
ಬೆಂಗಳೂರು, ನವೆಂಬರ್ 23: ಬಸವ ಮಂಟಪ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣ ಹಾಗೂ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಬರೆದಿರುವುದಕ್ಕೆ ಲೇಖಕ ರವಿ ಹಂಜಗಿಮಠ್ (ರವಿ ಹಂಜ್) ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೂರು ದಾಖಲಾಗಿವೆ. ಇದರ ಮಧ್ಯೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಸವ ಸಮಿತಿಯ ಅಕ್ರಮಗಳ ವಿರುದ್ಧ ಲೇಖನ ಬರೆದಿದ್ದೆ.ಆ ವೈಯಕ್ತಿಕ ದ್ವೇಷದಿಂದ ಅರವಿಂದ ಜತ್ತಿ ದೂರು ನೀಡಿದ್ದಾರೆ. ಅಪರಾಧದ ಅಂಶಗಳಿಲ್ಲದಿರುವುದರಿಂದ ಎಫ್‌ಐಆರ್ ರದ್ದುಗೊಳಿಸಿವುಂತೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಬಸವ ಸಮಿತಿಯ ಅಕ್ರಮಗಳ ವಿರುದ್ಧ ಲೇಖನ ಬರೆದಿದ್ದೆ. ಆ ವೈಯಕ್ತಿಕ ದ್ವೇಷದಿಂದ ಅರವಿಂದ ಜತ್ತಿ ದೂರು ನೀಡಿದ್ದಾರೆ. ಸಿಎಂ, ಸಚಿವರ ಹೇಳಿಕೆಯಿಂದಾಗಿ ಪೊಲೀಸರ ಮೇಲೆ ಒತ್ತಡವಿದೆ. ಹೀಗಾಗಿ ಕಾನೂನು ದುರುಪಯೋಗಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲವೆಂದು ಉಲ್ಲೇಖಿಸಿದ್ದಾರೆ. ಅರ್ಜಿಯಲ್ಲಿ ದೂರುದಾರ ಅರವಿಂದ ಜತ್ತಿ ಮತ್ತು ಹೈಗ್ರೌಂಡ್ಸ್ ಠಾಣೆಯ ಪೊಲೀಸರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಪ್ರಸ್ತಾವಿತ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಂಶಗಳು ತಮ್ಮ ಸ್ವಂತ ಅಭಿಪ್ರಾಯವಲ್ಲ. ಅವು ಬಿ.ಎಲ್.ರೈಸ್ ಅವರ ‘ಮೈಸೂರು ಗೆಜೆಟಿಯರ್’, ಬಸವ ಪುರಾಣ ಹಾಗೂ ಡಾ.ಎಂ.ಎಂ.ಕಲ್ಬುರ್ಗಿ ಸೇರಿದಂತೆ ಹಲವು ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಆಧರಿಸಿದ್ದಾಗಿವೆ. ಐತಿಹಾಸಿಕ ಮತ್ತು ಸಾಹಿತ್ಯಿಕ ವಿಮರ್ಶೆ ನಡೆಸುವುದು ಸಂವಿಧಾನದ 19(1)(ಎ) ವಿಧಿಯಡಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತದೆ. ಬಸವಣ್ಣನವರನ್ನಾಗಲಿ ಅಥವಾ ಲಿಂಗಾಯತ ಸಮುದಾಯವನ್ನಾಗಲಿ ಅವಮಾನಿಸುವ ಉದ್ದೇಶ ತಮಗಿಲ್ಲ. ಬಸವ ಸಮಿತಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯ ದುರ್ಬಳಕೆ ಕುರಿತು ತಾವು ಬರೆದಿದ್ದ ಲೇಖನಕ್ಕೆ ಪ್ರತೀಕಾರವಾಗಿ ದೂರುದಾರರು ರಾಜಕೀಯ ಪ್ರಭಾವ ಬಳಸಿ ಈ ಸುಳ್ಳು ದೂರು ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಲುಕ್‌ಔಟ್ ನೋಟಿಸ್ ಆಧಾರದ ಮೇಲೆ ನವೆಂಬರ್ 21ರಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮ್ಮನ್ನು ಕೊಂದವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ವ್ಯಕ್ತಿಯೊಬ್ಬರು ಬಹಿರಂಗವಾಗಿ ಘೋಷಣೆ ಮಾಡಿದ್ದು, ಇದು ಸಂವಿಧಾನದ 21ನೇ ವಿಧಿಯ ಜೀವಿಸುವ ಹಕ್ಕಿಗೆ ಧಕ್ಕೆ ತಂದಿದೆ. ಸರ್ಕಾರದ ಮೂವರು ಸಚಿವರು ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧ ಆರೋಪ ಮಾಡಿರುವುದರಿಂದ ಹಾಗೂ ಮುಖ್ಯಮಂತ್ರಿಗಳು ಬಹಿರಂಗ ಹೇಳಿಕೆ ನೀಡಿರುವುದರಿಂದ ಪೊಲೀಸ್ ತನಿಖೆಯು ಒತ್ತಡಕ್ಕೆ ಒಳಗಾಗಿ ನಿಷ್ಪಕ್ಷಪಾತವಾಗಿ ನಡೆಯುವ ಸಾಧ್ಯತೆಯಿಲ್ಲ. ಅದ್ದರಿಂದ ತನ್ನ ವಿರುದ್ಧ ದಾಖಲಾಗಿರುವ ಎಫ್ಐಅರ್ಗೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಕಳೆದ 1-2 ವರ್ಷಗಳಿಂದ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ತಮ್ಮ ಲೇಖನಗಳನ್ನು ಕ್ರೋಢೀಕರಿಸಿ ರವಿ ಹಂಜಗಿಮಠ್ ಅವರು “ಬಸವ ಮಂಟಪ” ಎಂಬ ಕೃತಿ ರಚಿಸಿದ್ದು, ನ.5ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ಮುನ್ನ ನ.13ರಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. ಜತೆಗೆ, ‘ಲಿಂಗಾಯತ’ ಪದವನ್ನು ತಿರುಚಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನ.19ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.