ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕೇಸ್​ಗೆ ಪರಕಾಯ ಪ್ರವೇಶ ಮಾಡಿ ಜೀವ ತುಂಬಿದವರ್ಯಾರು?: ಸಿಟಿ ರವಿ ಪ್ರಶ್ನೆ

ಫೋಕ್ಸೋ ಕೇಸ್​ ಸುಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ. ಈ ವಿಚಾರವಾಗಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದ್ದು, ಏಕಾಏಕಿ 3 ತಿಂಗಳ ಕಾಲ ಇಲ್ಲದ ಜೀವ ಈಗ ಯಾಕೆ ಬಂತು? ಈ ಕೇಸ್​ ಮೇಲೆ ಪರಕಾಯ ಪ್ರವೇಶ ಮಾಡಿದವರು ಯಾರು ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕೇಸ್​ಗೆ ಪರಕಾಯ ಪ್ರವೇಶ ಮಾಡಿ ಜೀವ ತುಂಬಿದವರ್ಯಾರು?: ಸಿಟಿ ರವಿ ಪ್ರಶ್ನೆ
ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕೇಸ್​ಗೆ ಪರಕಾಯ ಪ್ರವೇಶ ಮಾಡಿ ಜೀವ ತುಂಬಿದವರ್ಯಾರು?: ಸಿಟಿ ರವಿ ಪ್ರಶ್ನೆ
Follow us
|

Updated on: Jun 14, 2024 | 3:44 PM

ಬೆಂಗಳೂರು, ಜೂನ್​ 14: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಅವರ ವಿರುದ್ಧದ ಪ್ರಕರಣದಲ್ಲಿ ಆ ಥರ ಏನೂ ನಡೆದಿಲ್ಲ ಎಂದು ಪೊಲೀಸರು ತಿಳಿಸಿ, ಬಿ ರಿಪೋರ್ಟ್ ಹಾಕುವ ಹಂತದಲ್ಲಿರುವಾಗ ಏಕಾಏಕಿ ಈ ಕೇಸ್​ಗೆ ಪರಕಾಯ ಪ್ರವೇಶ ಮಾಡಿ ಜೀವ ಕೊಟ್ಟವರು ಯಾರು? ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಪ್ರಶ್ನಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ಈ ಕೇಸ್​ನ್ನು ಬಳಸುವ ಅನುಮಾನ ವ್ಯಕ್ತವಾಗಿದೆ. ಹಾಗಿಲ್ಲದೆ ಇದ್ದರೆ 3 ತಿಂಗಳ ಕಾಲ ಇಲ್ಲದ ಜೀವ ಈಗ ಯಾಕೆ ಬಂತು? ಈ ಕೇಸ್​ ಮೇಲೆ ಪರಕಾಯ ಪ್ರವೇಶ ಮಾಡಿದವರು ಯಾರು? ದೂರುದಾರೆಯು ಈ ಥರ 50ಕ್ಕೂ ಹೆಚ್ಚು ಗಣ್ಯರ ಮೇಲೆ ದೂರು ನೀಡಿದ್ದರು ಎಂದು ಗೃಹ ಸಚಿವರು ಸಾರ್ವಜನಿಕವಾಗಿ ಹೇಳಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ದೂರಿಗೆ ಸಂಬಂಧಿಸಿ ಸರಕಾರದ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಾರ್ಚ್ 14ರಂದು ಅವರ ಮೇಲೆ ದೂರು ದಾಖಲಾಗಿತ್ತು. ಫೆಬ್ರವರಿ 2ರಂದು ಈ ಪ್ರಕರಣ ನಡೆದಿರುವುದಾಗಿ ಆರೋಪಿಸಲಾಗಿದೆ. ಯಡಿಯೂರಪ್ಪ ಅವರು ಸಿಐಡಿ ಮುಂದೆ ಏಪ್ರಿಲ್ 12ರಂದು ಹಾಜರಾಗಿ ಹೇಳಿಕೆಯನ್ನೂ ನೀಡಿದ್ದಾರೆ. ಇದೀಗ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಇಂದು ಹೈಕೋರ್ಟ್ ಮುಂದೆ ಮೊಕದ್ದಮೆ ಬರಲಿದ್ದು, ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದರು. ಯಡಿಯೂರಪ್ಪ ಅವರ ಮೇಲಿನ ಮೊಕದ್ದಮೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರವು ರಾಜಕೀಯದ ದೃಷ್ಟಿಯಿಂದ ನೋಡುತ್ತಿದೆ ಎಂದು ಆರೋಪಿಸಿದರು.

ಸರಕಾರದ ನಿಲುವು ಬದಲಾಗಲು ಕಾರಣ ಏನು?

ಗೃಹ ಸಚಿವರ ಅಂದಿನ ಹೇಳಿಕೆಗೂ, ಇಂದಿನ ಹೇಳಿಕೆಗೂ ಬಹಳಷ್ಟು ವ್ಯತ್ಯಾಸ ಇದೆ. ಅವತ್ತು ಅವರು ದೂರುದಾರರ ವ್ಯಕ್ತಿತ್ವವನ್ನೇ ಅನಾವರಣಗೊಳಿಸಿದ್ದರು. ಇಂದು ಅವರು, ಅಗತ್ಯ ಇದ್ದರೆ ಬಂಧಿಸುತ್ತೇವೆ ಎಂದಿದ್ದಾರೆ. ಸರಕಾರದ ನಿಲುವು ಬದಲಾಗಲು ಕಾರಣ ಏನು? ಲೋಕಸಭಾ ಚುನಾವಣೆಯ ಸೋಲು ಕಾರಣವೇ? ಸಿಎಂ, ಉಪ ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ಸೋತಿದ್ದು ಒಂದು ಕಾರಣ ಇರಬಹುದೇ? ಉಪ ಮುಖ್ಯಮಂತ್ರಿಯವರ ಸೋದರನ ಸೋಲಿನ ಆಘಾತ ಈ ರೀತಿ ನಿಲುವು ಬದಲಾಗಲು ಕಾರಣವೇ? ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪನವರನ್ನು ಕೆಣಕಲು ಹೋದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ: ಬಿಜೆಪಿ ಎಚ್ಚರಿಕೆ!

ಕೈಕೊಟ್ಟ ಗ್ಯಾರಂಟಿ ಇದಕ್ಕೆ ಕಾರಣವಾಯಿತೇ? ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ, ಅದರಿಂದ ಆಗಿರುವ ಮುಖಭಂಗ, ಆ ಲೂಟಿಯನ್ನು ಮುಚ್ಚಿ ಹಾಕಲು ಸಂಚು ನಡೆದಿದ್ದು, ಬಿಜೆಪಿ ಅದನ್ನು ಬಯಲಿಗೆ ಎಳೆದುದು, ಅದರಿಂದ ಸಚಿವ ರಾಜೀನಾಮೆ ಕೊಡಲು ಕಾರಣವಾದುದು. ಈ ಹತಾಶೆಯಿಂದ ಹೀಗೆ ಮಾಡುತ್ತಿರಬಹುದೇ? ರಾಹುಲ್ ಗಾಂಧಿ, ಸುರ್ಜೇವಾಲಾ ಒತ್ತಡ ಇದರ ಹಿಂದೆ ಇದೆಯೇ  ಎಂದಿದ್ದಾರೆ.

ನಮ್ಮ ಮೇಲಿನ ಒಂದು ಸುಳ್ಳು ಆರೋಪ ಸಂಬಂಧಿತ ಕೇಸ್​ಗೆ ಸಿಎಂ, ಡಿಸಿಎಂ, ರಾಹುಲ್ ಗಾಂಧಿಯವರು ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲಬೇಕಾಯಿತು. ಶೇ 40 ಆರೋಪ ಸಾಬೀತು ಮಾಡಲು ಅವರಿಂದ ಅಸಾಧ್ಯ. ಅವರಿಗೆ ಶಿಕ್ಷೆ ಆಗುವ ಸಾಧ್ಯತೆಯೂ ಇದೆ. ಬಹುಶಃ ಆ ಕಾರಣಕ್ಕಾಗಿ ಹತಾಶೆಯಿಂದ ಯಡಿಯೂರಪ್ಪನವರ ಮೇಲೆ ರಾಜಕೀಯ ದುರುದ್ದೇಶದಿಂದ ಸೇಡು ತೀರಿಸಿಕೊಳ್ಳಬೇಕು ಅಥವಾ ಮಾನಸಿಕವಾಗಿ ಕುಗ್ಗಿಸಬೇಕೆಂದು ಈ ಸಂಚು ಮಾಡಿದ್ದಾರೇನೋ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್​: ಇದು ಹಗೆತನ ರಾಜಕೀಯವಲ್ಲವೇ? ಸಿಎಂಗೆ ಬಿಜೆಪಿ ನಾಯಕರ ಪ್ರಶ್ನೆ

ಒಬ್ಬ ಪ್ರಭಾವಿ ಸಚಿವರು ಈ ಪ್ರಕರಣ ಜೀವ ಪಡೆಯಲು ಕಾರಣರಾಗಿದ್ದಾರೆ ಎಂಬ ಮಾಹಿತಿ ಕೂಡ ಅಧಿಕಾರಿಗಳ ಮೂಲಕ ಬಂದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲು ನಮ್ಮ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ದುರುದ್ದೇಶದಿಂದ ಹೀಗೆ ಮಾಡಿದರೆ ಅದರ ಪರಿಣಾಮ ನಿಮಗೆ ತಿರುಗುಬಾಣ ಆಗಲಿದೆ ಎಂದು ಎಚ್ಚರಿಸಿದರು. ಇದರ ಪರಿಣಾಮವಾಗಿ ರಾಜಕೀಯ ಲಾಭ ಆಗದು; ರಾಜಕೀಯ ನಷ್ಟ ಆಗಲಿದೆ. ತಪ್ಪು ಮಾಡಿದರೆ ಭಯಪಡಬೇಕು. ತಪ್ಪೇ ಇಲ್ಲದಿದ್ದರೆ ಭಯ ಯಾಕೆ?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ