
ಬೆಂಗಳೂರು, (ಆಗಸ್ಟ್ 26): ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಎರಡು ದಿನಗಳಿಂದ ಶಾಸಕರ ಮಹತ್ವದ ಸಭೆ ನಡೆಸಿದ್ದು,ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಹಾಗೂ ಸಂಘಟನೆ ಸಂಬಂಧ ಚರ್ಚಿಸಿದ್ದಾರೆ. ನಿನ್ನೆ (ಆಗಸ್ಟ್ 25) ಜಿಲ್ಲಾವರು ಶಾಸಕರ ಸಭೆ ನಡೆಸಿದ್ದ ಡಿಕೆ ಶಿವಕುಮಾರ್, ಇಂದು (ಆಗಸ್ಟ್ 26) ವಿಧಾನಪರಿಷತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ್ದು, ಈ ವೇಳೆ ಸಚಿವರ ಕಾರ್ಯವೈಖರಿ, ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಪರಿಷತ್ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಪ್ರಮುಖವಾಗಿ ಅಧಿಕಾರಿಗಳ ವರ್ಗಾವಣೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೌನ್ಸಿಲಿಂಗ್ ಮೂಲಕ ಅಧಿಕಾರಿಗಳ ವರ್ಗಾವಣೆ ಮಾಡುವ ಕ್ರಮಕ್ಕೆ ಕಾಂಗ್ರೆಸ್ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕರ ಅಭಿಪ್ರಾಯಕ್ಕೆ ಆದ್ಯತೆ ನೀಡುವ ಸುಳಿವು ನೀಡಿರುವ ಸಿಎಂ, ಅಧಿಸೂಚನೆ ಹಿಂಪಡೆಯುವ ಬಗ್ಗೆ ಸಚಿವರಿಗೆ ಸೂಚನೆ ನೀಡುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಜಿಲ್ಲಾವಾರು ಕಾಂಗ್ರೆಸ್ ಶಾಸಕರ ಜೊತೆಗಿನ ಸಭೆಯಲ್ಲಿ ಸರ್ಕಾರದ ವರ್ಗಾವಣೆ ನೀತಿಯೇ ಚರ್ಚೆಯ ಕೇಂದ್ರಬಿಂದುವಾಗಿದೆ. ಕೌನ್ಸಿಲಿಂಗ್ ಮೂಲಕ ಅಧಿಕಾರಿಗಳ ವರ್ಗಾವಣೆ ಮಾಡುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೆಲ ಇಲಾಖೆಗಳಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿದರೆ ಶಾಸಕರ ಅಭಿಪ್ರಾಯಕ್ಕೆ ಅವಕಾಶವೇ ಸಿಗುವುದಿಲ್ಲ ಅನ್ನೋ ಬೇಸರ ವ್ಯಕ್ತವಾಗಿದೆ. ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಶಾಸಕರ ಆಕ್ಷೇಪಕ್ಕೆ ಸ್ಪಂದಿಸಿರುವ ಸಿಎಂ ಡಿ.ಕೆ. ಶಿವಕುಮಾರ್, ಶಾಸಕರ ಅಭಿಪ್ರಾಯ ಹಾಗೂ ಪತ್ರಗಳಿಗೆ ಆದ್ಯತೆ ನೀಡುವ ಭರವಸೆ ನೀಡಿದ್ದಾರೆ. ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಗೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಇಷ್ಟು ದಿನ ಸರ್ಕಾರದ ಮಟ್ಟದಲ್ಲಿ ಇದ್ದ ಚರ್ಚೆ, ಈಗ ಕಾಂಗ್ರೆಸ್ ಪಕ್ಷದ ಶಾಸಕರ ಸಭೆಯಲ್ಲೇ ಬಹಿರಂಗವಾಗಿ ಕೇಳಿಬಂದಿದೆ.
ಇನ್ನೂ ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಸಚಿವರ ಕಾರ್ಯವೈಖರಿ ವಿರುದ್ಧವೂ ಪಕ್ಷದ ಎಂಎಲ್‌ಸಿಗಳ ಅಸಮಾಧಾನ ಹೊರಬಿದ್ದಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ವಿಪಕ್ಷಗಳು ನಿರಂತರವಾಗಿ ಟೀಕೆ ಮಾಡುತ್ತಿವೆ. ಆದ್ರೆ, ಈ ಟೀಕೆಗಳಿಗೆ ತಿರುಗೇಟು ನೀಡಬೇಕಾದ ಸಚಿವರು, ಸಮರ್ಥನೆಗೂ ಮುಂದಾಗುತ್ತಿಲ್ಲ ಅನ್ನೋದು ಎಂಎಲ್‌ಸಿಗಳ ಅಸಮಾಧಾನ. ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಬದಲು ಹಲವು ಸಚಿವರು ಮೌನವಾಗುತ್ತಿದ್ದಾರೆ. ಇದರಿಂದ ಸರ್ಕಾರದ ವಿರುದ್ಧದ ಟೀಕೆಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದೆ ಅನ್ನೋ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರ ಸಭೆ ಕರೆದು ಸ್ವಲ್ಪ ಚಾಟಿ ಬೀಸುವಂತೆ ಎಂಎಲ್‌ಸಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಮನಕ್ಕೂ ಅಸಮಾಧಾನ ತರಲಾಗಿದೆ ಎನ್ನಲಾಗಿದೆ. ವಿಪಕ್ಷಗಳಿಗೆ ತಿರುಗೇಟು ನೀಡಲು ಆಗದ ಸಚಿವರಿಗಿಂತ ನಮ್ಮನ್ನೇ ಆಯ್ಕೆ ಮಾಡಿ, ನಾವೇ ಸರ್ಕಾರದ ಪರವಾಗಿ ಮಾತನಾಡುತ್ತೇವೆ. ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡುತ್ತೇವೆ ಎಂಬ ಮಾತನ್ನೂ ಎಂಎಲ್‌ಸಿಗಳು ಹೇಳಿದ್ದಾರೆ.
ಇನ್ನೂ ಇದೆಲ್ಲ ಒಂದು ಕಡೆಯಾದ್ರೆ ಅತ್ತ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೇಸಗೊಂಡಿರೋ ಶಾಸಕ ಎಂ.ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅಸಮಾಧಾನ ಮುಂದುವರಿದಿದೆ. ಇಂದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಭಾಗದ ಶಾಸಕರ ಸಭೆಗೆ ಗೈರಾಗುವ ಮೂಲಕ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಸಭೆಗೆ ಬರುವುದಿಲ್ಲ ಅಂತ ಹೇಳಿಯೇ ಅಂತರ ಕಾಯ್ದುಕೊಂಡಿದ್ದಾರೆಂಬ ಚರ್ಚೆಗಳು ಶುರುವಾಗಿದೆ.
ಒಂದು ಕಡೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕರ ಒತ್ತಡ. ಮತ್ತೊಂದು ಕಡೆ ವಿಪಕ್ಷಗಳ ವಿರುದ್ಧದ ಹೋರಾಟದಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಎಂಎಲ್‌ಸಿಗಳ ಅಸಮಾಧಾನ. ಜಿಲ್ಲಾವಾರು ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳ ಜೊತೆಗೆ ಪಕ್ಷದೊಳಗಿನ ಅಸಮಾಧಾನವೂ ಬಹಿರಂಗವಾಗಿದೆ. ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಕೌನ್ಸಿಲಿಂಗ್ ವರ್ಗಾವಣೆ ಪ್ರಕ್ರಿಯೆಗೆ ಬ್ರೇಕ್ ಬೀಳುತ್ತಾ? ಇತ್ತ ವಿಪಕ್ಷಗಳಿಗೆ ತಿರುಗೇಟು ನೀಡದ ಸಚಿವರಿಗೆ ಪಕ್ಷದ ನಾಯಕತ್ವದಿಂದಲೇ ಚಾಟಿ ಬೀಳುತ್ತಾ? ಈ ಎರಡು ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವವೇ ಉತ್ತರ ನೀಡಬೇಕಿದೆ.
Published On - 8:24 pm, Wed, 26 August 26