ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ವಿಚಾರ: ಸತ್ಯಶೋಧನಾ ಸಮಿತಿಯಿಂದ ಡಿಕೆಶಿಗೆ ವರದಿ ಸಲ್ಲಿಕೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುಂಡ ನಂತರ, ಸೋಲಿನ ಕಾರಣಗಳನ್ನು ಪತ್ತೆಹಚ್ಚಲು ರಚಿಸಲಾದ ಸತ್ಯಶೋಧನಾ ಸಮಿತಿಯ ವರದಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವೀಕರಿಸಿದ್ದಾರೆ. ಉಗ್ರಪ್ಪ ನೇತೃತ್ವದ ಸಮಿತಿ ಐದು ಕ್ಷೇತ್ರಗಳ ಅಧ್ಯಯನ ನಡೆಸಿದೆ. ಇನ್ನೂ ಎರಡು ಸಮಿತಿಗಳ ವರದಿಗಳು ಬಾಕಿ ಇವೆ ಎಂದು ಡಿಕೆಶಿ ತಿಳಿಸಿದ್ದಾರೆ. ಎಲ್ಲಾ ವರದಿಗಳು ಬಂದ ನಂತರ ಮಾತ್ರ ಸಮಗ್ರ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 07: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗಿತ್ತು. ಹೀಗಾಗಿ ಸೋಲಿನ ಬಗ್ಗೆ ಕಾರಣ ತಿಳಿಯಲು ಕೆಪಿಸಿಸಿ ಸತ್ಯಶೋಧನಾ ಸಮಿತಿ ರಚಿಸಿದ್ದು, ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸರ್ಕಾರಿ ನಿವಾಸದಲ್ಲಿ ಉಗ್ರಪ್ಪ ನೇತೃತ್ವದ ಸತ್ಯಶೋಧನಾ ಕಮಿಟಿಯಿಂದ ವರದಿ ಸಲ್ಲಿಸಲಾಗಿದೆ.
ವರದಿ ಸ್ವೀಕಾರ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಉಗ್ರಪ್ಪ ನೇತೃತ್ವದ ಸತ್ಯಶೋಧನಾ ಕಮಿಟಿ ವರದಿ ಕೊಟ್ಟಿದೆ. 5 ಎಂಪಿ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ವರದಿ ಸಲ್ಲಿಸಲಾಗಿದೆ. ಸುದರ್ಶನ್, ಉಗ್ರಪ್ಪನವರ ಕಮಿಟಿ ಮಾತ್ರ ವರದಿ ಸಲ್ಲಿಸಿದೆ. ಇನ್ನೂ ಎರಡು ಸಮಿತಿಯ ವರದಿ ಬರಬೇಕಿದೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಟ್ವೀಟ್
ಮಾಜಿ ಸಂಸದರಾದ ಶ್ರೀ ವಿ.ಎಸ್ ಉಗ್ರಪ್ಪ ಅವರು ಇಂದು ನನ್ನನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣಗಳೇನು? ಎಂಬುದರ ಬಗ್ಗೆ ಐದು ಜಿಲ್ಲೆಗಳ ಅಧ್ಯಯನ ವರದಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯರಾದ ಶ್ರೀ ಜಿ.ಸಿ. ಚಂದ್ರಶೇಖರ್, ಮಾಜಿ… pic.twitter.com/NdzftHWEO9
— DK Shivakumar (@DKShivakumar) December 7, 2024
2 ವರದಿ ಬಂದ ಮೇಲೆ ಎಲ್ಲವನ್ನ ಸೇರಿಸಿ ಮಾತಾಡುತ್ತೇನೆ. ಇದೊಂದೆ ಕಮಿಟಿಯ ವರದಿ ಬಗ್ಗೆ ನಾನು ಮಾತನಾಡಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ಕೊಟ್ಟಿದ್ದಾರೆ. ಎಲ್ಲಾ ಕಮಿಟಿ ವರದಿ ಬಂದ ಮೇಲೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೋಮಶೇಖರ್, ಹೆಬ್ಬಾರ್ ಬಗ್ಗೆ ಹೈಕಮಾಂಡ್ಗೆ ದೂರು: ಬಿಜೆಪಿ ಕೋರ್ ಕಮಿಟಿ ತೀರ್ಮಾನ
ಡಿಸೆಂಬರ್ 10ರಂದು ಸಿಎಂ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದಿದ್ದಾರೆ. 26 ಮತ್ತು 27ರ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಅವತ್ತು ಚರ್ಚೆ ಮಾಡುತ್ತಾರೆ. 8ನೇ ತಾರೀಖು ನಾನೇ ಹೋಗಿ ಸ್ಥಳ ಪರೀಶೀಲನೆ ಮಾಡುತ್ತೇನೆ. ಕಲ್ಯಾಣ ಕರ್ನಾಟಕದ ಪದಾಧಿಕಾರಿಗಳ ಸಭೆಯನ್ನ ದಿನಾಂಕ 14 ರಂದು ಬೆಳಗಾವಿಯಲ್ಲಿ ಕರೆದಿದ್ದೇನೆ. 14 ರಂದು ಉಳಿದ ಪದಾಧಿಕಾರಿಗಳ ಸಭೆಯನ್ನ ಭಾರತ್ ಜೋಡೋ ಭವನದಲ್ಲಿ ಕರೆದಿದ್ದೇನೆ. ಎಐಸಿಸಿ ಜನರಲ್ ಸೆಕ್ರೆಟರಿಗಳೆಲ್ಲಾ ಬಂದು ಭೇಟಿ ಮಾಡುತ್ತಾರೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:39 pm, Sat, 7 December 24