ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತ ನಿಗಮ ಅಧ್ಯಕ್ಷನಿಗೆ ಬೆದರಿಕೆ ಕರೆ
ಬೆಂಗಳೂರಿನ ಕಾಂಗ್ರೆಸ್ ಮುಖಂಡ ಬಿ.ಕೆ ಅಲ್ತಾಫ್ ಖಾನ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ. ಪಿಎಫ್ಐ ಹೆಸರು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ. ದುಬೈನಿಂದ ಬಂದ ಕರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು, ಫೆಬ್ರವರಿ 15: ಕಾಂಗ್ರೆಸ್ (Congress) ಮುಖಂಡ, ಅಲ್ಪಸಂಖ್ಯಾತ ನಿಗಮ ಅಧ್ಯಕ್ಷ ಬಿ.ಕೆ ಅಲ್ತಾಫ್ ಖಾನ್ರಿಗೆ (BK Altaf Khan) ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಬಿ.ಕೆ.ಅಲ್ತಾಫ್ ಖಾನ್ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
“ಪಿಎಫ್ಐ ಸಂಘಟನೆಯವರೊಂದಿಗೆ ಆಟವಾಡಬೇಡ, ಆರ್ಎಸ್ಎಸ್ ಏಜೆಂಟ್ ಆಗಿ ಕೆಲಸ ಮಾಡಬೇಡ. ನಾಳೆ ನಿನ್ನ ಮಗಳ ಮದುವೆ ಇದೆ. ನಮ್ಮಿಂದ ನೀನು ಹಲವು ಬಾರಿ ಬಚಾವ್ ಆಗಿದ್ದೀಯಾ. ಇನ್ಮುಂದೆ ನೀನು ಬಚಾವ್ ಆಗಲು ಆಗಲ್ಲ. ನಿನ್ನ ತಮ್ಮಂದಿರನ್ನು ನೀನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿನ್ನ ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ. ನೀನು ನ್ಯಾಯಾಲಯದಲ್ಲಿ ಕೇಸ್ಗೆ ಸಾಕ್ಷಿ ಹೇಳಲು ಹೋಗಬಾರದು. ಹೋದರೇ ನೀನಿ ಉಳಿಯುವುದಿಲ್ಲ. ಆರ್ಎಸ್ಎಸ್ಗೆ ಚಮಚಗಿರಿ ಮಾಡಿದರೆ ಪಿಎಫ್ಐ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಅಪರಿಚಿತ ವ್ಯಕ್ತಿ ಫೆಬ್ರವರಿ5ರಂದು ರಾತ್ರಿ 8 ಗಂಟೆ ಸುಮಾರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.
ಸದ್ಯ ಪ್ರಕರಣ ಜೆಜೆ ನಗರ ಠಾಣೆಯಿಂದ ಸಿಸಿಬಿಗೆ ವರ್ಗಾವಣೆವಾಗಿದೆ. ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ದುಬೈ ನಿಂದ ಅಲ್ತಾಫ್ ಕರೆ ಮಾಡಿರುವುದು ಬಯಲಾಗಿದೆ. ದುಬೈ ಮೂಲದ ವ್ಯಕ್ತಿ ಜೊತೆ ಸಂಪರ್ಕ ದಲ್ಲಿದ್ದವನನ್ನು ಸಿಸಿಬಿ ವಶಕ್ಕೆ ಪಡೆದು, ವಿಚಾರಣೆ ನಡೆಸಿದೆ.