂದು ಆಸೆಯಿಂದ ಕಾಯುತ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ನಿರಾಸೆ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ