AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕಪ್ ಡೆತ್, ಪೊಲೀಸ್ ದೌರ್ಜನ್ಯಕ್ಕೆ ಬ್ರೇಕ್: ಐತಿಹಾಸಿಕ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ ಡಿಜಿಪಿ ಡಾ ಎಂಎ ಸಲೀಂ

ರಾಜ್ಯದಲ್ಲಿ ಲಾಕಪ್ ಡೆತ್ ಹಾಗೂ ಪೊಲೀಸ್ ದೌರ್ಜನ್ಯಗಳನ್ನು ತಡೆಗಟ್ಟಲು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಬಿಎನ್‌ಎಸ್ಎಸ್ ಕಾಯ್ದೆಯಡಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ್ದಾರೆ. ನಿಯಮ ಮೀರಿ ಸಾಕ್ಷ್ಯನಾಶಕ್ಕೆ ಯತ್ನಿಸುವ ಅಧಿಕಾರಿಗಳ್ನೇ ನೇರ ಹೊಣೆ ಮಾಡಲಾಗುವುದು ಮತ್ತು ಕಠಿಣ ಶಿಕ್ಷೆ ನೀಡಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

ಲಾಕಪ್ ಡೆತ್, ಪೊಲೀಸ್ ದೌರ್ಜನ್ಯಕ್ಕೆ ಬ್ರೇಕ್: ಐತಿಹಾಸಿಕ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ ಡಿಜಿಪಿ ಡಾ ಎಂಎ ಸಲೀಂ
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂImage Credit source: tv9
ರಾಚಪ್ಪಾಜಿ ನಾಯ್ಕ್
| Edited By: |

Updated on: May 18, 2026 | 10:21 AM

Share

ಬೆಂಗಳೂರು, ಮೇ 18: ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯಗಳು ಹಾಗೂ ಕಸ್ಟೋಡಿಯಲ್ ಡೆತ್ (Lockup Death) ಪ್ರಕರಣಗಳಿಗೆ ಶಾಶ್ವತ ಬ್ರೇಕ್ ಹಾಕಲು ಕರ್ನಾಟಕ ಪೊಲೀಸ್ (Karnataka Police) ಇಲಾಖೆ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ಸ್ಥಳೀಯ ಪೊಲೀಸರಿಂದ ನಡೆಯಬಹುದಾದ ತನಿಖಾ ವೈಫಲ್ಯ ಹಾಗೂ ಸಾಕ್ಷ್ಯನಾಶದ ಯತ್ನಗಳನ್ನು ತಡೆಯುವ ಸಲುವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (DG&IGP) ಡಾ. ಎಂ.ಎ. ಸಲೀಂ ಅವರು ‘ಸ್ಟ್ಯಾಂಡಿಂಗ್ ಆರ್ಡರ್ – 1060’ ಜಾರಿಗೆ ತಂದಿದ್ದಾರೆ. ಹೊಸ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)’ ಅಡಿಯಲ್ಲಿ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಮುಖ್ಯಾಂಶಗಳು

  • ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ ನಡೆದ ತಕ್ಷಣವೇ ಸ್ಥಳೀಯ ಠಾಣಾಧಿಕಾರಿ ಯಾವುದೇ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು.
  • ಘಟನೆ ನಡೆದ ತಕ್ಷಣವೇ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು.
  • ಸಂತ್ರಸ್ತರ ಹೇಳಿಕೆಗಳು ಮತ್ತು ಶವಪರೀಕ್ಷೆಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಆಡಿಯೋ-ವಿಡಿಯೋ ಮೂಲಕ ರೆಕಾರ್ಡ್ ಮಾಡಬೇಕು.

ಖಡಕ್ ನಿಯಮಗಳು ಮತ್ತು ಕಟ್ಟುನಿಟ್ಟಿನ ಕ್ರಮ

ಹೊಸ ಸ್ಟ್ಯಾಂಡಿಂಗ್ ಆರ್ಡರ್ ಪ್ರಕಾರ, ಕಸ್ಟಡಿಯಲ್ಲಿ ದೌರ್ಜನ್ಯ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಬಿಎನ್‌ಎಸ್ಎಸ್ (BNSS) ಸೆಕ್ಷನ್ 103 ಮತ್ತು 185ರ ಅಡಿಯಲ್ಲಿ ಕಡ್ಡಾಯವಾಗಿ ಸ್ಪಾಟ್ ಮಹಜರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತನಿಖೆಯ ವೇಳೆ ಸ್ಥಳೀಯ ಪೊಲೀಸರು ಯಾವುದೇ ರೀತಿಯ ಪ್ರಭಾವ ಬೀರದಂತೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸದಂತೆ ತಡೆಯಲು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಆದೇಶಿಸಲಾಗಿದೆ.

ಒಂದು ವೇಳೆ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟರೆ (ಲಾಕಪ್ ಡೆತ್), ತಕ್ಷಣವೇ ಸಂಬಂಧಪಟ್ಟ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಅಧಿಕೃತ ಮಾಹಿತಿ ನೀಡಿ ಇನ್‌ಕ್ವೆಸ್ಟ್ ಹಾಗೂ ನ್ಯಾಯಾಂಗ ತನಿಖೆಗೆ ಕೋರಬೇಕು. ಶವಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಿಸುವುದು ಕಡ್ಡಾಯವಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿ (CID) ಗೆ ವಹಿಸಿದ ಬಳಿಕ, ಸಿಐಡಿ ಅಧಿಕಾರಿಗಳು ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಅನ್ನು ಕೂಲಂಕಷವಾಗಿ ಮರುಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ: ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!

ಇಲಾಖೆಯ ಘನತೆಗೆ ಕುಂದು ತರುವ ಇಂತಹ ಪ್ರಕರಣಗಳಲ್ಲಿ ಯಾವುದೇ ಹಂತದಲ್ಲೂ ನಿಯಮ ಉಲ್ಲಂಘನೆಯಾದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಡಾ. ಎಂ.ಎ. ಸಲೀಂ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Rachappaji Naik S
Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More